ಬೆಂಗಳೂರು: “ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ’ (ಬಿಎಂಟಿಸಿ) ಯಲ್ಲಿ ಸೇವೆ ಸಲ್ಲಿಸುತ್ತಿರುವ ಗರ್ಭಿಣಿ ಮಹಿಳಾ ಕಂಡಕ್ಟರ್‌ಗಳಿಗೆ ಹೆರಿಗೆಗೂ ಮುನ್ನ ಹಾಗೂ ಅನಂತರ 6 ತಿಂಗಳವರೆಗೆ ಕಚೇರಿ ಕೆಲಸಕ್ಕೆ ನಿಯೋಜಿಸುವಂತೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ನಿರ್ದೇಶನ ನೀಡಿದೆ.
ಈ ಕುರಿತು ಬಿಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಂಚಾಟೆ ಸಂಜೀವ್ ಕುಮಾರ್ ಅವರು, ಈ ಸಂಬಂಧ ಅಗತ್ಯ ಕ್ರಮ ಜರುಗಿಸಬೇಕು, ಇಲ್ಲವಾದಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಸೂಕ್ತ ನಿರ್ದೇಶನಗಳನ್ನು ನೀಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ.
ಮಹಿಳಾ ಕಂಡಕ್ಟರ್‌ಗಳು ತಾವು ಗರ್ಭಧರಿಸಿದ ಬಗ್ಗೆ ಅಗತ್ಯ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಬೇಕು. ಅದನ್ನು ಆಧರಿಸಿ ಅವರಿಗೆ ಹೆರಿಗೆಗೂ ಮುನ್ನ ಹಾಗೂ ಅದರ ನಂತರ ಕರ್ನಾಟಕ ನಾಗರಿಕ ಸೇವಾ ನಿಯಮ 135ರ ಪ್ರಕಾರ ಆರು ತಿಂಗಳವರೆಗೆ ಕಚೇರಿ ಕೆಲಸಕ್ಕೆ ನಿಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬಿಎಂಟಿಸಿ ಮಹಿಳಾ ಕಂಡಕ್ಟರ್‌ಗಳಿಗೆ ಅದರಲ್ಲೂ ಮುಖ್ಯವಾಗಿ ಗರ್ಭಿಣಿಯರಿಗೆ ಕೆಲಸದ ವೇಳೆಯಲ್ಲಿ ಸಾಕಷ್ಟು ಮಾನಸಿಕ ಹಾಗೂ ದೈಹಿಕ ಕಿರುಕುಳ ಆಗುತ್ತಿರುವ ಬಗ್ಗೆ ಪ್ರಾಧಿಕಾರಕ್ಕೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಬಿಎಂಟಿಸಿಗೆ ಈ ನಿರ್ದೇಶನ ನೀಡಲಾಗಿದೆ.
ಗರ್ಭಿಣಿಯರಿಗೆ ಹೆಚ್ಚು ಓಡಾಟ ಮಾಡಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಮಹಿಳಾ ಕಂಡಕ್ಟರ್‌ಗಳು ಬೆಳಿಗ್ಗೆಯಿಂದ ರಾತ್ರಿವರೆಗೆ ಬಸ್‌ಗಳಲ್ಲಿ ಓಡಾಟ ಮಾಡುವ ಅನಿವಾರ್ಯತೆಯಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಮಗು ಮತ್ತು ತಾಯಿಯ ಸುರಕ್ಷತೆಗೆ ವಿರುದ್ಧವಾಗಿದೆ. ಹಾಗಾಗಿ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರಾಧಿಕಾರದ ಪತ್ರದಲ್ಲಿ ಉಲ್ಲೇಖೀಸಲಾಗಿದೆ.