ಚಿಂಚೋಳಿ: ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಿದರೆ ಜನರು ನಮ್ಮನ್ನು ಗುರುತಿಸುತ್ತಾರೆ. ಹಣ ಮುಖ್ಯವಲ್ಲ ಗುಣ ಮುಖ್ಯವಾಗಿದೆ ಎಂದು ತಾಪಂ ಯೋಜನಾಧಿಕಾರಿ ಶಂಕರ ರಾಠೊಡ ಹೇಳಿದರು.
ತಾಪಂ ಸಭಾಂಗಣದಲ್ಲಿ ಜಿಪಂ ಉಪ ನಿರ್ದೇಶಕರು ಮತ್ತು ಮೌಲ್ಯಮಾಪನ ಅಧಿಕಾರಿಗಳಾಗಿ ಪದೋನ್ನತ್ತಿ ಹೊಂದಿದ ಪ್ರಯುಕ್ತ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾಪಂ ಸಿಬ್ಬಂದಿ ಸಹಕಾರದಿಂದ ನರೇಗಾ ಯೋಜನೆ ಅಡಿಯಲ್ಲಿ 49 ಸಾವಿರ ಜಾಬ್ ಕಾರ್ಡ್ ನೀಡಿ ಜನರಿಗೆ 11500 ಮಾನವ ದಿನ ಉದ್ಯೋಗ ನೀಡಿ ಉತ್ತಮ ಸಾಧನೆ ಮಾಡಿದ್ದರಿಂದ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ. 300 ಪಂಪ್ ಆಪರೇಟರ್‌ಗಳಿಗೆ ಬಡ್ತಿ ನೀಡಲಾಗಿದೆ. 16 ಸಾವಿರ ಮನೆಗಳನ್ನು ಜನರಿಗೆ ನೀಡಿದ್ದರಿಂದ ತಾಲೂಕಿಗೆ ಉತ್ತಮ ಹೆಸರು ಬಂದಿದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲಕುಮಾರ ರಾಠೊಡ ಮಾತನಾಡಿ, ಅಧಿಕಾರಿಗಳಿಗೆ ಮತ್ತು ಇಲಾಖೆಗೆ ಹೆಸರು ಮತ್ತು ಸ್ಥಾನಮಾನ ಸಿಗಬೇಕಾದರೆ ಸಿಬ್ಬಂದಿ ಕಾರ್ಯವೈಖರಿ ಮುಖ್ಯವಾಗಿದೆ ಎಂದರು.
ತಾಪಂ ಸಹಾಯಕ ಯೋಜನಾ ನಿರ್ದೇಶಕ ಶಿವಶಂಕರಯ್ಯ ಸ್ವಾಮಿ ಸ್ಥಾವರಮಠ, ವ್ಯವಸ್ಥಾಪಕ ಅಣ್ಣಾರಾವ್ ಪಾಟೀಲ, ನಿರ್ಮಲಾ, ಪಿಡಿಒ ಪವನ ಮೇತ್ರಿ, ಪಿಡಿಒ ರಮೇಶ ತುಮಕುಂಟಾ, ಪಿಡಿಒ ಬಂಡೆಪ್ಪ ಧನ್ನಿ, ನಾಗೇಂದ್ರಪ್ಪ ಬೆಡಕಪಳ್ಳಿ, ಗೋವಿಂದರೆಡ್ಡಿ, ಗುರುನಾಥ ರಾಠೊಡ ಮಾತನಾಡಿದರು. ಪಂಪ್ ಆಪರೇಟರ್, ಬಿಲ್ ಕಲೆಕ್ಟರ್, ಸಿಬ್ಬಂದಿ ಭಾಗವಹಿಸಿದ್ದರು. ಪಿಡಿಒ ಗುರುನಾಥರೆಡ್ಡಿ ಹೂವಿನಬಾವಿ ಸ್ವಾಗತಿಸಿ ದರು, ಪಿಡಿಒ ರಾಮಕೃಷ್ಣ ಕೊರಡಂಪಳ್ಳಿ ನಿರೂಪಿಸಿದರು, ರಮೇಶ ದೇಗಲಮಡಿ ವಂದಿಸಿದರು.