Advertisement

ನಿಧಾನಗತಿಯಲ್ಲಿ ಸಾಗಿದ ಕಾಮಗಾರಿ: ಬೊಂಡಾಲ: ಬಾಲಕಿಯರ ಹಾಸ್ಟೆಲ್‌ ನಿರ್ಮಾಣ

04:05 PM Jun 21, 2023 | Team Udayavani |

ಬಂಟ್ವಾಳ: ಬಂಟ್ವಾಳ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಬಿಸಿಡಬ್ಲ್ಯುಡಿ)ಯ ಮೂಲಕ ಬೊಂಡಾಲದಲ್ಲಿ ಸುಮಾರು ರೂ. 2 ಕೋ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಾಲಕಿಯರ ಹಾಸ್ಟೆಲ್‌ ಕಟ್ಟಡ ಕಾಮಗಾರಿ ಇನ್ನೂ ನಿಧಾನಗತಿಯಲ್ಲಿ ಸಾಗಿದ್ದು, ಕಳೆದ ಡಿಸೆಂಬರ್‌ನಲ್ಲೇ ಕಾಮಗಾರಿ ಪೂರ್ಣಗೊಳ್ಳ ಬೇಕಿತ್ತಾದರೂ ಇನ್ನೂ ಕೂಡ 2-3 ತಿಂಗಳು ಕಾಮಗಾರಿ ವಿಳಂಬ ಸಾಧ್ಯತೆ ಇದೆ.

Advertisement

ಬಿ.ಸಿ. ರೋಡ್‌ಗೆ ಮಂಜೂರುಗೊಂಡು ಪ್ರಸ್ತುತ ಪಾಣೆಮಂಗಳೂರಿನಲ್ಲಿ ಕಾರ್ಯಾ ಚರಿಸುತ್ತಿರುವ ದೇವರಾಜ ಅರಸು ಮೆಟ್ರಿಕ್‌ ಅನಂತರದ ಬಾಲಕಿಯರ ಹಾಸ್ಟೆಲ್‌ಗೆ ಈ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಾಸ್ಟೆಲ್‌ ನಿರ್ಮಾಣಕ್ಕಾಗಿ ಬೊಂಡಾಲದಲ್ಲಿ ಮೀಸಲಿರಿಸಲಾದ ಒಂದು ಎಕ್ರೆ ಪ್ರದೇಶದಲ್ಲಿ ದ.ಕ.ಜಿಲ್ಲಾ ನಿರ್ಮಿತಿ ಕೇಂದ್ರದವರು ಕಟ್ಟಡ ಕಾಮಗಾರಿ ನಿರ್ವಹಿಸುತ್ತಿದ್ದಾರೆ.

ಪ್ರಸ್ತುತ ಕಟ್ಟಡ ನಿರ್ಮಾಣದ ಕಾಮ ಗಾರಿ ಬಹುತೇಕ ಪೂರ್ಣಗೊಂಡಿದ್ದು, ಒಳಾಂಗಣ ಗೋಡೆಯ ಪ್ಲಾಸ್ಟರಿಂಗ್‌ ಕೂಡ ಪೂರ್ತಿಯಾಗಿದೆ. ನೆಲದ ಕಾಮಗಾರಿ ಪ್ರಗತಿಯಲ್ಲಿದೆ. ನೆಲಅಂತಸ್ತಿನ ಕಾಮಗಾರಿ ಪೂರ್ತಿಗೊಂಡರೆ ಈ ಭಾಗದಲ್ಲಿ ಹಾಸ್ಟೆಲ್‌ ಆರಂಭಕ್ಕೆ ಅನುಕೂಲವಾಗಲಿದ್ದು, ಇನ್ನೂ ಒಂದಷ್ಟು ತಿಂಗಳು ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ.

7,500 ಚ.ಅಡಿ ವಿಸ್ತೀರ್ಣದ ಕಟ್ಟಡ
ಪ್ರಸ್ತುತ ಲಭ್ಯ ಅನುದಾನದಲ್ಲಿ ಒಟ್ಟು 7,500 ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಾಣವಾಗಲಿದ್ದು, ಸ್ಥಳಾವಕಾಶದ ದೃಷ್ಟಿಯಿಂದ ಇಲಾಖೆಯು ಒಂದು ಅಂತಸ್ತಿನ ಕಟ್ಟಡ (ಜಿ ಪ್ಲಸ್‌ ವನ್‌) ನಿರ್ಮಿ ಸುವಂತೆ ಪ್ರಾರಂಭದಲ್ಲೇ ಸಂಬಂಧಪಟ್ಟ ಎಂಜಿನಿಯರಿಂಗ್‌ ವಿಭಾಗಕ್ಕೆ ಮನವಿ ಮಾಡಿತ್ತು. ರೂ. 2 ಕೋ. ಮಂಜೂರಾತಿಯ ಜತೆಗೆ ಹೆಚ್ಚುವರಿಯಾಗಿ ಇನ್ನೊಂದು ಕೋ.ರೂ.ಗಳಿಗೂ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಇಲಾಖೆಗೆ ಈ ಭಾಗದಲ್ಲಿ ಸದ್ಯ ಒಂದು ಎಕ್ರೆ ಪ್ರದೇಶ ಮಾತ್ರ ಲಭ್ಯವಿರುವುದರಿಂದ ಕಡಿಮೆ ಸ್ಥಳದಲ್ಲಿ ಒಂದು ಹಾಸ್ಟೆಲ್‌ ನಿರ್ಮಾಣಗೊಂಡರೆ, ಉಳಿದ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಮತ್ತೂಂದು ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಜಿ ಪ್ಲಸ್‌ ವನ್‌ ಕಟ್ಟಡಕ್ಕೆ ಆದ್ಯತೆ ನೀಡಲಾಗಿದೆ.

