Advertisement

ಮನೆಮಗನಂತಿದ್ದ ಕೆಲಸದವನೇ ಕದ್ದ!

06:18 AM Jan 10, 2019 | Team Udayavani |

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕಾರ್ಯದರ್ಶಿ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಬ್ರಿಜೇಶ್‌ ಪಟೇಲ್‌ ಅವರ ನಿವಾಸದಲ್ಲಿ 11 ವರ್ಷಗಳಿಂದ ಕೆಲಸಮಾಡಿಕೊಂಡಿದ್ದ ಗುಜರಾತ್‌ ಮೂಲದ ವ್ಯಕ್ತಿ, ಅವರ ಮನೆಯಲ್ಲಿನ ಚಿನ್ನ, ಬೆಳ್ಳಿ, ವಜ್ರದ ಆಭರಣಗಳನ್ನು ಕಳವು ಮಾಡಿದ ಆರೋಪದಲ್ಲಿ ಇದೀಗ ಜೈಲು ಸೇರಿದ್ದಾನೆ.

Advertisement

ಈ ಕುರಿತು ಡಿ.3ರಂದು ಬ್ರಿಜೇಶ್‌ ಪಟೇಲ್‌ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದ ಜೆ.ಸಿ.ನಗರ ಠಾಣೆ ಪೊಲೀಸರು, ಆರೋಪಿ ಮಂಗಲ್‌ ಭಾಯ್‌ ಠಾಕೂರ್‌ (29) ಎಂಬಾತನನ್ನು ಬಂಧಿಸಿದ್ದು, ಆತನಿಂದ 4.5 ಕೆ.ಜಿ ಬೆಳ್ಳಿ ಆಭರಣ ಹಾಗೂ ವಸ್ತುಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ.

ಉಡುಗೊರೆ ಬಂದ ಬೆಳ್ಳಿ ಕದ್ದಿದ್ದ: ಬ್ರಿಜೇಶ್‌ ಪಟೇಲ್‌ ಕುಟುಂಬದವರ ನಂಬಿಕೆ ಗಳಿಸಿಕೊಂಡಿದ್ದ ಮಂಗಲ್‌ ಭಾಯ್‌, ಎರಡು ವರ್ಷಗಳಿಂದ ಬೆಳ್ಳಿ ವಸ್ತುಗಳು ಸೇರಿದಂತೆ ಇನ್ನಿತರೆ ಆಭರಣಗಳನ್ನು ಒಂದೊಂದಾಗಿ ಕಳವು ಮಾಡಿದ್ದು ಬೆಳಕಿಗೆ ಬಂದಿರಲಿಲ್ಲ. ಬ್ರಿಜೇಶ್‌ ಅವರಿಗೆ ಅತ್ಯಾಪ್ತರೊಬ್ಬರು ನೀಡಿದ ಬೆಳ್ಳಿಯ ಬಟ್ಟಲು ಕಳವಾಗಿದ್ದರಿಂದ ಬಹಳಷ್ಟು ನೊಂದುಕೊಂಡಿದ್ದ ಅವರು ಮನೆಯಲ್ಲಿ ಕೆಲಸ ಮಾಡುವ ಎಲ್ಲರಲ್ಲೂ ವಿಚಾರಿಸಿದ್ದರೂ ಗೊತ್ತಾಗಿರಲಿಲ್ಲ. ಹೀಗಾಗಿ ಪರಿಶೀಲನೆ ನಡೆಸಿದಾಗ, 20 ಕೆ.ಜಿ ಬೆಳ್ಳಿ ವಸ್ತುಗಳು, ಲಕ್ಷಾಂತರ ರೂ. ಮೌಲ್ಯದ ವಜ್ರಾಭರಣ ಹಾಗೂ ಚಿನ್ನಾಭರಣಗಳ ಸೆಟ್‌ಗಳು, 1500 ಅಮೆರಿಕನ್‌ ಡಾಲರ್‌, 2ಲಕ್ಷ ರೂ. ಮೌಲ್ಯದ ಹ್ಯಾಂಡ್‌ ಬ್ಯಾಗ್‌ ಕೂಡ ಕಳವುವಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಡಿ.3ರಂದು ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ದಾಖಲಾದ ಕೂಡಲೇ ರಜೆಯ ನೆಪ ಹೇಳಿ ಮನೆ ಬಿಟ್ಟು ಹೋಗಿ ತಲೆಮರೆಸಿಕೊಂಡಿದ್ದ ಮಂಗಲ್‌ ಭಾಯ್‌ನನ್ನು ವಿಶೇಷ ತಂಡ ಬಂಧಿಸಿದೆ. ಆತ ಸಂಗ್ರಹಿಸಿಟ್ಟಿದ್ದ 3.5 ಕೆ.ಜಿ ಬೆಳ್ಳಿ ವಸ್ತುಗಳನ್ನು ಜಪ್ತಿಮಾಡಿಕೊಳ್ಳಲಾಗಿದೆ. ಡಾಲರ್‌, ಹಾಗೂ ಇನ್ನಿತರೆ ಚಿನ್ನಾಭರಣಗಳ ಬಗ್ಗೆ ಬಾಯಿಬಿಡುತ್ತಿಲ್ಲ. ಆತನನ್ನು ಸತತ ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮತ್ತೂಬ್ಬ ಆರೋಪಿ ಭಾಗಿ ಶಂಕೆ: ಆರೋಪಿ ಮಂಗಲ್‌ ಭಾಯ್‌ ಠಾಕೂರ್‌ ಕಳವಿಗೆ ಆತನ ಸ್ನೇಹಿತ ಪಿಂಟೋ ಎಂಬಾತ ಸಹಕಾರ ನೀಡುತ್ತಿದ್ದ.ಮಂಗಲ್‌ ಭಾಯ್‌ ಕದಿಯುತ್ತಿದ್ದ ಆಭರಣಗಳನ್ನು ಪಿಂಟೋ ಪಡೆದು ಅವುಗಳನ್ನು ಅಡವಿಟ್ಟು ಹಣಕೊಡಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೊಲ್ಕತ್ತಾ ಮೂಲದ ಪಿಂಟೋ ಎಂಬಾತನನ್ನು ವಿಚಾರಣೆ ನಡೆಸಬೇಕಿದೆ, ಸದ್ಯ ತಲೆಮರೆಸಿಕೊಂಡಿರುವ ಪಿಂಟೋ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಮನೆ ಮಗನಂತಿದ್ದವನು ಕಳ್ಳನಾದ: ಕಳೆದ 11 ವರ್ಷಗಳಿಂದ ಬ್ರಿಜೇಶ್‌ ಪಟೇಲ್‌ ಅವರ ಮನೆಯಲ್ಲಿ ಅಡುಗೆ ಕೆಲಸ ಸೇರಿ ಇನ್ನಿತರೆ ಕೆಲಸ ಮಾಡುತ್ತಿದ್ದ ಮಂಗಲ್‌ ಭಾಯ್‌ ಠಾಕೂರ್‌, ಕುಟುಂಬದವರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ಕೃತ್ಯ ಎಸಗಿದ್ದಾನೆ.

