Advertisement
ಪೊಲೀಸ್ ಇಲಾಖೆಯಲ್ಲಿ ಸಂಚಾರಿ ವಿಭಾಗದ ಪೊಲೀಸರ ನಿವೇದಿಸಿಕೊಳ್ಳಲಾಗದ ಅಂತರಾಳದ ನೋವಿನ ಕಥೆ ಇದು. ಕಳೆದ ಕೆಲ ವರ್ಷಗಳ ಹಿಂದೆ ವಿಜಯಪುರ ಮಹಾನಗರದಲ್ಲಿ ಸಂಚಾರಿ ಠಾಣೆ ಸ್ಥಾಪಿಸಿದ್ದು, ಓರ್ವ ಎಸೈ, 6 ಎಎಸೈ ಸೇರಿ 70 ಜನ ಸಿಬ್ಬಂದಿಯಲ್ಲಿ ಸದ್ಯ ಲಭ್ಯ ಇರುವುದು 65 ಜನರು ಮಾತ್ರ. ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನ ಪೊಲೀಸರನ್ನು ಬೆಳಗಾವಿ ವಿಭಾಗದಲ್ಲಿ ಜಿಲ್ಲೆಗಳಲ್ಲಿ ಗಣ್ಯರು ಹಾಗೂ ಒತರೆ ರೀತಿಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕಳಿಸಲಾಗುತ್ತದೆ. ಅಲ್ಲಿಗೆ ನೈಜ ಕರ್ತವ್ಯಕ್ಕೆ ಉಳಿಯುವುದು ಅರ್ಧಕ್ಕಿಂತ ಕಡಿಮೆ ಸಿಬ್ಬಂದಿ.
Related Articles
Advertisement
ನಿರಂತರ ನಿಂತು ಕೆಲಸ ಮಾಡುವ ಕಾರಣ ದೈಹಿಕವಾಗಿ ಒತ್ತಡ ಹೆಚ್ಚುತ್ತದೆ. ಈಗಿರುವ ಎಸ್ಪಿ ಅವರಿಂದ ನಮ್ಮ ಮೇಲೆ ಒತ್ತಡ ಇಲ್ಲದಿದ್ದರೂ ಸಾಮಾನ್ಯವಾಗಿ ಹಿಂದಿನ ಎಸ್ಪಿಗಳ ಅವಧಿಯಲ್ಲಿ ಬಿಸಿಲಿನ ಧಗೆಗೆ ಕೊಂಚ ನೆರಳಿಗೆ ನಿಂತರೂ ಸಾಕು ನೊಟೀಸ್ ನೀಡುವುದು, ಛಳಿಯಿಂದಾಗಿ ದೇಹ ಬಿಸಿ ಮಾಡಿಕೊಳ್ಳಲು ಚಹಾ ಕುಡಿಯಲು ತೆರಳಿದರೂ ಇನ್‌ಕ್ರಿಮೆಂಟ್ ಕಡಿತ ಮಾಡುತ್ತಾರೆ. ಹೀಗೆ ಹಲವು ರೂಪದಲ್ಲಿ ಇಲಾಖೆ ಮೇಲಾಧಿ ಕಾರಿಗಳೇ ದಂಡನೆ ನೀಡುತ್ತಾರೆ ಎಂದು ಗೋಳು ಹೇಳಿಕೊಳ್ಳುತ್ತಾರೆ ಸಂಚಾರಿ ಪೊಲೀಸರು.
ಇನ್ನು ಕಡಿಮೆ ಸಿಬ್ಬಂದಿ ಇರುವ ಕಾರಣ ವಾರದ ರಜೆಯೂ ಇಲ್ಲ. ವಾರದ ರಜೆ ಇಲ್ಲದೇ ಸೇವೆ ಮಾಡಿದರೆ ಹೆಚ್ಚುವರಿಯಾಗಿ ವೇತನಕ್ಕೆ ದಿನಕ್ಕೆ 200 ರೂ.ನಂತೆ ತಿಂಗಳಿಗೆ 800 ರೂ. ಸೇರ್ಪಡೆಯೂ ಸೂಕ್ತವಾಗಿ ಮಾಡುವುದಿಲ್ಲ. ಅರ್ಧಕ್ಕಿಂತ ಕಡಿಮೆ ಸಿಬ್ಬಂದಿ ಸೇವೆ ಸಲ್ಲಿಸುತ್ತಿರುವ ಕಾರಣ ರಜೆ ಎಂಬುವುದು ಕನಸಿನ ಮಾತು ಎಂಬಂತಾಗಿದೆ. ತೀರಾ ಗೋಗರೆದರೆ ಒಂದೆರಡು ಗಂಟೆಗಳ ಕಾಲ ಹೋಗಿ ಬರಲು ಅನುಮತಿ ನೀಡಿದರೆ ಅದುವೇ ನಮ್ಮ ಪಾಲಿನ ಪ್ರಸಾದ ಎನ್ನುತ್ತಾರೆ ಟ್ರಾಫಿಕ್ ಪೊಲೀಸರು.