Advertisement

ಇನ್ನಷ್ಟು ಅನುದಾನದ ಅಗತ್ಯ
ಬೊಂಡಾಲದ ನಿವೇಶನದಲ್ಲಿ 2020ರಲ್ಲಿ ಹಾಸ್ಟೆಲ್‌ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಜಾಗದ ಸಮತಟ್ಟಿನ ವಿಚಾರಕ್ಕೆ ಸಂಬಂಧಿಸಿ ಪ್ರಾರಂಭದಲ್ಲೇ ಕಾಮಗಾರಿ ವಿಳಂಬವಾಗಿತ್ತು. ಜಿಲ್ಲಾ ನಿರ್ಮಿತಿ ಕೇಂದ್ರದ ಮಾಹಿತಿ ಪ್ರಕಾರ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನದ ಅಗತ್ಯ ಇದ್ದು, ಅದಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ನಿವೇಶನದ ಮಧ್ಯೆ ಇದ್ದ ಬೃಹತ್‌ ಬಂಡೆ ಕಲ್ಲನ್ನು ತೆರವು ಮಾಡುವುದಕ್ಕೆ ಹೆಚ್ಚಿನ ಮೊತ್ತ ಖರ್ಚಾಗಿದ್ದು, ಅದು ಕ್ರಿಯಾಯೋಜನೆಯಲ್ಲಿ ಸೇರಿರಲಿಲ್ಲ. ಮುಂದಿನ ಬಜೆಟ್‌ ಘೋಷಣೆಯ ಬಳಿಕ ಅನುದಾನ ಬರುವ ಸಾಧ್ಯತೆ ಇದ್ದು, ಬಿಡುಗಡೆಗೊಂಡ ತತ್‌ಕ್ಷಣ ಕಾಮಗಾರಿ ಪೂರ್ತಿಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಹಲವು ಕಾರಣಕ್ಕೆ ವಿಳಂಬ
ಹಲವು ಕಾರಣಕ್ಕೆ ಕಟ್ಟಡ ನಿರ್ಮಾಣ ವಿಳಂಬವಾಗಿದ್ದು, ಬೇಗ ಪೂರ್ಣಗೊಳಿಸುವಂತೆ ಇಲಾಖೆಯಿಂದ ಒತ್ತಡ ಹಾಕುತ್ತಲೆ ಇದ್ದೇವೆ. ಹೆಚ್ಚುವರಿ ಅನುದಾನದ ಅಗತ್ಯದ ಕುರಿತು ನಿರ್ಮಿತಿ ಕೇಂದ್ರದವರು ಹೇಳುತ್ತಿದ್ದು, ಅದಕ್ಕಾಗಿ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ. ಪ್ರಾರಂಭದಲ್ಲಿ ಜಾಗದಲ್ಲಿ ಬಂಡೆಕಲ್ಲು ಇದ್ದ ಪರಿಣಾಮ ಅದರ ತೆರವಿಗೆ ಬಹಳ ಸಮಯ ತೆಗೆದುಕೊಂಡಿತ್ತು.
-ಬಿಂದಿಯಾ ನಾಯಕ್‌, ತಾಲೂಕು
 ಕಲ್ಯಾಣಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಂಟ್ವಾಳ

ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ
ಪ್ರಸ್ತುತ ಹೆಚ್ಚುವರಿ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು, ಅದು ಬಿಡುಗಡೆಯಾದ 2-3 ತಿಂಗಳಲ್ಲಿ ಕಾಮಗಾರಿ ಪೂರ್ತಿಗೊಳಿಸಲಿದ್ದೇವೆ. ಬಂಡೆಕಲ್ಲು ಒಡೆಯುವ ಮೊತ್ತ ನಮ್ಮ ಎಸ್ಟಿಮೇಟ್‌ನಲ್ಲಿ ಒಳಗೊಳ್ಳದ ಪರಿಣಾಮ ಹೆಚ್ಚುವರಿ ಮೊತ್ತದ ಅಗತ್ಯ ಬಂದಿದೆ.
-ನವೀನ್‌, ಎಂಜಿನಿಯರ್‌, ನಿರ್ಮಿತಿ ಕೇಂದ್ರ, ಮಂಗಳೂರು

 

 

Advertisement

Udayavani is now on Telegram. Click here to join our channel and stay updated with the latest news.

Next