Advertisement

ಕೋಡಿ: ಉಪ್ಪು ನೀರು ಕೊರೆತಕ್ಕೆ ಬೇಕಿದೆ ತಡೆಗೋಡೆ

06:02 PM Jul 12, 2024 | Team Udayavani |

ಕುಂದಾಪುರ: ಕೋಡಿ ಜೆಟ್ಟಿ (ಬಂದರು) ಸಮೀಪದಲ್ಲಿ ಉಪ್ಪುನೀರಿನ ಕೊರೆತದಿಂದ ಕೃಷಿಭೂಮಿ ವರ್ಷದಿಂದ ವರ್ಷಕ್ಕೆ ಕಣ್ಮರೆಯಾಗುತ್ತಿದೆ. ಇದಕ್ಕೆ ಪರಿಹಾರವಾಗಿ ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ. ಈ ತಡೆಗೋಡೆ
ಯನ್ನು ರಸ್ತೆಯಾಗಿಯೂ ಬಳಸಬಹುದು ಎನ್ನುವುದು ಅವರ ಲೆಕ್ಕಾಚಾರ.

Advertisement

ಬಂದರು ಸಮೀಪ ಅಪಾಯ ಕೋಡಿ ಬಂದರಿನ ಸಮೀಪ ಐವತ್ತರಷ್ಟು ಮನೆಗಳಿವೆ. ಕೃಷಿಭೂಮಿಯಿದೆ. ಆದರೆ ಕೃಷಿ ಹಾಗೂ ಕುಡಿಯುವ ನೀರಿಗೆ ಉಪ್ಪುನೀರಿನ ಸಮಸ್ಯೆ. ವರ್ಷದಿಂದ ವರ್ಷಕ್ಕೆ ಕೃಷಿ ಭೂಮಿ ನಾಶವಾಗುತ್ತಿದೆ. ಮನೆಗಳೂ ಮುಳುಗುತ್ತವೆ. ಕೆಲವು ವರ್ಷ ಸಂದರೆ ಮನೆಗಳೂ ಕಡಲ ಕೊರೆತಕ್ಕೆ ಸಿಲುಕಿ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಇಲ್ಲಿ ಹತ್ತಾರು ಬೋಟ್‌ ಗಳು ನಿಲುಗಡೆಯಾಗುತ್ತವೆ. ಈ ಎಲ್ಲ ಕಾರಣದಿಂದ ತಡೆಗೋಡೆಯ ಅಗತ್ಯವನ್ನು ಸ್ಥಳೀಯರು ಮನಗಂಡಿದ್ದಾರೆ.

ಏನಿದು ಸಮಸ್ಯೆ?
ಪ್ರಸ್ತುತ ಕೋಡಿ ಸೀವಾಕ್‌ ಪ್ರವಾಸೋದ್ಯಮ ತಾಣವಾಗಿ ಗುರುತಿಸಲ್ಪಟ್ಟಿದೆ. ವಾರಾಂತ್ಯದಲ್ಲಿ ಸಾವಿರಾರು ಮಂದಿ ಆಗಮಿಸುತ್ತಾರೆ. ಹಾಗೆ ಆಗಮಿಸಲು ಅವರಿಗೆ ಚಕ್ರೇಶ್ವರಿ ದೇವಸ್ಥಾನದ ದಾರಿಯ ಹೊರತಾಗಿ ಇರುವ ಇನ್ನೊಂದು ಸಮೀಪದ ದಾರಿ ಎಂದರೆ ಶಿವಾಲಯ ಸಮೀಪದ ದಾರಿ. ಈ ದಾರಿ ಸ್ವಲ್ಪ ಇಕ್ಕಟ್ಟಾದರೂ ಪುರಸಭೆ ಡಾಮರು ಹಾಗೂ ಕಾಂಕ್ರೀಟ್‌ ಹಾಕಿ ಸಂಚಾರಯೋಗ್ಯವನ್ನಾಗಿಸಿದೆ. ಆದ್ದರಿಂದ ಕಾರು, ಜೀಪು, ರಿಕ್ಷಾದಂತಹ ಎಲ್ಲ ವಾಹನಗಳೂ ಇದೇ ರಸ್ತೆಯಲ್ಲಿ ಸಾಗುತ್ತವೆ. ಜನಸಂದಣಿ ಹೆಚ್ಚಿದ್ದಾಗ ಇಲ್ಲಿ ಸಂಚಾರದಟ್ಟಣೆ ಉಂಟಾಗುತ್ತದೆ.

