Advertisement

ವ್ಯವಸ್ಥೆ ವಿರುದ್ಧ ರಸ್ತೆಗಿಳಿದ ಕಾರ್ಮಿಕರು

09:30 AM Jan 09, 2019 | |

ಸೇಡಂ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳ ವಿರುದ್ಧ ಮಂಗಳವಾರ ಕರೆ ನೀಡಲಾಗಿದ್ದ ಭಾರತ್‌ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಸ್‌ ಸಂಚಾರ ಹೊರತುಪಡಿಸಿ ಉಳಿದೆಲ್ಲ ವಾಹನಗಳು ಸಾಮಾನ್ಯವಾಗಿ ಎಂದಿನಂತೆ ಚಲಿಸಿದವು. ಮಾರುಕಟ್ಟೆ ಎಂದಿನಂತೆ ಇತ್ತು.

Advertisement

ಕರ್ನಾಟಕ ರಾಜ್ಯ ಸಂಯುಕ್ತ ನೌಕರರ ಸಂಘ, ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ, ಜೆಸಿಟಿಯು, ಸಿಐಟಿಯು, ರಾಜಶ್ರೀ ಸಿಮೆಂಟ್ ಜನರಲ್‌ ವರ್ಕರ್ ಮತ್ತು ಸ್ಟಾಫ್‌ ಯೂನಿಯನ್‌, ಗ್ರಾಪಂ ನೌಕರರ ಸಂಘ, ಅಂಗನವಾಡಿ ನೌಕರರ ಸಂಘ, ಬಿಸಿಯೂಟ ನೌಕರರ ಸಂಘ, ಕಟ್ಟಡ ಕಾರ್ಮಿಕರ ಸಂಘ, ವರ್ತಕರ, ಹಮಾಲಿ ಕಾರ್ಮಿಕ ಸಂಘ ಮತ್ತು ವಿದ್ಯುತ್‌ ಶಿಲ್ಪಿಗಳ ಸಂಘದ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಕೇಂದ್ರ ಸರ್ಕಾರದ ವ್ಯವಸ್ಥೆ ವಿರುದ್ಧ ಕಿಡಿಕಾರಿದರು.

ಜೆಸಿಟಿಯು ಮತ್ತು ಸಿಐಟಿಯು ನೇತೃತ್ವದಲ್ಲಿ ಕಲಬುರಗಿ ಕ್ರಾಸ್‌ ಬಳಿ ರಾಜ್ಯ ಹೆದ್ದಾರಿ ತಡೆದು ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದರು.

ಬಸ್‌ ಸಂಚಾರವಿಲ್ಲದ ಪರಿಣಾಮ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಿಪಿಐ ಶಂಕರಗೌಡ ಪಾಟೀಲ, ಎನ್‌. ವಿರೇಂದ್ರ, ಪಿಎಸ್‌ಐ ಸುಶೀಲಕುಮಾರ, ಶ್ರೀಶೈಲ, ವಿದ್ಯಾಶ್ರೀ ಪೊಲೀಸ್‌ ಬಂದೋಬಸ್ತ್ ಕಲ್ಪಿಸಿದ್ದರು.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ನಾಗಮಣಿ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಮಂಜುಳಾ, ಎಐಯುಟಿಯುಸಿ ಜಿಲ್ಲಾ ಸಂಘಟಕ ವಿ.ಜಿ. ದೇಸಾಯಿ ನೇತೃತ್ವದಲ್ಲಿ ಸಹಾಯಕ ಆಯುಕ್ತೆ ಡಾ| ಬಿ. ಸುಶೀಲಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Advertisement

ಅಫಜಲಪುರದಲ್ಲಿ ಉತ್ತಮ ಪ್ರತಿಕ್ರಿಯೆ

ಅಫಜಲಪುರ: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರೆ ನೀಡಲಾಗಿದ್ದ ಭಾರತ ಬಂದ್‌ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಅಂಗನವಾಡಿ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಗ್ರಾಪಂ ನೌಕರರ ಸಂಘ, ಹಾಸ್ಟೆಲ್‌ ನೌಕರರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಹೊರಗುತ್ತಿಗೆ ನೌಕರರು ಸೇರಿದಂತೆ ಹಲವಾರು ಸಂಘಟನೆಗಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾವಣೆಯಾಗಿ ಕೇಂದ್ರ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ, ರೈತ, ಕೂಲಿಕಾರರ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಟೈರ್‌ಗಳಿಗೆ ಬೆಂಕಿ ಹಚ್ಚಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಬಸವೇಶ್ವರ ವೃತ್ತದಿಂದ ತಾಪಂ, ಪುರಸಭೆ ಹಾಗೂ ಅಂಬೇಡ್ಕರ್‌ ವೃತ್ತದ ಬಳಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಕಾರ್ಮಿಕ ಮುಖಂಡ ಶ್ರೀಮಂತ ಬಿರಾದಾರ ಮಾತನಾಡಿ, ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಕೊಟ್ಟ ಮಾತು ತಪ್ಪಿದೆ. ಮೋದಿ ಪ್ರಧಾನಿಯಾಗುವಾಗ ಅಸಂಘಟಿತ ಕಾರ್ಮಿಕರಿಗೆ ಮಾಸಿಕ 18 ಸಾವಿರ ರೂ. ವೇತನ ನೀಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ. ಎಲ್ಲರಿಗೂ ಅಚ್ಚೇ ದಿನ್‌ ಬರಲಿವೆ ಎಂದು ಹೇಳಿ ಅಧಿಕಾರಕ್ಕೆ ಬಂದವರು ಈಗ ನಮ್ಮನ್ನೇ ಮರೆತಿದ್ದಾರೆ. ದುಡಿಯುವವರ ಕಷ್ಟಕ್ಕೆ ಸರ್ಕಾರ ಬೆಲೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೇವರ್ಗಿ: ಭಾರತ ಬಂದ್‌ ಕರೆ ಅಂಗವಾಗಿ ಜೇವರ್ಗಿಯಲ್ಲಿ ಮುಷ್ಕರ ಹಾಗೂ ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಸಂಘಟನೆಗಳು ಕರೆ ನೀಡಿದ ಬಂದ್‌ಗೆ ಜೇವರ್ಗಿಯಲ್ಲಿ ಬೆಳಗ್ಗೆಯಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಪಟ್ಟಣದ ಅಖಂಡೇಶ್ವರ -ಬಸವೇಶ್ವರ ಅಂಬೇಡ್ಕರ್‌ ವೃತ್ತದ ಬಳಿ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಇದರಿಂದ ಅಘೋಷಿತ ಬಂದ್‌ದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟನಾಕಾರರು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಸುಭಾಸ ಹೊಸಮನಿ, ಸಿದ್ರಾಮ ಹರವಾಳ, ನಾಗಮ್ಮ ನರಿಬೋಳ, ನಾಗೆಂದ್ರ ಕೂಡಿ, ಶಂಕರಲಿಂಗ ರ್ಯಾವನೂರ, ಪರಶುರಾಮ ಶಕಾಪುರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next