Advertisement
ರಾಮನಗರ ವಿಧಾನಸಭಾ ಕ್ಷೇತ್ರದ ತಾಲೂಕಿನ ಹಾರೋಹಳ್ಳಿ ಹೋಬಳಿಯ ದ್ಯಾವಸಂದ್ರ ಗ್ರಾಪಂ ವ್ಯಾಪ್ತಿಯ ಕಟ್ಟಡ ಕೂಲಿ ಕಾರ್ಮಿಕರಿಗೆ ವಿತರಣೆ ಮಾಡಲು ಹಾಲಿನ ಡೇರಿಯಲ್ಲಿ ಕಳೆದ ಒಂದು ವರ್ಷದಿಂದ ಆಹಾರ ಕಿಟ್ ಶೇಖರಣೆ ಮಾಡಲಾಗಿತ್ತು. ಆದರೆ, ಕಾರ್ಮಿಕ ಇಲಾಖೆಯ ಆಹಾರ ಕಿಟ್‌ಗಳ ವಾಯಿದೆ ಮುಗಿದು ಅಕ್ಕಿ, ಬೇಳೆ, ರವೆ ಸೇರಿದಂತೆ ಆಹಾರ ಪದಾರ್ಥಗಳು ಹಾಳಾಗಿದ್ದು, ದಿನನಿತ್ಯ ಇಲಿ, ಹೆಗ್ಗಣಗಳಿಗೆ ಆಹಾರವಾಗುತ್ತಿದೆ.
Related Articles
Advertisement
ಗ್ರಾಮಸ್ಥರಿಂದ ಜನಪ್ರತಿನಿಧಿಗಳಿಗೆ ಶಾಪ: ದ್ಯಾವಸಂದ್ರ ಗ್ರಾಮದ ಹಾಲಿನ ಡೇರಿಯಲ್ಲಿ ಕಳೆದ ಒಂದು ವರ್ಷದಿಂದ ಶೇಖರಣೆ ಮಾಡಿರುವ ಆಹಾರ ಕಿಟ್‌ಗಳು ಹಾಳಾಗಿರುವುದನ್ನು ಕಂಡ ಸ್ಥಳೀಯರು, ಯಾರಾದರೂ ಬಡವರಿಗೆ ವಿತರಿಸಿ ಎಂದು ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಯಾವೊಬ್ಬ ಜನಪ್ರತಿನಿಧಿಯೂ, ಸ್ಥಳೀಯ ಮುಖಂಡರು ತಲೆಕೆಡಿಸಿಕೊಂಡಿಲ್ಲ ಎಂದು ದ್ಯಾವಸಂದ್ರ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸರ್ಕಾರದ ಉದ್ದೇಶ ಈಡೇರಿಸಲು ವಿಫಲ: ಕ್ಷೇತ್ರದ ಶಾಸಕರು ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಅದರಲ್ಲೂ ಕೊರೊನಾ ಸಂಕಷ್ಟದಲ್ಲಿದ್ದ ಕಟ್ಟಡ, ಕೂಲಿ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಿ ನೆರವಾಗಬೇಕಿತ್ತು. ಆದರೆ, ಸರ್ಕಾರದ ಉದ್ದೇಶ ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಸ್ಥಳಿಯ ಮುಖಂಡರು ಕಿಟ್‌ಗಳನ್ನು ತಮ್ಮ ಮನೆಯಲ್ಲಿ ಶೇಖರಣೆ ಮಾಡಿಕೊಂಡು ತಮಗೆ ಬೇಕಾದವರಿಗೆ ಹಂಚಿಕೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೆ, ಈ ವಿಚಾರ ಮಾಧ್ಯಮದವರಿಗೆ ತಿಳಿಯುತ್ತಿದ್ದಂತೆ ಸ್ಥಳೀಯ ಮುಖಂಡರು ಡೇರಿ ಕಟ್ಟಡದಲ್ಲಿ ಸಂಗ್ರಹವಾಗಿದ್ದ ಆಹಾರ ಕಿಟ್‌ಗಳನ್ನು ಖಾಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಏನೇ ಆದರೂ ಕೊರೊನಾ ಸಂಕಷ್ಟದಲ್ಲಿ ಕಾರ್ಮಿಕರ ಹಿತ ಕಾಯಬೇಕಿದ್ದ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಆಹಾರ ಪದಾರ್ಥಗಳು ಮಣ್ಣು ಪಾಲಾಗಿರುವುದು ವಿಪರ್ಯಾಸ.
ವಾಯಿದೆ ಮುಗಿದು ಆಹಾರ ಪದಾರ್ಥಗಳು ಹಾಳು :
ಕೋವಿಡ್ ಸಂಕಷ್ಟದಲ್ಲಿ ಬಡ ಕೂಲಿ ಕಾರ್ಮಿಕರಿಗೆ ನೆರವಾಗಲು ಸರ್ಕಾರ ಆಹಾರ ಕಿಟ್ ನೀಡಿತ್ತು. ಆದರೆ, ಅರ್ಹರಿಗೆ ತಲುಪಿಸಬೇಕಾದ ಜನಪ್ರತಿನಿಧಿಗಳು ಕಳೆದ 10 ತಿಂಗಳಿಂದ ಯಾರಿಗೂ ನೀಡದೆ ಹಾಲಿನ ಡೇರಿಯಲ್ಲಿ ಶೇಖರಣೆ ಮಾಡಿದ್ದಾರೆ. ಎಲ್ಲಾ ಪದಾರ್ಥಗಳ ವಾಯಿದೆ ಮುಗಿದು ಹಾಳಾಗಿದೆ. ಯಾರಾದರೂ ಬಡ ಕೂಲಿ ಕಾರ್ಮಿಕರಿಗೆ ವಿತರಣೆ ಮಾಡಿ ಎಂದು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಿಲ್ಲ. ಇಂತಹ ಜನಪ್ರತಿನಿಧಿಗಳಿಂದ ಬಡವರ ಕಲ್ಯಾಣ ಎಂದೂ ಸಾಧ್ಯವಿಲ್ಲ ಎಂದು ಗ್ರಾಮಸ್ಥ ವಿನಯ್ ಕುಮಾರ್ ಆರೋಪ ಮಾಡಿದ್ದಾರೆ.
ಕಳೆದ ಕೋವಿಡ್ ಲಾಕ್‌ಡೌನ್‌ನಲ್ಲಿ ಕಾರ್ಮಿಕ ಇಲಾಖೆಯಡಿ ಕಟ್ಟಡ, ಇತರೆ ನಿರ್ಮಾಣ ಕಲ್ಯಾಣ ಮಂಡಳಿಗೆ ಪ್ರತಿ ತಾಲೂಕಿನ ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ತಲಾ 5 ಸಾವಿರ ಕಿಟ್ ನೀಡಲಾಗಿತ್ತು. ಅರ್ಹರಿಗೆ ತಲುಪಿಸುವ ಹೋಣೆ ಅವರದ್ದೆ ಆಗಿತ್ತು. ಇಲಾಖೆಯಿಂದ ಅರ್ಹರ ಪಟ್ಟಿ ನೀಡಿದ್ದೇವೆ. ನಮಗೂ ಅದಕ್ಕೂ ಸಂಬಂಧವಿಲ್ಲ. – ಶೇಖರ್ ಎಸ್.ಗಡದ್, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ, ರಾಮನಗರ
-ಉಮೇಶ್.ಬಿ.ಟಿ