ಕುಂದಾಪುರ: ಇಲ್ಲಿನ ಕುಂದೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆಯುತ್ತಿದ್ದ ಚರಂಡಿ ಕಾಂಕ್ರೀಟ್ ಕಾಮಗಾರಿ ವಿರುದ್ಧ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿವಾದದ ಸುತ್ತ
ಮೊದಲಿಂದಲೂ ಒಂದಲ್ಲ ಒಂದು ವಿವಾದವನ್ನು ಎಳೆದು ಹಾಕಿ ಕೊಳ್ಳುತ್ತಿರುವ ಈ ಕಾಮಗಾರಿ ಈಗ ಮತ್ತೂಮ್ಮೆ ಸುದ್ದಿಯಾಗಿದೆ. ಕಾಮಗಾರಿ ಅಂದಾಜುಪಟ್ಟಿ ತಯಾರಿಸುವ ಮುನ್ನ ಸ್ಥಳೀಯರ ವಿರೋಧ ಬಂತು. ಆ ಬಳಿಕ ಮಹಾದ್ವಾರ ಹೊಸದಾಗಿ ಮಾಡುವುದು ಎಂದಾಗ ಹೈಕೋರ್ಟ್ ಆದೇಶದ ನೆನಪು ಬಂತು. ಹೊಸ ದ್ವಾರಗಳನ್ನು ನಿರ್ಮಿಸಬಾರದು ಎಂಬ ಆದೇಶ ಉಲ್ಲಂಘನೆಯ ಭಯ ಬಂತು. ಅದಾದ ಬಳಿಕ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದಾಯಿತು. ಅದಾದ ಬಳಿಕ ಮರಗಳನ್ನು ಕಡಿದ ವಿವಾದ ಆರಂಭವಾಯಿತು. ಅದರ ಬಳಿಕ ಭಾರೀ ಮೊತ್ತ ವಿನಿಯೋಗಿಸಲಾಗುತ್ತಿದೆ, ಅವ್ಯವಹಾರ ನಡೆಯುತ್ತಿದೆ ಎಂಬ ಸಂದೇಶ ಹರಿದಾಡತೊಡಗಿತು. ಪುರಸಭೆ ಸಾಮಾನ್ಯ ಸಭೆಯಲ್ಲೂ ಚರ್ಚೆಯಾಯಿತು. ಎಲ್ಲ ಆಗಿ ಒಂದು ಹಂತದ ಕಾಮಗಾರಿ ಆಗುವಾಗ ಲೋಕಾಯುಕ್ತಕ್ಕೆ ದೂರು ಹೋಯಿತು.
ಸಾರ್ವಜನಿಕರಿಂದ ಆಕ್ಷೇಪ
ಎರಡನೇ ಹಂತ ಕಾಮಗಾರಿ ಟೆಂಡರ್ ಆಗಿ ಮಂದಗತಿಯಲ್ಲಿ ಸಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ರಸ್ತೆ ಬದಿಯ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಚರಂಡಿಯ ಮೇಲೆ ಹಾಸು ಹಾಕುತ್ತಿರುವ ಕಾಂಕ್ರೀಟ್‌ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರಂಡಿಯ ಮೇಲ್ ಹಾಸು ಕೇವಲ ಸಿಮೆಂಟ್ ಮತ್ತು ಜಲ್ಲಿ ಮಿಕ್ಸ್ ಮಾಡಿ ಹಾಕಲಾಗಿದೆ. ಭದ್ರತೆಗೆ ಕ್ರಶರ್ ಅಥವಾ ಸ್ಯಾಂಡ್ ಬಳಕೆ ಮಾಡಿಲ್ಲ. ಕತ್ತಲೆಯಲ್ಲಿ ಕೆಲಸ ಮಾಡುವ ಉದ್ದೇಶ ಅರ್ಥ ವಾಗುತ್ತಿಲ್ಲ. ಸ್ಯಾಂಡ್ಸ್ ಮಿಕ್ಸರ್ ಹಾಕದೆ ಕಾಟಾಚಾರಕ್ಕೆ ಕೆಲಸ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಸ್ಥಳೀಯರು ಪುರಸಭೆ ಅಧ್ಯಕ್ಷರು ಮತ್ತು ಸಂಬಂಧಿ ತರಿಗೆ ಮಾಹಿತಿ ನೀಡಿದರು.
ನರಕ ಸೃಷ್ಟಿ!
ಕುಂದೇಶ್ವರ ರಸ್ತೆಯ ಅಭಿವೃದ್ಧಿ ಹೆಸರಿನಲ್ಲಿ ನರಕ ಸೃಷ್ಟಿಸಲಾಗಿದೆ. ಮೊದಲಿಗೆ ಇಂಟರ್‌ಲಾಕ್ ಅಳವಡಿಕೆ ನೆಪದಲ್ಲಿ ಬೆಳೆದು ನಿಂತ ಮರಗಳ ಕಟಾವು ಮಾಡಿದರು. ಲೋಕಾಯುಕ್ತ ದೂರಿನ ಬಳಿಕ ದ್ವಿತೀಯ ಹಂತದ ಕಾಮಗಾರಿ ಆರಂಭಿಸಿದ್ದಾರೆ. ಕತ್ತಲೆಯಲ್ಲಿಯೂ ಕಾಮಗಾರಿ ನಡೆಯುತ್ತಿದೆ. ಕಾಂಕ್ರೀಟ್ ಅಭದ್ರವಾಗಿ ಮಾಡಲಾಗುತ್ತಿದೆ. ರಸ್ತೆಯಂಚಿನಲ್ಲಿ ಸಾಕಷ್ಟು ಮನೆಗಳಿದ್ದು ಗೇಟ್ ಎದುರೇ ರಸ್ತೆಯಿದೆ. ವಾಹನ ದಾಟಿದರೆ ಚರಂಡಿ ಮೇಲ್ ಹಾಸು ಕುಸಿಯುವಂತೆ ಕೆಲಸ ನಿರ್ವಹಿಸಲಾಗುತ್ತಿದೆ. ಸದ್ಯ ಕಾಮಗಾರಿ ತಡೆಹಿಡಿದಿದ್ದೇವೆ ಎಂದಿದ್ದಾರೆ ಸ್ಥಳೀಯರು.
ಕುಂದೇಶ್ವರ ದೇವಸ್ಥಾನದ ರಸ್ತೆಯ ಒಳ ಚರಂಡಿ ಕೆಲಸವನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸದೆ, ಮಾಡಿರುವುದು ಕಳಪೆ ಕಾಮಗಾರಿ ಎಂದು ಸ್ಥಳೀಯರಾದ ಕುಂದೇಶ್ವರ ಫ್ರೆಂಡ್ಸ್‌ನವರು ಚರಂಡಿಯ ಮೇಲೆ ಹಾಕಿದ ಮುಚ್ಚಿಗೆಯನ್ನು ತೆಗೆಸಿದ್ದಾರೆ. ಸರಿಯಾಗಿ ಕೆಲಸ ನಿರ್ವಹಿಸಿ, ಇಲ್ಲವಾದಲ್ಲಿ ಕೆಲಸ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಬೆದರಿದ ಕಾರ್ಮಿಕರು ಈಗಾಗಲೆ ಹಾಕಿದ ಕಾಂಕ್ರೀಟ್ ತೆಗೆದು ಪುನರಪಿ ಸ್ಯಾಂಡ್ ಮಿಕ್ಸರ್‌ನೊಂದಿಗೆ ಕಾಂಕ್ರೀಟ್ ಹಾಕಲು ತಯಾರಿ ಆರಂಭಿಸಿದರು.