ಎಚ್.ಡಿ.ಕೋಟೆ: ತಾರಕ ನದಿಯ ನೀರಿನ ಪ್ರವಾಹಕ್ಕೆ ಸಿಲುಕಿ ಸಂಪರ್ಕ ಕಳೆದುಕೊಂಡಿದ್ದ ಅಂಕನಾಥಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಸ್ಥಳಕ್ಕೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಯಿಂದ ಪ್ರವಾಹಕ್ಕೆ ಸಿಲುಕಿದ್ದ ನಾಗನಹಳ್ಳಿ ಮಾರ್ಗದ ಹಿರೇಹಳ್ಳಿಯಿಂದ ಅಂಕನಾಥಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತಾರಕ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಜಲಾವೃತವಾಗಿ ಸೇತುವೆ ಕುಸಿದು ಗ್ರಾಮದ ಸಂಪರ್ಕ ಕಳೆದುಕೊಂಡಿತ್ತು.
ಅಂಕನಾಥಪುರ, ಅಂಕನಾಥಪುರ ಹಾಡಿ ಸೇರಿದಂತೆ ಇನ್ನಿತರ ಗ್ರಾಮಗಳ ಜನರು 8 ಕಿ.ಮೀ. ಬದಲಾಗಿ 20 ಕಿ. ಮೀ. ಅಂತರದ ರಸ್ತೆ ಮಾರ್ಗವಾಗಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂಕನಾಥಪುರ ಗ್ರಾಮದ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಲು ಶಾಸಕ ಅನಿಲ್ ಚಿಕ್ಕಮಾದು ಸರ್ಕಾರದ ಗಮನ ಸೆಳೆದಿದ್ದರು.
ಇದೀಗ ಕಾಮಗಾರಿ ಶುರುವಾಗಿದ್ದು, ಕೆಲವು ದಿನಗಳಲ್ಲಿ ಗ್ರಾಮದ ಸಂಪರ್ಕ ಸೇತುವೆ ಕಾಮಗಾರಿ ಪೂರ್ಣಗೊಂಡು ಸಂಚಾರ ಪುನರಾಂಭಗೊಳ್ಳಲಿದೆ. ಶಾಸಕ ಅನಿಲ್ ಚಿಕ್ಕಮಾದು ತಾಲೂಕಿನ ಚಿಕ್ಕನಂದಿ, ಶೀರನಹುಂಡಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲು ಆಗಮಿಸಿದ್ದ ಸಂದರ್ಭದಲ್ಲಿ ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದರು.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯಸೇತುವೆ ಮಾರ್ಗ ಇದಾಗಿದ್ದು, ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದರು.