ಬೆಳಗಾವಿ: ಹೇಳ್ಳೋರಿಲ್ಲ, ಕೇಳ್ಳೋರಿಲ್ಲ. ಬಸ್‌ನಲ್ಲಿ ಎಲ್ಲಿಗೋ ಹೋಗಬೇಕಾದವರು ಎಲ್ಲೆಲ್ಲೋ ಸಿಕ್ಕಿ ಹಾಕಿಕೊಳ್ಳುತ್ತಿದ್ದು, ಬೆಂಗಳೂರಿನಿಂದ ಬೇರೆ ಬೇರೆ ರಾಜ್ಯಗಳಿಗೆ ತೆರಳಬೇಕಾದ ವಲಸೆ ಕಾರ್ಮಿಕರು ಧಾವಂತದಲ್ಲಿ ಸರಿಯಾದ ಮಾಹಿತಿ ಇಲ್ಲದೇ ತಪ್ಪಾಗಿ ಬೆಳಗಾವಿಗೆ ಬಂದು ಇಕ್ಕಟ್ಟಿಗೆ ಸಿಲುಕಿ ಅತಂತ್ರರಾಗಿದ್ದಾರೆ.
ಲಾಕ್‌ಡೌನ್‌ನಲ್ಲಿ ಕಳೆದ 40 ದಿನಗಳಿಂದ ಸಿಲುಕಿಕೊಂಡಿದ್ದ ಕೂಲಿ ಕಾರ್ಮಿಕರಿಗೆ ಸ್ವಲ್ಪ ಸಡಿಲಿಕೆ ಸಿಕ್ಕಿದ್ದರಿಂದ ತವರೂರಿಗೆ ಸೇರಬೇಕೆಂಬ ಧಾವಂತದಲ್ಲಿ ಮಧ್ಯದಲ್ಲಿಯೇ ಅತಂತ್ರರಾಗಿದ್ದಾರೆ. ಬೆಂಗಳೂರಿನಿಂದ ತಾವು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಯಾರನ್ನೂ ಕೇಳದೇ ಹತ್ತಿ ಕುಳಿತು ನಿರ್ವಾಹಕರು ಇಲ್ಲದ್ದಕ್ಕೆ ತಪ್ಪಾಗಿ ಬೆಳಗಾವಿಗೆ ಬಂದಿಳಿದಿರುವ ಪ್ರಸಂಗ ನಡೆದಿದೆ.
ಪರಿವೇ ಇಲ್ಲದೇ ಹತ್ತಿ ಕುಳಿತರು: ಬೆಂಗಳೂರಿನಿಂದ ಕೂಲಿ ಕಾರ್ಮಿಕರಿಗಾಗಿಯೇ ವಿಶೇಷ ಹಾಗೂ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಕಳೆದ ಮೂರು ದಿನಗಳಿಂದ ನಿರಂತರವಾಗಿ ಬಸ್‌ಗಳು ಬರುತ್ತಿವೆ. ಬೆಂಗಳೂರಿನಿಂದ ಹತ್ತಿದ ಕಾರ್ಮಿಕರು ಆ ಬಸ್ ಎಲ್ಲಿಗೆ ಪ್ರಯಾಣಿಸುತ್ತಿದೆ, ಯಾವ ಊರಿಗೆ ಹೋಗುತ್ತದೆ, ಯಾವಾಗ ತಲುಪುತ್ತದೆ ಎಂಬ ಪರಿವೇ ಇಲ್ಲದೇ ಕುಳಿತುಕೊಂಡಿದ್ದಾರೆ. ಯಾರನ್ನೂ ಚೌಕಾಶಿ ಮಾಡದೇ ಬಸ್ ಹತ್ತಿ ಕುಳಿತಿರುವ ಕಾರ್ಮಿಕರು ಈಗ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.
ಮಹಾರಾಷ್ಟ್ರ, ಹರಿಯಾಣಾ, ಪಶ್ಚಿಮ ಬಂಗಾಲ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ ಇತರೆ ರಾಜ್ಯಗಳಿಗೆ ತೆರಳಬೇಕಿದ್ದ ಕಾರ್ಮಿಕರು ಉಚಿತ ಬಸ್ ಹತ್ತಿ ಬೆಳಗಾವಿಗೆ ಬಂದಿದ್ದಾರೆ. ಎಲ್ಲರೂ ಬಂದಾಗ ಇವರ ವಿಳಾಸ ಕೇಳಿದ ಅಧಿ ಕಾರಿಗಳಿಗೆ ಶಾಕ್ ಆಗಿದೆ. ಬೆಳಗಾವಿಯಲ್ಲಿ ಇದ್ದವರನ್ನೇ ಇಲ್ಲಿಂದ ಕಳುಹಿಸಬೇಕು ಎನ್ನುವಷ್ಟರಲ್ಲಿ ಮತ್ತಷ್ಟು ಕಾರ್ಮಿಕರ ಆರೈಕೆ, ಊಟ, ವಸತಿ ವ್ಯವಸ್ಥೆ ಮಾಡುವುದು ಕಷ್ಟಕರವಾಗಿದೆ.
