Advertisement

ಕಾರ್ಮಿಕರ ವಲಸೆ ಹೋಟೆಲ್‌ಗ‌ಳಿಗೆ ತಲೆಬಿಸಿ

04:40 AM May 16, 2020 | Lakshmi GovindaRaj |

ಬೆಂಗಳೂರು: ಸರ್ಕಾರ ಈಗಷ್ಟೇ ಆರ್ಥಿಕ ಎಂಜಿನ್‌ಗೆ ಚಾಲನೆ ನೀಡಿದೆ. ಇದಕ್ಕೆ ಪೂರಕವಾಗಿ ಒಂದೊಂದಾಗಿ ಉದ್ಯಮಗಳು ಕೂಡ ತೆರೆದುಕೊಳ್ಳುತ್ತಿವೆ. ಆದರೆ, ಅವಕಾಶ ನೀಡಿದರೂ ಹೋಟೆಲ್‌ ಉದ್ದಿಮೆ ಈ ಹಿಂದಿನಂತೆ ತಕ್ಷಣದ  ಚೇತರಿಕೆ ಕಾಣುವುದು ಅನುಮಾನ! ಯಾಕೆಂದರೆ, ಅತ್ತ ಲಾಕ್‌ಡೌನ್‌ ಸಡಿಲಿಕೆ ಬೆನ್ನಲ್ಲೇ ಇತ್ತ ಒಂದೂವರೆ ತಿಂಗಳಿಂದ ಹಿಡಿದಿಟ್ಟಿದ್ದ ಹೋಟೆಲ್‌ ಕಾರ್ಮಿಕರು ತವರಿನತ್ತ ಮುಖ ಮಾಡುತ್ತಿದ್ದಾರೆ.

Advertisement

ತಕ್ಷಣಕ್ಕೆ ಅವರು ರಾಜ್ಯಕ್ಕೆ  ಮರಳುವುದು ಅನುಮಾನ. ಇದು ಹೋಟೆಲ್‌ ಉದ್ಯಮಿಗಳ ನಿದ್ದೆಗೆಡಿಸಿದೆ. ಅದರಲ್ಲೂ ಈ ಕಾರ್ಮಿಕರ ವಲಸೆ ಬಿಸಿ ಉತ್ತರ ಭಾರತದ ಮೆನು ಮತ್ತು ಚೈನೀಸ್‌ ಫುಡ್‌ ಸ್ಪೆಷಲ್‌ ಹೋಟೆಲ್‌ಗ‌ಳಿಗೆ ತುಸು ಜೋರಾಗಿಯೇ ತಟ್ಟಲಿದೆ. ಮೂಲಗಳ  ಪ್ರಕಾರ ಸುಮಾರು ಶೇ. 40ರಷ್ಟು ಕಾರ್ಮಿ ಕರು ತಮ್ಮ ತಮ್ಮ ರಾಜ್ಯಗಳಿಗೆ ತೆರಳಿರುವುದರಿಂದ ಹೋಟೆಲ್‌ ಆರಂಭವಾದ ನಂತರವೂ ಮಾಲೀಕರಿಗೆ ಕಾರ್ಮಿಕರ ಸಮಸ್ಯೆ ಎದುರಾಗಲಿದೆ.