ರಸ್ತೆಯಾಗಿ ಬಳಕೆ ಸಾಧ್ಯತೆ
*ಬಂದರು ಸಮೀಪ ಹಾದು ಹೋದ ರಸ್ತೆಯನ್ನು ಚರ್ಚ್‌ರೋಡ್‌ ಮೂಲಕ ಹೋದಾಗ ದೊರೆಯುವ ಜಟ್ಟಿಗೇಶ್ವರ ದೇವಾಲಯ ಸಮೀಪಕ್ಕೆ ಜೋಡಿಸಬಹುದು. ತಡೆಗೋಡೆ ಹಾಗೂ ರಸ್ತೆ ಎರಡೂ ರಚನೆಯಾದರೆ ಈ ಭಾಗದ ಇನ್ನೊಂದು ದೊಡ್ಡ ಸಮಸ್ಯೆಯೂ ನಿವಾರಣೆಯಾಗಲಿದೆ.

Advertisement

*ಶಿವಾಲಯ ಸಮೀಪ ಹೋದ ಇಕ್ಕಟ್ಟಾದ ರಸ್ತೆಯ ಬಳಕೆಗೆ ಪರ್ಯಾಯವಾಗಿ ಬಂದರು ಸಮೀಪದಿಂದ ಜಟ್ಟಿಗೇಶ್ವರ ದೇವಾಲಯಕ್ಕೆ ಹೋಗುವ ರಸ್ತೆಯನ್ನು ಬಳಸಬಹುದು. ಇದೊಂದು ರಿಂಗ್‌ರೋಡ್‌ ಆಗಿಯೂ ಉಪಯೋಗವಾಗುತ್ತದೆ.

*ಕೋಡಿ ಸೇತುವೆ ಬಳಿಯ ಜಟ್ಟಿಗೇಶ್ವರ ದೇವಸ್ಥಾನ ಎದುರಿನಿಂದ ಸೀವಾಕ್‌ ಬಳಿಯ ಮೀನುಗಾರಿಕಾ ಬೋಟ್‌ ನಿಲ್ಲುವ ಜೆಟ್ಟಿಯ ತನಕ ಕೇವಲ 500 ಮೀಟರ್‌ ಆಸುಪಾಸಿನ ಅಂತರದ ರಿಂಗ್‌ ರಸ್ತೆ ನಿರ್ಮಿಸಬೇಕು. ನಗರದ ರಿಂಗ್‌ ರಸ್ತೆಗೆ ರೂ. 20 ಕೋಟಿ ಅನುದಾನ ಮಂಜೂರು ಆಗಿರುವಾಗ ಈ ಸಣ್ಣ ಕಾಮಗಾರಿಗೆ 2-3 ಕೋಟಿ ರೂ. ಅನುದಾನ ತರುವುದು ಶಾಸಕರಿಗೆ ಕಷ್ಟವಲ್ಲ. ಸುತ್ತು ಬಳಸಿ ಸಾಗುವ ಸುಮಾರು 1.5 ಕಿ.ಮೀ. ಉಳಿಯುತ್ತದೆ. ಶಿವಾಲಯದ ಆಸುಪಾಸಿನ ನಿವಾಸಿಗಳಿಗೆ ಕಿರಿಕಿರಿ ಕೂಡ ತಪ್ಪಲಿದೆ ಎನ್ನುತ್ತಾರೆ ಊರವರು.

