Advertisement

ಶ್ರಮಿಕರು-ಕಾರ್ಮಿಕರಿಗೆ ಜಾಗತೀಕರಣದ ಪೆಟ್ಟು

12:54 PM May 02, 2017 | Team Udayavani |

ದಾವಣಗೆರೆ: ಬಂಡವಾಳಶಾಹಿ ಜಾಗತೀಕರಣ ನೀತಿಯಿಂದಾಗಿ ಶ್ರಮಿಕರು, ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ| ಸಿದ್ದನಗೌಡ ಪಾಟೀಲ್‌ ಆತಂಕ ವ್ಯಕ್ತಪಪಡಿಸಿದ್ದಾರೆ. 

Advertisement

ಭಾರತ ಕಮ್ಯುನಿಸ್ಟ್‌ ಪಕ್ಷ, ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌(ಎಐಟಿಯುಸಿ) ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೇ ದಿನಾಚರಣೆ, ಹುತಾತ್ಮರ 47ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಜಾಗತೀಕರಣದಲ್ಲಿ ಕಾಯಕದ ಜಾಗತೀಕರಣ ಆಗುತ್ತಿಲ್ಲ.

ಸರ್ಕಾರಗಳು ರೂಪಿಸುತ್ತಿರುವ ಕಾನೂನು ಕಾರ್ಮಿಕ ವರ್ಗವನ್ನು ದುಡಿಮೆಯಿಂದ ದೂರ ಮಾಡುತ್ತಿವೆ. ಕೆಲಸ ಇಲ್ಲದಂತಾಗಿ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರೈತ  ಸಮೂಹ ಸಹ ಜಮೀನು, ಕೆಲಸ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು. 

ಜವಳಿ ಒಳಗೊಂಡಂತೆ ಅನೇಕ ಮಿಲ್‌, ಕೈಗಾರಿಕೆಗಳು ಮುಚ್ಚಿ ಹೋಗಲಿಕ್ಕೆ ಕಾರ್ಮಿಕರ ಹೋರಾಟ, ಚಳವಳಿ ಕಾರಣ ಅಲ್ಲವೇ ಅಲ್ಲ. ಬದಲಿಗೆ ಬಹು ರಾಷ್ಟ್ರೀಯ ಕಂಪನಿಗಳಿಂದ ಪಕ್ಷಕ್ಕೆ ವಂತಿಗೆ ಪಡೆದು, ಅದರ ಋಣ ತೀರಸಲಿಕ್ಕಾಗಿ ಸರ್ಕಾರಗಳು ರೂಪಿಸುತ್ತಿರುವ ನೀತಿಗಳೇ ಕಾರಣ. 

ದಾವಣಗೆರೆಯಲ್ಲಿ ಜವಳಿ ಮಿಲ್‌ ಮುಚ್ಚಿದಂತೆ ಹುಬ್ಬಳ್ಳಿ, ಬೆಂಗಳೂರನಲ್ಲಿ ಸಹ ಅನೇಕ ಕೈಗಾರಿಕೆ ಮುಚ್ಚಲ್ಪಟ್ಟವು. ಅಲ್ಲಿ ದಾವಣಗೆರೆಯಂತೆ ಕಾರ್ಮಿಕರ ಚಳವಳಿ ಇರಲಿಲ್ಲ. ಕೈಗಾರಿಕೆ ಮುಚ್ಚಲಿಕ್ಕೆ ಕಾರ್ಮಿಕರು ಕಾರಣ ಅಲ್ಲ ಎಂಬುದನ್ನು ಸಮರ್ಥಿಸಿಕೊಂಡರು. 

Advertisement

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ  ಅವಧಿಯಲ್ಲಿ ಜಾಗತೀಕರಣ ನೀತಿ ಪ್ರವೇಶಕ್ಕೆ ಮುಕ್ತ ಆಹ್ವಾನ ನೀಡಿದ ಡಾ| ಮನಮೋಹನ್‌ಸಿಂಗ್‌ ಫಸ್ಟ್‌ ಗೇರ್‌ನಲ್ಲಿ ನೀತಿ ಜಾರಿಗೆ ತಂದರೆ, ಈಗಿನ ಪ್ರಧಾನಿ ನರೇಂದ್ರ ಮೋದಿ ಟಾಪ್‌ ಗೇರ್‌ನಲ್ಲಿ ಜಾಗತೀಕರಣ ನೀತಿ ಜಾರಿಗೆ ತರುತ್ತಿದ್ದಾರೆ.

ಭೂ ಸ್ವಾಧೀನ ಕಾಯ್ದೆ ಜಾರಿಗೊಳಿಸುವ ಮೂಲಕ ರೈತರ ಜಮೀನು ಕಿತ್ತುಕೊಂಡು ವಿದೇಶಿ ಕಂಪನಿಗಳ ಕೃಷಿ ಚಟುವಟಿಕೆಗೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ದೇಶದ ಕೃಷಿ ಕ್ಷೇತ್ರ ಪ್ರವೇಶಿಸಲಿವೆ. ದೇಶದ ರೈತರು ಕೆಲಸ ಕಳೆದುಕೊಂಡು ಬೀದಿಪಾಲಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. 2011ರ ಜನಗಣತಿ ಪ್ರಕಾರ ಶೇ.49ರಷ್ಟು ಜನರು ದೇಶದ್ಯಾಂತ ಕೃಷಿ ಅವಲಂಬಿಸಿದ್ದಾರೆ.

ಸಣ್ಣ ಪುಟ್ಟ ಕೆಲಸಕ್ಕೂ ಯಂತ್ರೋಪಕರಣ ಬಳಕೆ ಪ್ರಾರಂಭಿಸುವ ಮೂಲಕ ಜನರ ದುಡಿಮೆ ಕಿತ್ತುಕೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ 75 ಕೋಟಿಯಷ್ಟು ಜನರು ನಿರುದ್ಯೋಗಿಗಳಾಗುವುದು ಶತಃಸಿದ್ಧ. ವ್ಯವಸ್ಥೆಯ ಹುನ್ನಾರ, ಪಿತೂರಿಯಿಂದ ಈಗಾಗಲೇ ಆತ್ಮಹತ್ಯೆಯಂತಹ ಘೋರ ಹಾದಿ ತುಳಿಯುತ್ತಿರುವ ಅನ್ನದಾತರು ಮುಂದೆ ಅತಿ ಭೀಕರ ಪರಿಣಾಮ ಎದುರಿಸಲಿದ್ದಾರೆ ಎಂದು ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next