ರಾಜ್ಯದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ  ಹೋಟೆಲ್‌ ಉಪಹಾರ ಮಂದಿರಗಳಿವೆ. ಬೆಂಗಳೂರಿನಲ್ಲಿ ಸುಮಾರು 6 ಸಾವಿರಕ್ಕೂ ಅಧಿಕ ಹೋಟೆಲ್‌ ಗಳಿವೆ. ಇಲ್ಲೆಲ್ಲ ಸೇವೆ ಸಲ್ಲಿಸುತ್ತಿದ್ದ ಬಹುಪಾಲು ಕಾರ್ಮಿ ಕರು ತಮ್ಮ ಊರು ಹಾಗೂ ಹೊರ ರಾಜ್ಯಗಳಿಗೆ ಹೋಗಿದ್ದಾರೆ. ಇಲ್ಲಿಯೇ  ಇದ್ದ ಕಾರ್ಮಿಕರಿಗೆ ಹೋಟೆಲ್‌ ಮಾಲೀಕರೇ ವಸತಿ ಹಾಗೂ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ, ಹೊರ ರಾಜ್ಯಗಳಿಗೆ ಹೋಗಿರುವ ಕಾರ್ಮಿಕರು ಸದ್ಯ ವಾಪಸ್‌ ಬರುವ ಸಾಧ್ಯತೆ ಬಹಳ ಕಡಿಮೆ ಎಂದು ಹೋಟೆಲ್‌ ಮಾಲೀಕರು  ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ದಕ್ಷಿಣ ಭಾರತದ ಊಟದ ಮೆನು ಮತ್ತು ತಿಂಡಿಗಳನ್ನು ರಾಜ್ಯದ ಬಾಣಸಿಗರು ಸುಲಭವಾಗಿ ಸಿದ್ಧಪಡಿಸುತ್ತಾರೆ. ಆದರೆ, ಉತ್ತರ ಭಾರತದ ಊಟದ ಮೆನು ಮತ್ತು ಚೈನೀಸ್‌ ಖಾದ್ಯಗಳನ್ನು ಸಿದ್ಧಪಡಿಸಲು ಈಶಾನ್ಯ ಭಾರತ ಅಥವಾ ಉತ್ತರ ಭಾರತದ ಕಾರ್ಮಿಕರೇ ಬೇಕಾಗುತ್ತದೆ. ಹೋಟೆಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಶೇ. 40ರಷ್ಟು ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹೋಗಿದ್ದಾರೆ. ಸದ್ಯ ಹಿಂತಿರುಗುವ ಲಕ್ಷಣವೂ ಕಾಣುತ್ತಿಲ್ಲ.  ಹೀಗಾಗಿ ಹೋಟೆಲ್‌ ಆರಂಭವಾದ ನಂತರವೂ ಸ್ವಲ್ಪ ಮಟ್ಟಿನ ಸಮಸ್ಯೆ ಎದುರಾಗಬಹುದು ಎಂದು ಹೋಟೆಲ್‌ ಮಾಲೀಕರೊಬ್ಬರು ಆತಂಕ ವ್ಯಕ್ತಪಡಿಸಿದರು.

ಕರ್ನಾಟದವರಿಗೆ ವ್ಯವಸ್ಥೆ: ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿರುವ ಹೋಟೆಲ್‌ ಕಾರ್ಮಿಕರು ಮರಳಿ ಬರಲು ಸರ್ಕಾರ ಪಾಸ್‌ ವ್ಯವಸ್ಥೆ ಮಾಡುವ ಭರವಸೆ ನೀಡಿದೆ. ಆದರೆ, ಹೋಟೆಲ್‌ ಯಾವಾಗ ಆರಂಭವಾಗುತ್ತದೆ ಎಂಬುದೇ  ಗೊತ್ತಿಲ್ಲ. ಅಲ್ಲದೆ, ಗ್ರಾಹಕರ ಕೊರತೆಯೂ ಎದುರಾಗಬಹುದು. ಸರ್ಕಾರ ಅನುಮತಿ ನೀಡಿದರೆ, ಸಾಮಾಜಿಕ ಅಂತರ ಸಹಿತವಾಗಿ ಎಲ್ಲ ರೀತಿಯ ಸುರಕ್ಷತಾ ಕ್ರಮದೊಂದಿಗೆ ಹೋಟೆಲ್‌ ಆರಂಭಿಸಲಿದ್ದೇವೆ ಎಂದು ಬೃಹತ್‌ ಬೆಂಗಳೂರು  ಹೋಟೆಲ್‌ಗ‌ಳ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಹೊಳ್ಳ ಮಾಹಿತಿ ನೀಡಿದರು.