ಬ್ರಿಜೇಶ್‌ ಪಟೇಲ್‌ ಹಾಗೂ ಅವರ ಪತ್ನಿ, ಮಂಗಲ್‌ ಭಾಯ್‌ನನ್ನು ಮನೆ ಮಗನಂತೆ ನೋಡಿಕೊಂಡಿದ್ದರು. ಮನೆಯಲ್ಲಿಯೇ ಪ್ರತ್ಯೇಕ ಕೊಠಡಿ ನೀಡಿದ್ದರು. ಮನೆಯ ಎಲ್ಲ ಕಡೆ ಓಡಾಡಲು ಆತನಿಗೆ ಅವಕಾಶ ನೀಡಿದ್ದರು, ಇಡೀ ಮನೆಯ ಕೀ ಆತನಿಗೆ ನೀಡುತ್ತಿದ್ದರು. ಇಷ್ಟೇ ಅಲ್ಲದೆ ಆತ ಸ್ವಂತ ಊರಾದ ವೆರು ಗ್ರಾಮದಲ್ಲಿ ಮನೆ ಕಟ್ಟಿಕೊಳ್ಳಲು ಹಾಗೂ ವಿವಾಹಕ್ಕೂ ಹಣಕಾಸಿನ ನೆರವು ನೀಡಿದ್ದರು. ಆತನ ಇಬ್ಬರು ಮಕ್ಕಳಿಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೇರಿಸಿ ಆಗಾಗ್ಗೆ ಖರ್ಚುವೆಚ್ಚ ಭರಿಸುತ್ತಿದ್ದರು ಎಂದು ಅಧಿಕಾರಿ ಹೇಳಿದರು.

11 ವರ್ಷ ಮನೆಕೆಲಸ ಮಾಡಿಕೊಂಡಿದ್ದವನಿಂದ ಕಳವು
ಸದ್ದಿಲ್ಲದೆ, ಚಿನ್ನ, ಬೆಳ್ಳಿ, ವಜ್ರದ ಆಭರಣಗಳನ್ನು ಕದಿಯುತ್ತಿದ್ದ
ಉಡುಗೊರೆ ರೂಪದಲ್ಲಿ ಬಂದಿದ್ದ ಬೆಳ್ಳಿ ಬಟ್ಟಲು ಕದ್ದಿದ್ದ ಮಂಗಲ್‌ ಭಾಯ್‌ ಠಾಕೂರ್‌

ಬ್ರಿಜೇಶ್‌ ಪಟೇಲ್‌ ಅವರ ನಿವಾಸದಲ್ಲಿನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆ ಕೆಲಸ ಮಾಡಿಕೊಂಡಿದ್ದ ಮಂಗಲ್‌ ಭಾಯ್‌ ಠಾಕೂರ್‌ನನ್ನು ಬಂಧಿಸಿದ್ದು, 4.5 ಕೆ.ಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಹಲವು ಆಭರಣಗಳು ಹಾಗೂ ವಸ್ತುಗಳನ್ನು ಜಪ್ತಿಯಾಗಬೇಕಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.
 ಡಾ.ಚೇತನ್‌ಸಿಂಗ್‌ ರಾಥೋಡ್‌, ಉತ್ತರ ವಿಭಾಗದ ಡಿಸಿಪಿ

ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next