Advertisement

ಕಾಮಗಾರಿ ಅಪೂರ್ಣ; ಅನುಷ್ಠಾನವಾಗದ ಯೋಜನೆ 

04:51 AM Mar 03, 2019 | Team Udayavani |

ವೇಣೂರು: ಗ್ರಾಮೀಣ ಭಾಗದ ಅಲ್ಲಲ್ಲಿ ತೆರೆಯಲಾದ ಕಾಯಿನ್‌ ಬೂತ್‌ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣ ಆಗಿ ಸರಿಸುಮಾರು 20 ತಿಂಗಳು ಕಳೆದರೂ ಜನತೆಗೆ ಉಪಯೋಗಕ್ಕೆ ಬಂದಿಲ್ಲ.

Advertisement

ರಾಜ್ಯ ಹೆದ್ದಾರಿಯ ಕುಕ್ಕೇಡಿಯಲ್ಲಿರುವ ಘಟಕವೊಂದು ಕಾರ್ಯಾಚರಿಸುತ್ತಿದ್ದರೆ, ಕೆಲವೆಡೆ ಕಾಮಗಾರಿಗಳೂ ಅಪೂರ್ಣವಾಗಿವೆ. ಕಾಯಿನ್‌ ಬೂತ್‌ ಅನ್ನು ಅಳವಡಿಸಿಲ್ಲ, ನೀರಿನ ಸಂಪರ್ಕ ನೀಡಲಾಗಿಲ್ಲ. ಈ ಎಲ್ಲ ಅವ್ಯವಸ್ಥೆಯಿಂದ ಸಾರ್ವಜನಿಕರ ಹಣ ಪೋಲಾಗಿದೆ.

ದ.ಕ. ಜಿ.ಪಂ.ನ ನೀರು ಮತ್ತು ನೈರ್ಮಲೀಕರಣ ವಿಭಾಗವು ಕಳೆದ ಮಾರ್ಚ್‌ ತಿಂಗಳಲ್ಲಿ ಕಾಯಿನ್‌ ಬೂತ್‌ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅನುಷ್ಠಾನಕ್ಕೆ ತಂದಿದೆ. ದ.ಕ. ಜಿಲ್ಲೆಯಲ್ಲಿ 148 ಕಡೆ ಇಂತಹ ಬೂತ್‌ ಅಳವಡಿಸಲು ಸರಕಾರ 12.58 ಕೋಟಿ ರೂ. ಖರ್ಚು ಮಾಡಿದೆ. ಬೆಳ್ತಂಗಡಿ ತಾಲೂಕಿನ 13 ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಘಟಕಗಳನ್ನು ಪ್ರಾಯೋಗಿಕವಾಗಿ ತೆರೆದು ವಿಸ್ತರಿಸಲಾಗಿದೆ. ವೇಣೂರು ಹೋಬಳಿಯಲ್ಲಿಯೇ 9ಕ್ಕೂ ಅಧಿಕ ಬೂತ್‌ ಗಳನ್ನು ನಿರ್ಮಿಸಲಾಗಿದ್ದು, ವೇಣೂರು ಹೋಬಳಿಯ ಒಂದೆರಡು ಘಟಕ ಹೊರತುಪಡಿಸಿ ಉಳಿದೆಲ್ಲವೂ ಉಪಯೋಗಕ್ಕೆ ಬಾರದಾಗಿವೆ.

 ಕಾಯಿನ್‌ ಹಾಕಬೇಕು
ಘಟಕದಲ್ಲಿ ಕಾಯಿನ್‌ ಬೂತ್‌ಗೆ 1 ರೂ. ಕಾಯಿನ್‌ ಹಾಕಿ ಬಟನ್‌ ಒತ್ತಿದಾಗ 10 ಲೀ. ನೀರು ಬರುತ್ತದೆ. ಮತ್ತೆ ನೀರು ಬೇಕಾದರೆ ಮತ್ತೆ 1 ಕಾಯಿನ್‌ ಹಾಕುವಂತೆ ಯೋಜನೆ ರೂಪಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಬೂತ್‌ ಗಳು ತ್ವರಿತಗತಿಯಲ್ಲಿ ತಲೆಎತ್ತಿವೆ. ಅದಕ್ಕೆ ಶುದ್ಧೀಕರಣ ಯಂತ್ರ, ನೀರಿನ ಸಂಪರ್ಕ ವ್ಯವಸ್ಥೆಯೇ ಇನ್ನೂ ಆಗಿಲ್ಲ. ಕೆಲವೆಡೆ ಕಾರ್ಯಾರಂಭಗೊಂಡಿ ದ್ದರೂ ತಾಂತ್ರಿಕ ದೋಷ ದಿಂದ ಸ್ಥಗಿತಗೊಂಡಿವೆ. ಮತ್ತೆ ದುರಸ್ತಿಗೊಳ್ಳದ ಬೂತ್‌ಗಳು ಇದೀಗ ಪಾಳುಬಿದ್ದಿವೆ.