ಉಚಿತ ಬಸ್‌ನಿಂದಾದ ಎಡವಟ್ಟು: ಬಸ್ ಗಳಲ್ಲಿ ಟಿಕೆಟ್ ಪಡೆಯುವ ವ್ಯವಸ್ಥೆ ಇದ್ದಿದ್ದರೆ ಎಲ್ಲಿಗೆ ಹೋಗಬೇಕು ಎಂದು ನಿರ್ವಾಹಕರು ಕೇಳುತ್ತಿದ್ದರು. ಆದರೆ ಯಾರೂ ಕೇಳ್ಳೋರಿಲ್ಲ, ಹೇಳ್ಳೋರಿಲ್ಲ ಎಂಬ ವ್ಯವಸ್ಥೆಯಿಂದಾಗಿ ಕಾರ್ಮಿಕರ ಸ್ಥಿತಿ ತ್ರಿಶಂಕು ಸ್ಥಿತಿಯಾಗಿದೆ. ಎರಡು ದಿನಗಳ ಅವಧಿ ಯಲ್ಲಿ ಬೆಂಗಳೂರಿನಿಂದ ಬಂದ ಸುಮಾರು 133 ಕಾರ್ಮಿಕರು ಈಗ ಕ್ವಾರಂಟೈನ್ ಆಗಿದ್ದಾರೆ. ಹುಕ್ಕೇರಿ ತಾಲೂಕಿನ ಹಾಲಭಾಂವಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಎಲ್ಲರನ್ನೂ ಇರಿಸಲಾಗಿದೆ. ಲಾಕ್‌ಡೌನ್ ಪ್ರಾರಂಭದಲ್ಲಿ ರಾಜಸ್ಥಾನ ಹಾಗೂ ಮಧ್ಯ ಪ್ರದೇಶದ ಕಾರ್ಮಿಕರು ಬಂದಿದ್ದರು. ಅದರಲ್ಲಿ ರಾಜಸ್ಥಾನದವರನ್ನು ಕಳುಹಿಸಲಾಗಿದೆ. ಮಧ್ಯಪ್ರದೇಶದ ಇನ್ನೂ 83 ಜನ ಉಳಿದುಕೊಂಡಿದ್ದು, ಈ ಎಲ್ಲರ ಮಾಹಿತಿಯನ್ನು ಆನ್‌ಲೆ„ನ್ ಭರ್ತಿ ಮಾಡಿ ಕಳುಹಿಸ ಬೇಕು ಎನ್ನುವಷ್ಟರಲ್ಲಿಯೇ ಮತ್ತೂಂದು ತಂಡ ಇಲ್ಲಿಗೆ ಬಂದಿದ್ದು ಅಧಿ ಕಾರಿಗಳಿಗೆ ತಲೆ ಬಿಸಿಯಾಗಿದೆ.
ಬುಧವಾರ ರಾತ್ರಿ ಮತ್ತೆ 18 ಬಸ್‌ಗಳು ಪ್ರಯಾಣ ಬೆಳೆಸಿದ್ದು, ಇದರಲ್ಲಿ ಇನ್ನೂ ಎಷ್ಟು ಜನ ದಾರಿ ತಪ್ಪಿ ಬರಬಹುದೆಂಬ ಆತಂಕ ಅಧಿಕಾರಿಗಳನ್ನು ಕಾಡುತ್ತಿದೆ. ಮಹಾನಗರ ಪಾಲಿಕೆ ಉಪ ಆಯುಕ್ತ ಎಸ್.ಬಿ. ದೊಡಗೌಡರ ಸೇರಿದಂತೆ ಸಿಬ್ಬಂದಿ ಇದ್ದರು.
ಕಾರ್ಮಿಕರನ್ನು ಭೇಟಿಯಾಗಿ ಧೈರ್ಯ ತುಂಬಿದ ಶಾಸಕಿ : ಬೆಂಗಳೂರಿಂದ ಬೆಳಗಾವಿಗೆ ದಾರಿ ತಪ್ಪಿ ಆಗಮಿಸಿದ ಪರ ರಾಜ್ಯಗಳ ಕಾರ್ಮಿಕರನ್ನು ಬುಧವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಭೇಟಿಯಾಗಿ ಧೆ„ರ್ಯ ತುಂಬಿದರು. ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ ಕಾರ್ಮಿಕರು ಮತ್ತು ಅಸಹಾಯಕ ಜನರು ರಾಜ್ಯ ಸರಕಾರಿ ಬಸ್‌ಗಳ ಮೂಲಕ ಬೆಳಗಾವಿಗೆ ತಲುಪಿರುವ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಹೆಬ್ಟಾಳಕರ ಅವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದರು. ಹಲವಾರು ಕಾರ್ಮಿಕರಿಗೆ ಹಸುಗೂಸುಗಳಿದ್ದು ಅವರ ಪಾಡು ಹೇಳತೀರದು. ಅವರಿಗೆಲ್ಲ ಹಾಲು, ಬಿಸ್ಕೀಟ್, ಬ್ರೆಡ್, ಸೋಪು ಇತರೆ ವಸ್ತುಗಳನ್ನು ವೈಯಕ್ತಿಕ ಕಾಳಜಿಯಿಂದ ವಿತರಿಸಿದರು. ನಂತರ ಮಾತನಾಡಿದ ಅವರು, ಉತ್ತರ ಭಾರತೀಯರ ಆಹಾರ ಕ್ರಮದ ಅರಿವು ಇದ್ದು, ಅವರಿಗೆ ಬೇಕಾಗುವ ರೊಟ್ಟಿ- ಪಲ್ಲೆ ಮುಂತಾದ ಆಹಾರ ಪದಾರ್ಥಗಳನ್ನು ಒದಗಿಸುತ್ತೇನೆ. ಜತೆಗೆ ಬೆಳಗಾವಿ ಜಿಲ್ಲಾಡಳಿತದ ಪಾಲನೆಯ ಸುಪ ರ್ದಿಯಲ್ಲಿರುವ ಈ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಮುಂದಿರುವ ಮಾರ್ಗಗಳ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
-ಭೈರೋಬಾ ಕಾಂಬಳೆ