Advertisement

ಎತ್ತಿನಹೊಳೆ ಕಾಮಗಾರಿ ಅಭಿವೃದ್ಧಿ ಪರಿಶೀಲನೆ

11:09 AM Mar 08, 2017 | Team Udayavani |

ಬೆಳ್ತಂಗಡಿ: ಹಸಿರುಪೀಠದಲ್ಲಿ ವಾದ ವಿವಾದ ಮುಂದುವರಿದಿರುವಂತೆಯೇ ಎತ್ತಿನಹೊಳೆಯಲ್ಲಿ ಕಾಮಗಾರಿ ಮಾತ್ರ ಭರದಿಂದ ಸಾಗಿದೆ. ಅಧಿಕಾರಿಗಳ ತಂಡ ಮಂಗಳವಾರ ಕಾಮಗಾರಿ ಸ್ಥಳದಲ್ಲಿ ಈವರೆಗೆ ಆದ ಕಾಮಗಾರಿಯ ಅಭಿವೃದ್ಧಿಯನ್ನು ಪರಿಶೀಲನೆ ನಡೆಸಿತು.

Advertisement

ಸಚಿವ ಎಂ.ಬಿ. ಪಾಟೀಲ್‌ ಸೂಚನೆ ಮೇರೆಗೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿತು. ಈ ಬಗ್ಗೆ ಎಂ.ಬಿ. ಪಾಟೀಲ್‌ ಅವರು ಕೂಡ ಫೇಸ್‌ಬುಕ್‌ನಲ್ಲಿ ಸ್ಟೇಟಸ್‌ ಹಂಚಿಕೊಂಡಿದ್ದು ಎತ್ತಿನಹೊಳೆಯ ಕಾಮಗಾರಿಗಳು ತ್ವರಿತವಾಗಿ ನಡೆಯುತ್ತಿವೆ. ರಾಜ್ಯದ ದಕ್ಷಿಣ ಭಾಗದಲ್ಲಿ ಕುಡಿಯುವ ನೀರಿನ ಅಭಾವವಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಿಕ್ಕಮಗಳೂರು, ತುಮಕೂರು, ಹಾಸನ ಜಿಲ್ಲೆಗಳ ಸುಮಾರು 68.35 ಲಕ್ಷ ಜನರಿಗೆ ಕುಡಿಯುವ ನೀರು ಒದಗಿಸಲು ಈ ಯೋಜನೆ ಸಹಕಾರಿ. ಎತ್ತಿನಹೊಳೆ ಯೋಜನೆಯ ಪ್ಯಾಕೇಜ್‌1ರ ವಿಯರ್‌ ನಿರ್ಮಾಣ, ರೈಸಿಂಗ್‌ ಮೈನ್‌ ಅಳವಡಿಸುವ ಕಾರ್ಯ ನಡೆಯುತ್ತಿದ್ದು ಪ್ಯಾಕೇಜ್‌2ರ ಪಂಪ್‌ಹೌಸ್‌ ನಿರ್ಮಾಣ ಕಾಮಗಾರಿಗಳು ಭರದಿಂದ ಸಾಗುತ್ತಿವೆ ಎಂದು ಹಾಕಿದ್ದಾರೆ. 4 ದಿನಗಳ ಹಿಂದೆ ಕೂಡ ಈ ಬಗ್ಗೆ ಅವರು ಬರೆದುಕೊಂಡಿದ್ದರು. ಇದರಲ್ಲಿ ಎಂಟು ನೀರು ಕೊಯ್ಲು ನಿರ್ಮಾಣಗಳ ಪೈಕಿ 6 ಪೂರ್ಣಗೊಂಡಿವೆ. ಬರುವ ಮುಂಗಾರಿನಲ್ಲಿ ನೀರನ್ನು ಶೇಖರಿಸಿ ಮುಖ್ಯ ಕಾಲುವೆಯ ಇಕ್ಕೆಲಗಳಲ್ಲಿ ಬರುವ ಒಣಗಿದ ಕೆರೆಗಳಿಗೆ ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ ಕಾಮಗಾರಿಯ ವಿವರಗಳು ಸ್ಥಳೀಯರಿಗೆ ಲಭ್ಯವಾಗುತ್ತಿಲ್ಲ. ಅಧಿಕಾರಿಗಳು ಕೂಡ ಸ್ಥಳೀಯರಿಗೆ ಮಾಹಿತಿ ನೀಡುತ್ತಿಲ್ಲ. ಹಸಿರುಪೀಠದಲ್ಲಿ ಇನ್ನೂ ಅಂತಿಮವಾದ ನಡೆದಿಲ್ಲ. ಹಾಗಾಗಿ ತೀರ್ಪು ಕೂಡ ವಿಳಂಬವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next