Advertisement

ಜಲಸಿರಿ ಕಾಮಗಾರಿ; ಕೆಲವೆಡೆ ಮಂದಗತಿ

01:13 PM Mar 31, 2022 | Team Udayavani |

ಸುರತ್ಕಲ್‌: ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್‌ ವಲಯದಲ್ಲಿ 24×7 ಗಂಟೆಗಳ ಕಾಲ ಕುಡಿಯುವ ನೀರು ವಿತರಿಸುವ ಯೋಜನೆ ಜಲಸಿರಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದೆ.

Advertisement

ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿರುವ ಈ ಕಾಮಗಾರಿಗೆ ಹಲವೆಡೆ ತಾಂತ್ರಿಕ, ಜನವಸತಿ ಪ್ರದೇಶದ ತೊಡಕುಗಳು ಎದುರಾಗಿದೆ. ಸುರತ್ಕಲ್‌ ಪೂರ್ವದಲ್ಲಿ ಎರಡು ಜಲಸಿರಿ ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ನಡೆಯುತ್ತಿದೆ. ಮುಂಚೂರು ಕೊಡಿಪಾಡಿಯಲ್ಲಿ ಟ್ಯಾಂಕ್‌ ಕಾಮಗಾರಿ ಶೇ. 50ರಷ್ಟು ಮುಗಿದಿದೆ.

ಸುರತ್ಕಲ್‌ ತಡಂಬೈಲ್‌ ಸಮೀಪದ ಟ್ಯಾಂಕ್‌ ಕಾಮಗಾರಿ ಸ್ಥಳದಲ್ಲಿ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ. ಕಾಟಿಪಳ್ಳ ಮೂರನೇ ವಾರ್ಡ್‌ ನಲ್ಲಿ ಅಂಡರ್‌ಗ್ರೌಂಡ್‌ ನೀರು ಸಂಗ್ರಹ ಟ್ಯಾಂಕ್‌ ನಿರ್ಮಾಣಕ್ಕೆ ಬೃಹತ್‌ ಗುಂಡಿ ತೋಡಲಾಗಿದ್ದು, ಸಿಮೆಂಟ್‌ ಬೆಡ್‌, ಕಾಂಕ್ರೀಟ್‌ ಕಾಮಗಾರಿ ನಡೆಯುವ ಹಂತದಲ್ಲಿದೆ. ಹೊಸಬೆಟ್ಟು ವಾರ್ಡ್‌ನಲ್ಲಿ ನಾಲ್ಕು ವಾರ್ಡ್‌ಗಳಿಗೆ ನೀರು ಪೂರೈಸುವ ಟ್ಯಾಂಕ್‌ ಕಾಮಗಾರಿ ಆರಂಭವಾಗಿಲ್ಲ. ಇಲ್ಲಿ ಜನವಸತಿ ಪ್ರದೇಶವಿದ್ದು, ಪೈಪ್‌ಲೈನ್‌ ಹಾಕುವ ವಿಚಾರದಲ್ಲಿ ಸಮಸ್ಯೆ ಉಂಟಾಗಿದೆ. ಗುದ್ದಲಿ ಪೂಜೆ ನೆರವೇರಿಸಿ ಹಲವು ತಿಂಗಳಾದರೂ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಸ್ಥಳೀಯ ಮನಪಾ ಸದಸ್ಯರಿಗೆ ಪ್ರಗತಿಯ ಮಾಹಿತಿ ನೀಡಬೇಕು ಎಂಬುದು ನಮ್ಮ ಆಗ್ರಹ ಎನ್ನುತ್ತಾರೆ ಮನಪಾ ಸದಸ್ಯ ವರುಣ್‌ ಚೌಟ ಅವರು.

ಟ್ಯಾಂಕ್‌ ನಿರ್ಮಾಣದ ಬಳಿ ಹೊಸ ಪೈಪ್‌ ಅಳವಡಿಕೆ ಕಾಮಗಾರಿ ನಡೆಯಬೇಕಿದೆ. ಈಗಾಗಲೇ ಪೈಪ್‌ ಗಳನ್ನು ತರಿಸಲಾಗಿದ್ದು, ಸರ್ವೇ ಮಾಡಿದ ಸ್ಥಳದಲ್ಲಿ ಅಳವಡಿಕೆಯಾಗಲಿದೆ. ಹಲವೆಡೆ ಜಲಸಿರಿ ಕಾಮಗಾರಿ ಪೈಪ್‌ ಅಳವಡಿಕೆಗೆ ಅಗೆಯಲಾಗುತ್ತಿದ್ದು, ಸೂಕ್ತ ಬ್ಯಾರಿಕೇಡ್‌, ಮಾಹಿತಿ ಫಲಕ ಹಾಕಬೇಕಾದ ಆವಶ್ಯಕತೆಯಿದೆ. ನಗರದಲ್ಲಿ ಈಗಾಗಲೇ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿಯೂ ನಡೆಯುತ್ತಿದ್ದು, ಯಾವ ಕಾಮಗಾರಿ ಎಂಬುದರ ಬಗ್ಗೆ ಮಾಹಿತಿ ಅಳವಡಿಸಿದರೆ ಉತ್ತಮ. ಇದರಿಂದ ಜನರಿಗೆ ಸಮಸ್ಯೆಯಾದಲ್ಲಿ ದೂರು ದಾಖಲಿಸಲು ಸಾಧ್ಯವಾಗುತ್ತದೆ ಎಂಬುದು ಜನರ ಅಭಿಪ್ರಾಯ.

ನೀರಿನ ಶುಲ್ಕ ಕುರಿತಂತೆ ಜನರಿಗೆ ಮಾಹಿತಿ ಇಲ್ಲ. ಪಾಲಿಕೆ ಕಡಿಮೆ ದರದಲ್ಲಿ ನೀರು ಪೂರೈಸುತ್ತಿದ್ದರೆ, ಜಲಸಿರಿ ಯೋಜನೆಯಲ್ಲಿ ಕಾಮಗಾರಿ ಬಳಿಕ ಏಳೆಂಟು ವರ್ಷ ನಿರ್ವಹಣೆಯನ್ನು ಗುತ್ತಿಗೆ ಪಡೆದ ಸೂಯೆಜ್‌ ಪ್ರಾಜೆಕ್ಟ್ ಸಂಸ್ಥೆಯೇ ಮಾಡಬೇಕಿದ್ದು, ಈ ಎಲ್ಲ ವೆಚ್ಚ ಆಧರಿಸಿ ನಿಗದಿ ಆಗಲಿದೆ ಎನ್ನಲಾಗಿದೆ.

Advertisement

ಸಮಸ್ಯೆ ಬಗೆಹರಿಸಲು ಕ್ರಮ

ಕುಡ್ಸೆಂಪ್‌ ವತಿಯಿಂದ ಜಲಸಿರಿ ಕಾಮಗಾರಿಗಳು ನಡೆಯುತ್ತಿವೆ. ನಿಗದಿತ ಗುರಿಯೊಳಗೆ ಮುಗಿಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ತಾಂತ್ರಿಕ ಸಮಸ್ಯೆಗಳಿದ್ದರೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next