ಇನ್ನೊಂದು ರಿಂಗ್‌ರೋಡ್‌
ಕೋಡಿ ಪರಿಸರದಲ್ಲಿ ಇನ್ನೊಂದು ರಿಂಗ್‌ ರೋಡ್‌ಗೂ ಬೇಡಿಕೆಯಿದೆ. ನಗರದಲ್ಲಿ ಒಂದು ರಿಂಗ್‌ ರಸ್ತೆಗೆ 20 ಕೋ.ರೂ. ವೆಚ್ಚದಲ್ಲಿ
ಕಾಮಗಾರಿ ಆರಂಭವಾಗಲಿದೆ. ಈ ರಸ್ತೆ ಪರಿಪೂರ್ಣವಾಗಲು ಇನ್ನೂ 16 ಕೋ.ರೂ. ಅಗತ್ಯವಿದೆ. ಕೋಡಿ ಪರಿಸರದಲ್ಲಿ ಅದೆಷ್ಟೋ
ವರ್ಷದಿಂದ ಹೊಳೆಯ ಉಪ್ಪು ನೀರು ಊರಿನ ಅರ್ಧ ಭಾಗದಷ್ಟು ಭೂಮಿಯನ್ನೇ ನಾಶ ಮಾಡಿದೆ. ಕೋಡಿ ಗದ್ದೆಯಲ್ಲಿ ನೀರು
ಸೇರಿ ಕೊಳೆತು ನಾರುವ ವಾಸನೆಯ ಜತೆಗೆ ಹಗಲು ರಾತ್ರಿ ಎನ್ನದೆ ಸೊಳ್ಳೆಗಳ ಕಾಟದಿಂದ ಜನರು ಬೇಸತ್ತು ಹೋಗಿದ್ದಾರೆ. ಇಲ್ಲಿಯ
ವ್ಯವಸ್ಥೆ ಕೇಳುವವರೇ ಇಲ್ಲ. ಗ್ರಾಮಸ್ಥರ ಯಾವ ಮನವಿಗೂ ಪುರಸಭೆ ಸ್ಪಂದಿಸಲೇ ಇಲ್ಲ  ಎನ್ನುತ್ತಾರೆ ಶರತ್‌ ಶೇರೆಗಾರ್‌. ಕುಂದಾಪುರಕ್ಕೆ ಕೋಡಿ ಅನತಿ ದೂರ ಇರುವುದಿಂದಲೋ ಕೋಡಿ ಪುರಸಭೆ ವ್ಯಾಪ್ತಿಯಲ್ಲಿ ಇದೆಯೋ ಇಲ್ಲವೋ ಎಂಬ ಭಾವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಇದ್ದಿರಬಹುದು ಎನ್ನುತ್ತಾರೆ ಕೋಡಿ ಅಶೋಕ್‌ ಪೂಜಾರಿ.

ರಿಂಗ್‌ ರಸ್ತೆ ಪರಿಹಾರ
ಇಲ್ಲಿನ ಸಮಸ್ಯೆ ನಿವಾರಣೆಗೆ ಪರಿಹಾರ ರಿಂಗ್‌ ರಸ್ತೆ. ಕೋಡಿ ಸೇತುವೆ ಬಳಿಯಿಂದ ಸೀವಾಕ್‌ಗೆ ಈ ನೇರ ರಸ್ತೆ ಬಹಳಷ್ಟು ಉಪಕಾರವಾಗಲಿದೆ. ಈಗಾಗಲೇ ಶಿವಾಲಯ ಮೂಲಕ ಇಕ್ಕಟ್ಟಾದ ರಸ್ತೆಯಲ್ಲಿ ವಾರಾಂತ್ಯದಲ್ಲಿ, ರಜಾದಿನಗಳಲ್ಲಿ ಸಂಜೆಯ ಹೊತ್ತು ಬಹಳಷ್ಟು ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಶಾಸಕರು ಆದ್ಯತೆಯ ಮೇರೆಗೆ ಈ ಕಾಮಗಾರಿಗೆ ಮಂಜೂರಾತಿ ಒದಗಿಸಿದಲ್ಲಿ ಪ್ರವಾಸಿಗರಿಗೆ, ವಿಹಾರಾರ್ಥಿಗಳಿಗೆ ಅನುಕೂಲವಾಗಲಿದೆ.
ನಾಗರಾಜ ಕಾಂಚನ್‌
ಪುರಸಭೆ ಮಾಜಿ ಸದಸ್ಯ, ಕೋಡಿ,

ಬೇಡಿಕೆ ಗಮನದಲ್ಲಿದೆ
ಊರವರ ಬೇಡಿಕೆ ಗಮನದಲ್ಲಿದೆ. ತಡೆಗೋಡೆ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆ ಜತೆ ಚರ್ಚಿಸಲಾಗುವುದು.
ಕಿರಣ್‌ ಕುಮಾರ್‌ ಕೊಡ್ಗಿ ಶಾಸಕ, ಕುಂದಾಪುರ

*ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next