ಜೇವರ್ಗಿ: ಕಾರ್ಮಿಕರು ಸರಕಾರದ ಸೌಲಭ್ಯ ಪಡೆಯುವುದರ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾ ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ ಸೆಂಟ್ರಲ್ ಯೂನಿಯನ್ ಕಲಬುರಗಿ ವಿಭಾಗದ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಾಜ್ಯ ಸದಸ್ಯರನ್ನಾಗಿ ನೇಮಕಗೊಂಡ ಶಂಕರ ಕಟ್ಟಿ ಸಂಗಾವಿ ಅವರಿಗೆ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಮಿಕರು ದೇಶದ ಆಸ್ತಿಯಾಗಿದ್ದಾರೆ. ತಮ್ಮ ದುಡಿಮೆಗೆ ಬೆಲೆ ಸಿಗುವವರೆಗೂ ಅವಿರತವಾಗಿ ಹೋರಾಟ ಮಾಡಬೇಕು. ಶಂಕರ ಕಟ್ಟಿ ಸಂಗಾವಿ ಒಬ್ಬ ಪ್ರಾಮಾಣಿಕತೆ ವ್ಯಕ್ತಿ. ಇಂತಹ ವ್ಯಕ್ತಿಯಿಂದ ಕಾರ್ಮಿಕರಿಗೆ ಅವರ ಹಕ್ಕುಗಳು ಮತ್ತು ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಸಾಧ್ಯ.
ಕಾರ್ಮಿಕರಿಗಾಗಿ ಇರುವ ಆಸ್ಪತ್ರೆ, ಸೌಲಭ್ಯ ಹಾಗೂ ಶೈಕ್ಷಣಿಕ ಲಾಭಗಳನ್ನು ದೊರಕಿಸಿಕೊಡುವ ಪ್ರಯತ್ನ ಶಂಕರ ಕಟ್ಟಿ ಸಂಗಾವಿ ಮಾಡಲಿ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲಬುರಗಿ ವಿಭಾಗದ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸದಸ್ಯ ಶಂಕರ ಕಟ್ಟಿ ಸಂಗಾವಿ, ಕಾರ್ಮಿಕರು ನನಗೆ ಸನ್ಮಾನ ಮಾಡುವುದನ್ನು ಬಿಡಬೇಕು.
ಕಾರ್ಮಿಕರ ಹಕ್ಕುಗಳ ಬಗ್ಗೆ ಇರುವ ಮಾಹಿತಿಯನ್ನು ಇತರ ಕಾರ್ಮಿಕರಿಗೆ ಹಂಚುವ ಕೆಲಸವಾಗಬೇಕು. ಸರಕಾರಗಳು ಬೆಂಬಲಕ್ಕೆ ನಿಂತರೆ ಕಾರ್ಮಿಕರ ಭವಿಷ್ಯ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ಖಾನಗೌಡ, ಎಸ್.ಕೆ. ಹೇರೂರ, ಎಸ್.ಎಸ್. ಸಲಗರ, ಶಿವಾನಂದ ದ್ಯಾಮ ಗೊಂಡ, ಚಂದ್ರಶೇಖರ ಮಲ್ಲಾಬಾದ, ಪ್ರಕಾಶ ಪಾಟೀಲ ಯತ್ನಾಳ, ಭೀಮಾಶಂಕರ ಮದರಿ, ಪ್ರಭು ಸರಕಾರ ಯಡ್ರಾಮಿ, ಗೌಸ ಮೈನೋದ್ದೀನ್ ಖಾದ್ರಿ, ನಿಂಗಣ್ಣಗೌಡ ನಂದಿಹಳ್ಳಿ, ಕೇರನಾಥ ಪಾರ್ಶಿ, ವಿಜಯಕುಮಾರ ಹಿರೇಮಠ, ಸಿದ್ದು ಮಾವನೂರ ಇದ್ದರು.