Advertisement

ಮತ್ತೆ ಕಾಂಗ್ರೆಸ್‌ ಆಡಳಿತಕ್ಕಾಗಿ ಶಕ್ತಿಮೀರಿ ದುಡಿಯಿರಿ 

07:00 AM Apr 15, 2018 | Team Udayavani |

ಬಂಟ್ವಾಳ: ಎಲ್ಲ ಜಾತಿ, ಧರ್ಮ, ಭಾಷೆಯವರನ್ನು ಪ್ರೀತಿಸಿದ್ದೇನೆ. ಆರು ಬಾರಿ ಶಾಸಕನಾಗಿ, ಸಚಿವನಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕೆಲವೇ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಕಾರ್ಯಕರ್ತರು ಶಕ್ತಿಮೀರಿ ದುಡಿದು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಅವರು ಶನಿವಾರ ಬಿ.ಸಿ.ರೋಡ್‌ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಕಾಂಗ್ರೆಸ್‌ ಚುನಾವಣ ಪ್ರಚಾರ ಸಮಿತಿಯ ಕಚೇರಿ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 1,200 ಕೋಟಿ ರೂ.ಗೂ ಅಧಿಕ ಅಭಿವೃದ್ಧಿ ಕೆಲಸಗಳು ನನ್ನ ಶಾಸಕತ್ವದ ಅವಧಿಯಲ್ಲಿ ಆಗಿವೆ. ಸಾಮರಸ್ಯಕ್ಕೆ ಒತ್ತು ನೀಡಿದ್ದೇನೆ. ಅನೇಕ ದೇವಸ್ಥಾನಗಳ ಗೌರವ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನದು ಜಾತ್ಯತೀತ ಸಿದ್ಧಾಂತ. ಎಷ್ಟೇ ಅಪಪ್ರಚಾರ ಮಾಡಿದರೂ ನನ್ನ ಜಾತ್ಯತೀತ ಮನೋಭಾವ ಬದಲಾಗದು. ಜಿಲ್ಲೆಯ ಸೌಹಾರ್ದದ ಕೊಂಡಿಯನ್ನು ಕಳಚುವುದು ಸಾಧ್ಯವಿಲ್ಲ. ಸತ್ಯಕ್ಕೆ ಜಯ ಎಂದರು. ದ.ಕ. ಜಿಲ್ಲಾ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಮಾತನಾಡಿ,  ದ.ಕ. ಜಿಲ್ಲೆಯಲ್ಲಿ ಕೋಮು ಸೌಹಾರ್ದಕ್ಕಾಗಿ ರೈ ಅವರನ್ನು ಮತ್ತೂಮ್ಮೆ ಗೆಲ್ಲಿಸಲು ಕಾರ್ಯಕರ್ತರು ಪಣ ತೊಡಬೇಕು ಎಂದು ಹೇಳಿದರು.

ಸತ್ಯ – ಸುಳ್ಳಿನ ನಡುವಿನ ಚುನಾವಣೆ
ಸಚಿವ ಯು.ಟಿ. ಖಾದರ್‌ ಮಾತನಾಡಿ. ಇದು ಸತ್ಯ ಮತ್ತು ಸುಳ್ಳಿನ ನಡುವಿನ ಚುನಾವಣೆ. ಅಪಪ್ರಚಾರ ಮಾಡುವವರು ವಿಭಜನವಾದಿಗಳು, ರಮಾನಾಥ ರೈ ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಅಪಪ್ರಚಾರ ಮಾಡುವವರು ತಮ್ಮ ಅವಧಿಯಲ್ಲಿ ಯಾಕೆ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಪಕ್ಷಕ್ಕೆ ಸೇರ್ಪಡೆ
ಇದೇ ಸಂದರ್ಭ ಕಳೆದ ತಿಂಗಳು ಸ್ವಯಂ ನಿವೃತ್ತಿ ಘೋಷಿಸಿದ ವಿಜಯ ಬ್ಯಾಂಕ್‌ ಮ್ಯಾನೇಜರ್‌ ಮತ್ತು ಬಿಲ್ಲವ ಸಮುದಾಯದ ಮುಂದಾಳು ಬೇಬಿ ಕುಂದರ್‌ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರೊಂದಿಗೆ ಬಿಜೆಪಿಯ ಹರೀಶ್‌ ಗೌಡ ಮಂಚಿ, ಕುಕ್ಕಾಜೆ ಗುರುಪ್ರಸಾದ್‌, ಗುರುಪ್ರಸಾದ್‌ ಕೊಳ್ನಾಡು, ಪಂಜಿಕಲ್ಲು ತಿಮ್ಮಪ್ಪ, ಜೆಡಿಎಸ್‌ನ ಹನೀಫ್‌ ಸೇರ್ಪಡೆಗೊಂಡರು. ಕಾಂಗ್ರೆಸ್‌ ಕಚೇರಿ ಉದ್ಘಾಟನೆಯ ವೈದಿಕ ವಿಧಿಗಳನ್ನು ಗಣಪತಿ ಮುಚ್ಚಿನ್ನಾಯ ನೆರವೇರಿಸಿದರು. ಮೊಡಂಕಾಪು ಚರ್ಚ್‌ ಧರ್ಮಗುರು ಮ್ಯಾಕ್ಸಿಂ ಎಲ್‌. ನೊರೊನ್ಹಾ, ಮಿತ್ತಬೈಲು ಮಸೀದಿಯ ಧರ್ಮಗುರು ಅಬಿದ್‌ ದಾರಿಮಿಯವರು ದೀಪ ಬೆಳಗಿ ಶುಭ ಹಾರೈಸಿದರು.

