ಬೆಂಗಳೂರು: ರಾಜ್ಯದ 21 ಜಿಲ್ಲೆಗಳಲ್ಲಿ ಜೀತದಾಳು ಪದ್ಧತಿ ಇಲ್ಲವೆಂದು ತಿಳಿಸಿರುವ ಸರ್ಕಾರದ ಕ್ರಿಯಾ ಯೋಜನೆ ಹಿಂಪಡೆಯಲು ಒತ್ತಾಯಿಸಿ ಜ.10ರಂದು ಪುರಭವನದ ಎದುರು ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದಿಂದ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ಗೌರವ ಕಾರ್ಯದರ್ಶಿ ಕಿರಣ ಕಮಲ ಪ್ರಸಾದ್ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಡುಪಿ, ಮಂಡ್ಯ, ಹಾಸನ ಸೇರಿ 21 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸರ್ಕಾರ ನಿಗದಿಪಡಿಸಿದ ನಿಯಮಾವಳಿ ಪ್ರಕಾರ ಸಮೀಕ್ಷೆ ಮಾಡದೆ ತಮ್ಮ ಜಿಲ್ಲೆಗಳಲ್ಲಿ ಜೀತ ಪದ್ಧತಿ ಇಲ್ಲವೆಂದು ವರದಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.
2012ರಿಂದ 2016ರವರೆಗೆ 14,217 ಜೀತದಾಳುಗಳು, 2017ರಲ್ಲಿ 1099 ಜೀತದಾಳುಗಳು ಹಾಗೂ 2018ರಲ್ಲಿ 414 ಜೀತದಾಳುಗಳು ತಮ್ಮ ಬಿಡುಗಡೆ ಹಾಗೂ ಪುನವರ್ಸತಿ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ಬಗ್ಗೆ ಬಹುತೇಕ ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರಕ್ಕೆ ಸುಳ್ಳು ವರದಿ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ ಒಟ್ಟು 4ರಿಂದ 5 ಲಕ್ಷ ಮಂದಿ ಜೀತದಾಳುಗಳಿದ್ದಾರೆ. ನಮ್ಮ ಒಕ್ಕೂಟದಿಂದ ಖುದ್ದಾಗಿ 16 ಸಾವಿರ ಜೀತದಾಳುಗಳನ್ನು ಭೇಟಿ ಮಾಡಲಾಗಿದೆ. ಅದರಲ್ಲಿ ಕೆಲವರಿಗೆ ಬಿಡುಗಡೆ ಪ್ರಮಾಣ ಪತ್ರ ಕೊಡಿಸಲಾಗಿದೆ. ಮುಂದಿನ 3 ವಾರಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,427 ಜೀತದಾಳುಗಳನ್ನು ಬಿಡುಗಡೆಗೊಳಿಸಲು ಅಲ್ಲಿನ ಜಿಲ್ಲಾಧಿಕಾರಿಗಳು ಕ್ರಮ ವಹಿಸಿದ್ದಾರೆ. ಅಲ್ಲದೆ ಕ್ರಿಯಾ ಯೋಜನೆಯಲ್ಲಿ ತಿಳಿಸಲಾದ 21 ಜಿಲ್ಲೆಗಳಲ್ಲೂ ತೀರಾ ಇತ್ತಿಚಿಗಷ್ಟೆ ಜೀತದಾಳುಗಳಿಗೆ ಬಿಡುಗಡೆ ಪ್ರಮಾಣ ಪತ್ರ ನೀಡಲಾಗಿದೆ ಎಂದು ತಿಳಿಸಿದರು.