Advertisement

ಸಾಮಾಜಿಕ ಅಂತರದೊಂದಿಗೆ ಸುರಕ್ಷತಾ ಕ್ರಮ ಪಾಲಿಸಿಕೊಂಡು ಹೋಟೆಲ್‌ ಕಾರ್ಯಾರಂಭಿಸಲು ಕರ್ನಾಟಕ ಪ್ರದೇಶ ಹೋಟೆಲ್‌ ಮತ್ತು ಉಪಹಾರ ಮಂದಿರಗಳ ಸಂಘ ಹಾಗೂ ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಸಂಘದಿಂದ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಆದರೆ, ಪಾರ್ಸೆಲ್‌ ಹೊರತುಪಡಿಸಿ, ಬೇರೆ ಯಾವುದೇ ಸೇವೆಗೆ ಅನುಮತಿ ಸಿಕ್ಕಿಲ್ಲ. ಕೇಂದ್ರ ಸರ್ಕಾರ  ನೀಡುವ ನಾಲ್ಕನೇ ಹಂತದ ಲಾಕ್‌ಡೌನ್‌ ಮಾರ್ಗಸೂಚಿ ಆಧಾರದ ಮೇಲೆ ಹೋಟೆಲ್‌ಗ‌ಳಿಗೆ ಅನುಮತಿ ಸಾಧ್ಯತೆಯಿದೆ ಎಂದರು.

ಉದ್ಯಮಗಳಿಗೆ ಬಡ್ಡಿರಹಿತ ಸಾಲ ಅಗತ್ಯ: ಸರ್ಕಾರ ಹೋಟೆಲ್‌ ಉದ್ಯಮಿಗಳಿಗೆ ಈವರೆಗೂ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಕನಿಷ್ಠ ಎರಡು ವರ್ಷಗಳ ಅವಧಿಗಾದರೂ ಬಡ್ಡಿರಹಿತ ಸಾಲದ ವ್ಯವಸ್ಥೆ ಮಾಡಬೇಕು. ಹೋಟೆಲ್‌  ಉದ್ಯಮ ಚೇತರಿಸಿಕೊಳ್ಳಲು ಸರ್ಕಾರ ಅಗತ್ಯ ಸೌಲಭ್ಯ ನೀಡಬೇಕು. ಹೋಟೆಲ್‌ ಆರಂಭಕ್ಕೆ ಅನುಮತಿ ನೀಡಬೇಕು. ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದ್ದೇವೆ ಎಂದು ಕರ್ನಾಟಕ ಪ್ರಾದೇಶಿಕ ಹೋಟೆಲ್‌ ಮತ್ತು ಉಪಹಾರ ಮಂದಿರಗಳ  ಸಂಘದ ಅಧ್ಯಕ್ಷ ಚಂದ್ರಶೇಖರ್‌ ಹೆಬ್ಟಾರ್‌ ತಿಳಿಸಿದರು.

ಪ್ರಸ್ತುತ ಜನರಿಗೆ ಹೋಟೆಲ್‌ ಸೇವೆ ಅಗತ್ಯವಿದೆ. ಹೋಟೆಲ್‌ಗ‌ಳಿಂದ ಕೊರೊನಾ ವೈರಸ್‌ ಹರಡಲು ಸಾಧ್ಯವಿಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರ ಹೋಟೆಲ್‌ಗ‌ಳನ್ನು ತೆರೆಯಲು ಅನುಮತಿ ನೀಡಬೇಕು.
-ಚಂದ್ರಶೇಖರ್‌ ಹೆಬ್ಟಾರ್‌, ಉಪಹಾರ ಮಂದಿರಗಳ ಸಂಘದ ಅಧ್ಯಕ್ಷ

ಹೋಟೆಲ್‌ಗ‌ಳಲ್ಲಿ ಶೇ. 40ಕ್ಕೂ ಹೆಚ್ಚು ಅನ್ಯರಾಜ್ಯದ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ. ಈಗ ಅವರಲ್ಲಿ ಅನೇಕರು ಊರಿಗೆ ಹೋಗಿದ್ದಾರೆ. ಉತ್ತರ ಭಾರತ ಮತ್ತು ಚೈನೀಸ್‌ ಮೆನು ಸಿದ್ಧಪಡಿಸುವುದು ಕಷ್ಟವಾಗಬಹುದು. 
-ಸುಬ್ರಹ್ಮಣ್ಯ ಹೊಳ್ಳ, ಕಾರ್ಯದರ್ಶಿ, ಬೃಹತ್‌ ಬೆಂಗಳೂರು ಹೋಟೆಲ್‌ಗ‌ಳ ಸಂಘ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next