 8.50 ಲಕ್ಷ ರೂ. ವೆಚ್ಚ
ಪ್ರತೀ ಶುದ್ಧ ನೀರಿನ ಘಟಕಕ್ಕೆ 8.50 ಲಕ್ಷ ರೂ. ವೆಚ್ಚ ಮಾಡಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗದೆ ಯೋಜನೆ ವಿಫಲವಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಗ್ರಾಮೀಣ ಭಾಗದ ಅಲ್ಲಲ್ಲಿ ಬಣ್ಣ ಹೊತ್ತ ಬೂತ್‌ಗಳಷ್ಟೇ ಕಾಣಸಿಗುತ್ತಿದ್ದು, 2016ರ ಬೇಸಗೆ ಕಾಲದ ಮೊದಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಹಲವು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಹಣ ಪೋಲಾಗಿದೆ.

Advertisement

ಮೇ 2ನೇ ವಾರದಲ್ಲಿ ಗುತ್ತಿಗೆ 
ಶುದ್ಧ ಕುಡಿಯುವ ಘಟಕದ ನಿರ್ಮಾಣಕ್ಕೆ ಪಾನ್‌ ಏಷ್ಯಾ ವರ್ಲ್ಡ್ ವೆಬ್‌ ಬೆಂಗಳೂರು ಅವರಿಗೆ ಗುತ್ತಿಗೆ ನೀಡಲಾಗಿ, 2016ರಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಅವರು ಕಾಮಗಾರಿ ವಿಳಂಬ ಹಾಗೂ ಟೆಂಡರ್‌ ನಿಯಮ ಪಾಲಿಸಿಲ್ಲ. ಏಳೆಂಟು ಬಾರಿ ನೋಟಿಸು ಜಾರಿ ಮಾಡಲಾಗಿತ್ತು. 2018ರ ಮಾರ್ಚ್ ನಲ್ಲಿ ಅವರ ಟೆಂಡರ್‌ ಒಪ್ಪಂದ ರದ್ದು ಮಾಡಲಾಗಿದೆ. ಚುನಾವಣೆ ಎದುರಾದ ಕಾರಣ ಮರು ಟೆಂಡರು ಕರೆಯಲು ವಿಳಂಬವಾಯಿತು. ಈಗ ಮತ್ತೆ ರೀ ಎಸ್ಟಿಮೇಟ್‌ ಮಾಡಲಾಗಿದ್ದು, ಟೆಂಡರ್‌ಗೆ ಆದೇಶ ಬಂದಿದೆ. ಅದರಲ್ಲಿನ ಗೊಂದಲಗಳಿಗೆ ಸ್ಪಷ್ಟೀಕರಣ ಪಡೆದು, ಮುಂದಿನ 2 ತಿಂಗಳು ಟೆಂಡರ್‌ ಪ್ರಕ್ರಿಯೆ ಇದ್ದು, ಏಜೆನ್ಸಿ ಆಯ್ಕೆ ಮಾಡಿ ಮೇ 2ನೇ ವಾರದಲ್ಲಿ ಗುತ್ತಿಗೆ ನೀಡಲಾಗುವುದು ಎಂದು ಜಿ.ಪಂ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿಭಾಗೀಯ ಸ. ಎಂಜಿನಿಯರ್‌ ಗೋಪಿ ತಿಳಿಸಿದ್ದಾರೆ.

 3 ಘಟಕಗಳ ಕಾಮಗಾರಿ ಅಪೂರ್ಣ
ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ 4 ಘಟಕಗಳನ್ನು ಸ್ಥಾಪಿಸಲಾಗಿದೆ. 3 ಘಟಕಗಳ ಕಾಮಗಾರಿ ಪೂರ್ಣವಾಗಿಲ್ಲ. ವೇಣೂರು ಪೇಟೆಯಲ್ಲಿರುವ ಘಟಕದ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಗೊಂಡಿತ್ತು. ಆದರೆ ಬಳಿಕದ ದಿನಗಳಲ್ಲಿ ಕಾಯಿನ್‌ ಬೂತ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ದುರಸ್ತಿಗಾಗಿ ಕಾಯಿನ್‌ ಹಾಕುವ ಯಂತ್ರವನ್ನು ಕೊಂಡೊಯ್ದಿದ್ದಾರೆ.
– ಕೆ. ವೆಂಕಟಕೃಷ್ಣರಾಜ,
ಪಿಡಿಒ, ವೇಣೂರು ಗ್ರಾ.ಪಂ.

ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next