Advertisement

ಬಿಸಿಯೂಟ ನೌಕರರ ಪ್ರತಿಭಟನೆ ಬಿಸಿಯೂಟ ಪೂರೈಕೆ ಅಬಾಧಿತ

11:52 AM Feb 09, 2018 | |

ಮಂಗಳೂರು: ಬಿಸಿಯೂಟ ನೌಕರರಿಗೆ ಮಾಸಿಕ 5,000 ರೂ. ವೇತನ ನೀಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ಸಿಐಟಿಯು ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಆರಂಭವಾಗಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 200 ಮಂದಿ ಅಕ್ಷರದಾಸೋಹ ನೌಕರರು ಭಾಗವಹಿಸಿದ್ದಾರೆ.

Advertisement

ಜಿಲ್ಲೆಯಿಂದ 200 ಮಂದಿ ನೌಕರರು ಬೆಂಗಳೂರಿನ ಮುಷ್ಕರದಲ್ಲಿ ಪಾಲ್ಗೊಂಡಿ ದ್ದೇವೆ. ಫೆ. 9ರಂದು ಬೆಳಗ್ಗೆ 10 ಗಂಟೆಯಿಂದ ದ.ಕ. ಜಿ.ಪಂ. ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಘದ ಕಾರ್ಯದರ್ಶಿ ಗಿರಿಜಾ ತಿಳಿಸಿದ್ದಾರೆ. 

ಬಿಸಿಯೂಟ ನೌಕರರಿಗೆ 5,000 ರೂ. ವೇತನ ನೀಡಬೇಕು. 45ನೇ ಭಾರತೀಯ ಕಾರ್ಮಿಕರ ಸಮ್ಮೇಳನದ ಶಿಫಾರಸಿನಂತೆ ಈ ನೌಕರರಿಗೆ ಕನಿಷ್ಠ ಕೂಲಿ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು. ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯ ಮೇಲ್ವಿಚಾರಣೆಯಡಿ ಇರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಪ್ರತಿಭಟನೆ ನಡೆಯುತ್ತಿದೆ. 

ತೊಂದರೆಯಾಗಿಲ್ಲ 

ಬಿಸಿಯೂಟ ನೌಕರರ ಪ್ರತಿಭಟನೆಯಿಂದ ಮಂಗಳೂರಿನ ಶಾಲೆಗಳಲ್ಲಿ ಊಟಕ್ಕೆ ತೊಂದರೆಯಾಗಿರುವ ಬಗ್ಗೆ ಮಾಹಿತಿ ಬಂದಿಲ್ಲ. ಶಾಲಾ ಭೇಟಿ ಸಂದರ್ಭದಲ್ಲಿಯೂ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸಮರ್ಪಕವಾಗಿ ಪೂರೈಕೆ ಮಾಡಿರುವುದನ್ನು ಗಮನಿಸಿದ್ದೇವೆ ಎಂದು ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್‌ ತಿಳಿಸಿದ್ದಾರೆ. ಬಿಸಿಯೂಟ ನೌಕರರ ಮುಷ್ಕರದಿಂದಾಗಿ ಶಾಲೆಯಲ್ಲಿ ಬಿಸಿಯೂಟ ಕೊರತೆಯಾಗಿಲ್ಲ. ಮಕ್ಕಳಿಗೆ ಮಧ್ಯಾಹ್ನದ ಊಟ ನೀಡಲಾಗಿದೆ. ಶಾಲೆಯ ನೌಕರರು ಭಾಗವಹಿಸಿಲ್ಲ ಎಂದು ಶಿರೂರು ಹಿ.ಪ್ರಾ. ಶಾಲೆಯ ಶಿಕ್ಷಕರೋರ್ವರು ತಿಳಿಸಿದ್ದಾರೆ.

Advertisement

ಬಿಸಿಯೂಟ ಪುತ್ತೂರಲ್ಲಿ ಪರ್ಯಾಯ ವ್ಯವಸ್ಥೆ

ಪುತ್ತೂರು: ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ಸಿಬಂದಿ ಫೆ. 6ರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಪುತ್ತೂರು ತಾಲೂಕಿನ ಕೆಲವು ಮಂದಿ ಮಾತ್ರ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಇನ್ನುಳಿದವರು ಮಾನವೀಯ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸುವ ಕಾಯಕದಲ್ಲಿ ತೊಡಗಲಿದ್ದಾರೆ. ಪುತ್ತೂರು ತಾಲೂಕಿನಲ್ಲಿ  ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳು ಸೇರಿ ಒಟ್ಟು 239 ಶಾಲೆಗಳು ಅಕ್ಷರದಾಸೋಹ ಯೋಜನೆಗೆ ಒಳಪಟ್ಟಿವೆ. ಶಾಲೆಗಳ ಎಸ್‌ಡಿಎಂಸಿ, ತಾಯಂದಿರ ಸಮಿತಿಗಳು ಈ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸುತ್ತಿದ್ದು, ಅಡುಗೆ ಮಾಡಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next