Advertisement

ಮನೆ, ಶೌಚಾಲಯವಿಲ್ಲದ ಕಾರ್ಮಿಕ ಕುಟುಂಬ

10:02 AM Aug 13, 2018 | |

ಸುಳ್ಯ: ಸರಕಾರ ಬಡವರಿಗೆ ಎಲ್ಲ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವುದಾಗಿ ಹೇಳುತ್ತದೆ. ನಮ್ಮದು ಗುಡಿಸಲು ಮುಕ್ತ ರಾಜ್ಯ ಎಂದು ಘೋಷಿಸುತ್ತದೆ. ವಾಸ್ತವದಲ್ಲಿ ಅದೆಷ್ಟೋ ಕುಟುಂಬಗಳು ಇಂದಿಗೂ ಸೂರಿಲ್ಲದೆ ಶೋಚನೀಯ ಸ್ಥಿತಿಯಲ್ಲಿವೆ.

Advertisement

ಇಂತಹ ಕುಟುಂಬಗಳ ಸಾಲಿನಲ್ಲಿ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮಾವಿನ ಪಳ್ಳ ರಾಮಣ್ಣ ನಾಯ್ಕ ಅವರ ಕುಟುಂಬವೂ ಸೇರಿದೆ. ಇಲ್ಲಿನ ಮುಖ್ಯ ರಸ್ತೆ ಬದಿಯಲ್ಲಿ ರಾಮಣ್ಣ ನಾಯ್ಕ ಪತ್ನಿ ಮತ್ತು ಮಗಳ ಜತೆ ವಾಸವಿದ್ದಾರೆ. ಇದುವರೆಗೆ ಯಾವುದೇ ಸೌಲಭ್ಯ ದೊರಕದೆ, ಶೋಚನೀಯ ಸ್ಥಿತಿಯಲ್ಲಿ ಕುಟುಂಬ ದಿನಗಳನ್ನು ಕಳೆಯುತ್ತಿದೆ.

ಮೂಲತಃ ಪಾಣಾಜೆಯವರಾದ ರಾಮಣ್ಣ ಅವರ ತಂದೆ ಕೂಲಿ ಕೆಲಸಕ್ಕೆಂದು ಪೆರಾಜೆಗೆ ಬಂದು ನೆಲೆಸಿದ್ದರು. ರಾಮಣ್ಣ ಅವರೂ ಕೆಲಸ ಹುಡುಕುತ್ತ ಊರೂರು ಸುತ್ತಿ ಅಜ್ಜಾವರ ರಸ್ತೆ ಬದಿ ಗುಡಿಸಲು ನಿರ್ಮಿಸಿಕೊಂಡು ವಾಸ್ತವ್ಯ ಆರಂಭಿಸಿದ್ದರು. ಸ್ಥಳೀಯರೇ ಆದ ಲಲಿತಾ ಅವರನ್ನು ಮದುವೆಯಾದರು. ಹದಿನಾರು ವರ್ಷಗಳಿಂದ ಹಕ್ಕಿ ಗೂಡಿನಂತಹ ಚಿಕ್ಕ ಗುಡಿಸಲಿನಲ್ಲಿ ಇವರ ವಾಸ. ಈ ದಂಪತಿಯ ಪುತ್ರಿ ಪ್ರೌಢಶಾಲೆ ಕಲಿಯುತ್ತಿದ್ದಾರೆ.

ಛಾವಣಿಗೆ ಟಾರ್ಪಲ್‌
ಗರಿಗಳ ತಟ್ಟಿ ಮಡಲಿನಿಂದ ನಿರ್ಮಿಸಿದ ಗುಡಿಸಲಿಗೆ ಛಾವಣಿ ಬದಲು ನೀರು ಸೋರದಂತೆ ಪ್ಲಾಸ್ಟಿಕ್‌ ಟಾರ್ಪಲ್‌ ಹಾಕಿಕೊಂಡಿದ್ದಾರೆ. ಸುತ್ತ ತಟ್ಟಿ ಬಿಟ್ಟರೆ ಯಾವುದೇ ಸುರಕ್ಷತೆಯ ಗೋಡೆಗಳಿಲ್ಲ. ಸ್ನಾನಕ್ಕೆ, ಶೌಚಾಲಯಕ್ಕೆ ಪ್ರತ್ಯೇಕ ವ್ಯವಸ್ಥೆಯಿಲ್ಲ. ಸಾರ್ವಜನಿಕ ಸ್ಥಳದಲ್ಲೇ ಪೂರೈಸಿಕೊಳ್ಳಬೇಕು. ರಸ್ತೆ ಬದಿಯೇ ಮನೆ ಇರುವುದರಿಂದ ಸಾರ್ವಜನಿಕರು ಓಡಾಡುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ರಾಮಣ್ಣ ಅವರ ಪತ್ನಿ, ಪುತ್ರಿ ತೀರಾ ಮುಜುಗರ ಅನುಭವಿಸುತ್ತಾರೆ.

ಕತ್ತಲಾಗುವುದನ್ನು ಕಾಯಬೇಕು!
ತಾಯಿ ಮತ್ತು ಪುತ್ರಿ ಕತ್ತಲಾಗುವ ತನಕ ಕಾದು ಬಳಿಕವೇ ಸ್ನಾನ, ಶೌಚ ಇತ್ಯಾದಿ ಪೂರೈಸಿಕೊಳ್ಳಬೇಕು. ಬೆಳಕು, ನೀರಿನ ವ್ಯವಸ್ಥೆಯೂ ಈ ಗುಡಿಸಲಿಗಿಲ್ಲ.

Advertisement

ವ್ಯವಸ್ಥೆ ಕಲ್ಪಿಸುತ್ತೇವೆ
ಅಜ್ಜಾವರ ಗ್ರಾಮದ ಬೇಲ್ಯ ಎಂಬಲ್ಲಿ ನಿವೇಶನ ರಹಿತ 70 ಕುಟುಂಬಗಳಿಗೆ ಜಾಗ ಗುರುತಿಸಲಾಗಿದೆ. ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ರಾಮಣ್ಣ ನಾಯ್ಕ ಅವರನ್ನು ಸೇರಿಸಿಕೊಂಡು ಜಾಗ ಒದಗಿಸಲಾಗುವುದು. ಬಸವ ವಸತಿ ಯೋಜನೆಯಲ್ಲಿ ಮನೆ ಕೊಡಿಸಲೂ ಕ್ರಮ ಕೈಗೊಳ್ಳಲಾಗುವುದು.
– ಎ. ಬೀನಾ ಕರುಣಾಕರ
ಅಜ್ಜಾವರ ಗ್ರಾ.ಪಂ. ಅಧ್ಯಕ್ಷೆ 

ಭರವಸೆ ಸಿಕ್ಕಿದೆ
ಯಾವುದಾದರೂ ಒಂದು ಯೋಜನೆಯಲ್ಲಿ ಜಾಗ ಮತ್ತು ವಸತಿ ನೀಡಿ ಎಂದು ಪಂಚಾಯತ್‌ಗೆ ಅರ್ಜಿ ಸಲ್ಲಿಸಿರುವೆ. ಭರವಸೆ ದೊರಕಿದೆ. ಇದುವರೆಗೆ ಸವಲತ್ತು ದೊರಕಿಲ್ಲ.
   – ರಾಮಣ್ಣ ನಾಯ್ಕ
    ಸೌಲಭ್ಯ ವಂಚಿತರು

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next