ಮಹಾನಗರ: ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾದರಿ ಕರ್ಫ್ಯೂ ಜಾರಿಯಲ್ಲಿರುವ ಕಾರಣ ಹೊರ ರಾಜ್ಯಗಳ ಕಾರ್ಮಿಕರ ವಲಸೆ ಮುಂದುವರಿದಿದ್ದು, ನಗರದ ರೈಲು ನಿಲ್ದಾಣಗಳಲ್ಲಿ ರೈಲುಗಳ ನಿರೀಕ್ಷೆಯಲ್ಲಿ ಬೀಡುಬಿಟ್ಟಿದ್ದಾರೆ.
ರಾಜ್ಯದಲ್ಲಿ, ಲಾಕ್‌ಡೌನ್ ಮಾದರಿಯ ಕರ್ಫ್ಯೂ 14 ದಿನಗಳ ಕಾಲ ಜಾರಿಯಲ್ಲಿದೆ. ಇದು ಇನ್ನಷ್ಟು ದಿನ ವಿಸ್ತರಣೆಯಾಗುವ ಆತಂಕ ಇರುವುದರಿಂದ ಹೊರ ಜಿಲ್ಲೆ, ಹೊರ ರಾಜ್ಯಗಳ ಕಾರ್ಮಿಕರು ಸೋಮವಾರದಿಂದಲೇ ತಮ್ಮ ಊರುಗಳಿಗೆ ತೆರಳಲು ಆರಂಭಿಸಿದ್ದಾರೆ. ಹೊರ ಜಿಲ್ಲೆಗಳಿಗೆ ಸೇರಿದವರಲ್ಲಿ ಗಣನೀಯ ಸಂಖ್ಯೆಯ ಕಾರ್ಮಿಕರು ಈಗಾಗಲೇ ಬಸ್‌ಗಳ ಮೂಲಕ ತಮ್ಮ ಊರುಗಳಿಗೆ ತೆರಳಿದ್ದಾರೆ.
ನಗರದಲ್ಲಿ ನಿರ್ಮಾಣ ಕಾಮಗಾರಿ, ವಿವಿಧ ಕೈಗಾರಿಕೆಗಳು, ಹೊಟೇಲ್, ಮೀನುಗಾರಿಕೆ, ವೃತ್ತಿಪರ ಚಟುವಟಿಕೆಗಳು ಸಹಿತ ವಿವಿಧ ಕ್ಷೇತ್ರಗಳಲ್ಲಿ ಹೊರರಾಜ್ಯಗಳ ಕಾರ್ಮಿಕರು ಬಹುಸಂಖ್ಯೆಯಲ್ಲಿದ್ದಾರೆ. ಇದೀಗ ಕೊರೊನಾ ಕರ್ಫ್ಯೂನಿಂದಾಗಿ ಹೆಚ್ಚಿನ ಕ್ಷೇತ್ರಗಳ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದೆ. ಕಳೆದ ವರ್ಷದ ಲಾಕ್‌ಡೌನ್ ಸಂದರ್ಭ ಎದುರಿಸಿದ ಸಂಕಷ್ಟಗಳ ಕಹಿ ಅನುಭವವು ಅವರ ಮುಂದಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಇದೀಗ ಹಿಂಡು ಹಿಂಡಾಗಿ ತಮ್ಮ ಊರುಗಳತ್ತ ಹೊರಟಿದ್ದು ಪ್ರಯಾಣಕ್ಕೆ ರೈಲು ಮಾತ್ರ ಏಕೈಕ ಆಸರೆಯಾಗಿದೆ. ವಿಶೇಷ ರೈಲುಗಳು ಸೀಮಿತ ಸಂಖ್ಯೆಯಲ್ಲಿದ್ದು, ಇದಕ್ಕೆ ಮುಂಗಡವಾಗಿ ಟಿಕೆಟ್ ಕಾದಿರಿಸಬೇಕಾಗಿದೆ.
ನಗರದ ಸೆಂಟ್ರಲ್, ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಕಾಯುತ್ತಿರುವುದು ಬುಧವಾರ ಕಂಡು ಬಂದಿದೆ. ಕೆಲವರಿಗೆ ಬುಧವಾರ ರಾತ್ರಿ ರೈಲು ಟಿಕೆಟ್ ಆಗಿದ್ದು ಇನ್ನೂ ಕೆಲವರು ಮುಂಗಡ ಬುಕ್ಕಿಂಗ್ ಮಾಡಿ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.
ಜೀವನ ನಿರ್ವಹಣೆ ಕಷ್ಟ
ಮಂಗಳೂರಿನಲ್ಲಿ ಕೆಲಸ ಮಾಡು ತ್ತಿದ್ದೇವೆ. ಆದರೆ ಇದೀಗ ಕೊರೊನಾ ದಿಂದಾಗಿ ಇಲ್ಲಿ ಎಲ್ಲ ಬಂದ್ ಆಗುತ್ತಿದೆ. ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಹಾಗಾಗಿ ಊರಿಗೆ ಹೊರಟಿದ್ದೇವೆ. ರೈಲಿಗೆ ಕಾಯುತ್ತಿದ್ದೇವೆ ಕಳೆದ ವರ್ಷ ಲಾಕ್‌ಡೌನ್ ಆಗಿದ್ದ ವೇಳೆ ಊರಿಗೆ ಹೊಗಲು ತುಂಬಾ ಕಷ್ಟವಾಗಿತ್ತು ಎಂದು ನಿರ್ಮಾಣ ಚಟುವಟಿಕೆಯಲ್ಲಿ ಕೆಲಸ ಮಾಡುತ್ತಿರುವ ಒಡಿಶಾದ ಕಾರ್ಮಿಕರೋರ್ವರು ಅಳಲು ತೋಡಿಕೊಂಡಿದ್ದಾರೆ.