ಬೆಂಗಳೂರು: ಬರಪೀಡಿತ ಜಿಲ್ಲೆಗಳ 68 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯ ಎತ್ತಿನಹೊಳೆ ಯೋಜನೆ ಕಾಮಗಾರಿಯ ವೇಗ ಹೆಚ್ಚಿಸುವಂತೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸೂಚನೆ ನೀಡಿದ್ದಾರೆ.
ಶುಕ್ರವಾರ ನಡೆದ ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಅನುಷ್ಠಾನ ಸರ್ಕಾರಕ್ಕೆ ಸವಾಲಾಗಿದೆ. ಅಧಿಕಾರಿಗಳು ಸರ್ಕಾರದ ಉದ್ದೇಶ ಈಡೇರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
12,900 ಕೋಟಿ ರೂ. ಯೋಜನೆಯ ಬಗ್ಗೆ ಸರ್ಕಾರ ಬದ್ಧತೆ ಹೊಂದಿದ್ದು, ಕುಡಿಯುವ ನೀರು ಪೂರೈಕೆ ಗುರಿಯ ಈ ಯೋಜನೆಯಿಂದ ಬೇರೆ ಯಾರಿಗೂ ತೊಂದರೆಯಾಗುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಡುವ ಹೊಣೆಗಾರಿಕೆಯೂ ನಿಮ್ಮ ಮೇಲಿದೆ ಎಂದು ತಿಳಿಸಿದರು.
ಯೋಜನೆಯಡಿ ಎಂಟು ಕಡೆ ಜಲಸಂಗ್ರಹಾಲಯ ನಿರ್ಮಾಣ ಪೈಕಿ 6 ಕಡೆ ಕಾಮಗಾರಿ ಪೂರ್ಣಗೊಂಡಿರುವುದರಿಂದ ಮಳೆಗಾಲದಲ್ಲಿ ಅಲ್ಲಿ ನೀರು ಸಂಗ್ರಹಿಸಿ ಕೆರೆಗಳಿಗೆ ಹರಿಸುವ ಕೆಲಸ ಮಾಡಿ. ಆ ಮೂಲಕ ಯೋಜನೆಯಿಂದ 24 ಟಿಎಂಸಿ ನೀರು ದೊರೆಯುವುದಿಲ್ಲ ಎಂಬ ಆರೋಪಗಳನ್ನು ಸುಳ್ಳು ಮಾಡಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕರ್ನಾಟಕ ನೀರಾವರಿ ನಿಗಮಕ್ಕೆ ಸರ್ಕಾರ ನೀಡಿರುವ 5348 ಕೋಟಿ ರೂ.ಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಹಣ ಬಳಕೆಯಾದರೆ ಮುಂದೆ ಮತ್ತಷ್ಟು ಅನುದಾನಕ್ಕೆ ಬೇಡಿಕೆ ಇಡಲು ಸಾಧ್ಯವಾಗುತ್ತದೆ. ಹಣದ ವೆಚ್ಚ ಪಾರದರ್ಶಕವಾಗಿರಬೇಕು ಎಂದು ತಿಳಿಸಿದರು.
ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್.ರುದ್ರಯ್ಯ, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಗುರುಪಾದಸ್ವಾಮಿ ಮತ್ತಿತರು ಉಪಸ್ಥಿತರಿದ್ದರು.