ತಿ.ನರಸೀಪುರ: ಸರ್ಕಾರದ ಅನುದಾನ ಉದ್ದೇಶಿತ ಯೋಜನೆಗಳಿಗೆ ಬಳಕೆಯಾಗದೆ ವಾಪಸ್ಸಾಗಬಾರದು. ಮುಂದಿನ ಆರ್ಥಿಕ ಸಾಲಿನಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳು ಮತ್ತು ಕಾರ್ಯಕ್ರಮಗಳ ಅಂದಾಜು ಪಟ್ಟಿಯನ್ನು ತಾಪಂಗೆ ಸಲ್ಲಿಸಬೇಕೆಂದು ತಾಪಂ ಅಧ್ಯಕ್ಷ ಸಿ.ಚಾಮೇಗೌಡ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಸಮಿತಿ ಸಭೆಯಲ್ಲಿ ಕಳೆದ ಸಾಲಿನ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಅಧಿಕಾರಿಗಳಿಂದ ಸ್ವೀಕೃತಗೊಂಡ ತಾಪಂ ಇಲಾಖಾವಾರು 2017-18ನೇ ಆರ್ಥಿಕ ಸಾಲಿನ ಉದ್ದೇಶಿತ ಕ್ರಿಯಾ ಯೋಜನೆಗೆ ಜೂ.28ರಂದು ನಡೆಯುವ ಸಾಮಾನ್ಯ ಸಭೆಯಲ್ಲಿ ಅಂತಿಮ ಅನುಮೋದನೆ ನೀಡಲಾಗುವುದು ಎಂದರು. ಸಭೆಯಲ್ಲಿ ಇಲಾಖೆಯ ಮುಖ್ಯ ಅಧಿಕಾರಿಗಳು ಖುದ್ದಾಗಿ ಹಾಜರಿರಬೇಕು. ಬಳಕೆಯಾಗಿರುವ ಅನುದಾನದ ಬಗ್ಗೆಯೂ ಮಾಹಿತಿಯನ್ನು ನೀಡಬೇಕೆಂದು ಸಿ.ಚಾಮೇಗೌಡ ತಾಕೀತು ಮಾಡಿದರು.
ಮುಖ್ಯಾಧಿಕಾರಿಗಳೇ ಬರಲಿ: ಕಾರ್ಯನಿರ್ವಹಕ ಅಧಿಕಾರಿ ಬಿ.ಎಸ್.ರಾಜು ಮಾತನಾಡಿ, ಸಾಮಾನ್ಯ ಸಭೆಗಳಿಗೆ ಇಲಾಖೆಗಳ ಮುಖ್ಯ ಅಧಿಕಾರಿಗಳು ಬಾರದ್ದರಿಂದ ಪ್ರಗತಿ ಪರಿಶೀಲನೆಯಲ್ಲಿ ಹಲವು ಲೋಪದೋಷಗಳು ಕಂಡುಬರುತ್ತಿವೆ. ಮುಖ್ಯ ಅಧಿಕಾರಿಗಳು ಹಾಜರಿದ್ದು, ಅನುಷ್ಠಾನಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರಗಳುಳ್ಳ ಮಾಹಿತಿಯನ್ನು ನೀಡಬೇಕು. ಚುನಾಯಿತ ಪ್ರತಿನಿಧಿಗಳ ಸಹಭಾಗಿತ್ವಕ್ಕೆ ಸಹಕಾರ ನೀಡಬೇಕು. ಜೂ.28ರ ಸಾಮಾನ್ಯ ಸಭೆಗೆ ಅನ್ಯರನ್ನು ಕಳುಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ತಾಪಂ ಸದಸ್ಯರಾದ ಎಂ.ರಮೇಶ್ ಹಾಗೂ ಕೆ.ಎಸ್.ಗಣೇಶ್ ಮಾತನಾಡಿ, ತೆಂಗುಬೆಳೆ ಅಭಿವೃದ್ಧಿ ಕಾರ್ಯಕ್ರಮದಡಿ ಕೆಲವರು ತೋಟಗಾರಿಕೆ ಇಲಾಖೆಯಿಂದ ಅನುದಾನ ಪಡೆದುಕೊಂಡರೂ ಸಸಿಗಳನ್ನು ನೆಟ್ಟಿಲ್ಲ. ತೆಂಗುಬೆಳೆ ಅಭಿವೃದ್ಧಿ ಅನುದಾನ ದುರ್ಬಳಕೆಯಾಗುತ್ತಿದ್ದರೂ ಸಹಾಯಕ ನಿರ್ದೇಶಕರು ನಿರ್ಲಕ್ಷಿಸಿದ್ದಾರೆಂದು ಆರೋಪಿಸಿದರು.
ತೋಟಗಾರಿಕೆ ಸಹಾಯಕ ನಿರ್ದೇಶಕ ಶ್ರೀಧರ್ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ತೆಂಗುಬೆಳೆ ಅಭಿವೃದ್ಧಿಗೆ 11 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ತಲಾ 6,250 ರೂ. ಮೊತ್ತದ ಅನುದಾನವನ್ನು ಚೆಕ್ ಮೂಲಕ ವಿತರಿಸಲಾಗಿದೆ. ಅನುದಾನ ದುರ್ಬಳಕೆಗೆ ಅವಕಾಶ ನೀಡಿಲ್ಲವೆಂದು ಸ್ಪಷ್ಟಪಡಿಸಿದರು.
ಸಹಾಯಕ ಕೃಷಿ ನಿರ್ದೇಶಕ ಡಾ.ಎನ್.ಕೃಷ್ಣಮೂರ್ತಿ ಮಾತನಾಡಿ, ವಿಶೇಷ ಘಟಕ ಯೋಜನೆಯಡಿ ಕೃಷಿ ಇಲಾಖೆಯ ಸೌಲಭ್ಯಗಳಿಗೆ ಫಲಾನುಭವಿಗಳನ್ನು ಆಯ್ಕೆಮಾಡುವ ಪಟ್ಟಿಯಲ್ಲಿ ಹೆಚ್ಚುವರಿ ಮಂದಿಯನ್ನು ಆಯ್ಕೆ ಮಾಡಿ ಕಳುಹಿಸಲಾಗಿದೆ. ಇದರಿಂದ ಗೊಂದಲವುಂಟಾಗಿದ್ದು, ಫಲಾನುಭವಿಯ ಪಟ್ಟಿಯನ್ನು ಮರುಪರಿಶೀಲಿಸಬೇಕೆಂದು ಕೋರಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಬಿ.ಸಾಜಿದ್ ಅಹಮ್ಮದ್, ಶ್ರೀನಿವಾಸಗೌಡ, ಚಿನ್ನಮ್ಮ ಸಿದ್ದರಾಜು, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಡಿ.ಎಸ್.ಪ್ರೇಮ್‌ಕುಮಾರ್, ಜಿಪಂ ಎಇಇ ಎಸ್.ಸಿದ್ದರಾಜು, ಸಾಮಾಜಿಕ ಅರಣ್ಯಾಧಿಕಾರಿ ಎಸ್.ಪರಮೇಶ್ವರಪ್ಪ, ಮೀನುಗಾರಿಕೆ ಸಹಾಯಕ ನಿರ್ದೇಶಕಿ ಶಿಲ್ಪಾ, ಸಿಡಿಪಿಒ ಬಿ.ಎನ್.ಬಸವರಾಜು, ಪಶುಪಾಲನೆ ಸಹಾಯಕ ನಿರ್ದೇಶಕ ಡಾ.ಚಿನ್ನಸ್ವಾಮಿ, ಆರೋಗ್ಯಾಧಿಕಾರಿ ಎಸ್.ಸಿ.ಮಹದೇವಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಕೃಷ್ಣಪ್ಪ, ಸಿಆರ್‌ಪಿ ಭಗವಾನ್, ಟಿಒಟಿ ನಾಗರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.