ಇದರಿಂದಾಗಿ ಕುಟುಂಬ ಸದಸ್ಯರಿಗೆ ಅನಾರೋಗ್ಯ ಕಾಡಿದರೆ, ಮಕ್ಕಳ ಶಿಕ್ಷಣ ಸಮಸ್ಯೆ ಬಂದರೆ, ಕೌಟುಂಬಿಕ ಸಮಸ್ಯೆಗಳು ಎದುರಾದರೆ, ಬಂಧುಗಳ ಕಷ್ಟ-ಸುಖದಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಕನಿಷ್ಠ 3-4 ದಿನ ರಜೆ ಸಿಕ್ಕರೆ ನಮ್ಮ ಪಾಲಿಗೆಅದು ಯಾವುದೋ ಯುದ್ಧಗೆದ್ದ ಸಂಭ್ರಮದಂತೆ ಭಾಸವಾಗುತ್ತದೆ. ಇನ್ನು ವಾಸದ ಬಹುತೇಕ ಮನೆಗಳು ದುರಸ್ಥಿ ಸ್ಥಿತಿಯಲ್ಲಿರುವ ಕಾರಣ ಹಲವು ಪೊಲೀಸರು ಪೊಲೀಸ್ ವಸತಿ ಗೃಹ ತೊರೆದು, ಆರ್ಥಿಕ ಹೊರೆಯಾದರೂ ಖಾಸಗಿ ಬಾಡಿಗೆ ಮನೆಗಳಿಗೆ ಹೋಗಿದ್ದಾರೆ ಎಂಬ ದೂರುಗಳೂ ಕೇಳಿ ಬರುತ್ತಿವೆ. ವಿಜಯಪುರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಹದಗೆಟ್ಟ ರಸ್ತೆಗಳು, ಸಂಚಾರ ನಿಯಮ ಪಾಲನೆ ಇಲ್ಲದ ವಾಹನ ಚಾಲಕರು, ಟ್ರಾಫಿಕ್ ಸಿಗ್ನಲ್ ಬಿದ್ದರೂ ರಸ್ತೆಗಳನ್ನು ದಾಟುವ ಪಾದಚಾರಿಗಳು. ಗಾಂಧೀಜಿ ವೃತ್ತದಲ್ಲಿ ಮೈಕ್‌ನಲ್ಲಿ ಹೇಳಿದರೂ ಜನರು ಸ್ಪಂದಿಸುವುದಿಲ್ಲ, ಹೀಗೆ ಒಬ್ಬೊಬ್ಬರೇ ನಿಭಾಯಿಸುವುದು ಕಷ್ಟವಾಗುತ್ತಿದೆ. ಇಷ್ಟೆಲ್ಲದ ಮಧ್ಯೆ ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮ ಮೀರಿದ ಚಾಲಕರನ್ನು ತಡೆದರೆ ರಾಜಕೀಯ ಒತ್ತಡದಿಂದ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಯಾವುದೇ ತಪ್ಪಿಗೆ ಸಣ್ಣ ವಾಹನ ತಡೆದರೂ ತಕ್ಷಣ ರಾಜಕೀಯ ಪ್ರಭಾವ ಬೀರಿ, ಮೇಲಾಧಿಕಾರಿಗಳಿಂದ ಒತ್ತಡ ತಂದು ಬಿಡಿಸಿಕೊಂಡು ಹೋಗುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲನೆ ಸಾಧ್ಯವಾಗುತ್ತಿಲ್ಲ ಎಂಬುವುದು ಸಂಚಾರಿ ವಿಭಾಗದ ಎಲ್ಲ ಪೊಲೀಸರಿಂದ ಹೊರಮೂಡುತ್ತಿರುವ ಬೇಸರದ ಮಾತು. ಜಿಲ್ಲೆಯಲ್ಲಿ ಟ್ರಾಫಿಕ್ ಪೊಲೀಸರಿಗೆ ಅನಗತ್ಯ ಕರ್ತವ್ಯದ ಹೊರೆ ಇಲ್ಲ. ರಜೆ ನಿರಾಕರಣೆ ಸೇರಿದಂತೆ ಯಾವುದೇ ರೀತಿ ಸಮಸ್ಯೆ ಇಲ್ಲ. ಇಲಾಖೆಯ ಎಲ್ಲ ಸಿಬ್ಬಂದಿಯೂ ನನ್ನ ಕುಟುಂಬ ಸದಸ್ಯರಿದ್ದಂತೆ. ಹೀಗಾಗಿ ಯಾವುದೇ ಸಿಬ್ಬಂದಿ ತಮ್ಮ ಸಮಸ್ಯೆಗಳು ಏನೇ ಇದ್ದರೂ ನನ್ನ ಬಳಿ ನೇರವಾಗಿ ಹೇಳಿಕೊಂಡರೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ. ಏಕೆಂದರೆ ಅವರ ಸಮಸ್ಯೆ ಎಂದರೆ ಅದು ನನ್ನದೇ ಸಮಸ್ಯೆ ಇದ್ದಂತೆ.
ಕುಲದೀಪಕುಮಾರ ಜೈನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಪುರ ಜಿ.ಎಸ್. ಕಮತರ