ಪ್ರಚಾರ ಸಮಿತಿ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಬೊಳ್ಳಾಯಿ, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್‌ ಶೆಟ್ಟಿ, ಮಂಜುಳಾ ಮಾವೆ, ಮಮತಾ ಡಿ.ಎಸ್‌. ಗಟ್ಟಿ, ಬಿ. ಪದ್ಮಶೇಖರ್‌ ಜೈನ್‌, ಎಂ.ಎಸ್‌. ಮೊಹಮ್ಮದ್‌, ಶಾಹುಲ್‌ ಹಮೀದ್‌, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ಪಕ್ಷದ ಪ್ರಮುಖರಾದ ಕಣಚೂರು ಮೋನು, ಮಂಗಳೂರು ಮೇಯರ್‌ ಭಾಸ್ಕರ್‌ ಮೊಲಿ, ಪ್ರಮುಖರಾದ ಎ.ಸಿ. ಭಂಡಾರಿ, ಶಶಿಧರ ಹೆಗ್ಡೆ, ನವೀನ್‌ ಡಿ’ಸೋಜಾ, ಕೆ. ಪದ್ಮನಾಭ ರೈ, ಜನಾರ್ದನ ಚಂಡ್ತಿಮಾರ್‌, ಸದಾಶಿವ ಬಂಗೇರ , ರಾಜಶೇಖರ ನಾಯಕ್‌, ಚಂದ್ರಶೇಖರ್‌ ಪೂಜಾರಿ, ರಘುಪತಿ ಶಾಸ್ತ್ರಿ, ದೀಪಕ್‌ ಪೂಜಾರಿ, ಬಂಟ್ವಾಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್‌, ಪ್ರಮುಖರಾದ ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಪ್ರಶಾಂತ್‌ ಕುಲಾಲ್‌, ಬಿ.ಕೆ. ಇದಿನಬ್ಬ ಸಹಿತ ಕಾಂಗ್ರೆಸ್‌ ಪ್ರಮುಖರು ಉಪಸ್ಥಿತರಿದ್ದರು. ಪಾಣೆಮಂಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಬ್ಟಾಸ್‌ ಆಲಿ ಸ್ವಾಗತಿಸಿ, ಬಾಲಕೃಷ್ಣ ಆಳ್ವ ಕೊಡಾಜೆ ನಿರೂಪಿಸಿ, ವಂದಿಸಿದರು.

Advertisement

ಪೇಜ್‌ ಸತ್ಯವಾದಿ
ಬಿಜೆಪಿಯವರು ಮತದಾರನ ಮನೆಗೆ ಸಂಪರ್ಕಿಸುವುದಕ್ಕೆ ಪೇಜ್‌ ಪ್ರಮುಖ್‌ ಎಂಬುದಾಗಿ ನೇಮಿಸಿದ್ದಾರೆ. ಅವರು ಸುಳ್ಳು ಅಪಪ್ರಚಾರ ಮಾಡಿಕೊಂಡು ಮನೆಗೆ ಬರುತ್ತಾರೆ. ನಾವು ಪೇಜ್‌ ಸತ್ಯವಾದಿಯನ್ನು ನೇಮಿಸುತ್ತೇವೆ. ನಮಗೆ ಸುಳ್ಳುಪಲ್ಲು ಹೇಳಿ ಪಕ್ಷ ಕಟ್ಟುವ ಅಗತ್ಯವಿಲ್ಲ. ನಾವು ಸತ್ಯವನ್ನೇ ಹೇಳುತ್ತೇವೆ.
ಬಿ. ರಮಾನಾಥ ರೈ

Advertisement

Udayavani is now on Telegram. Click here to join our channel and stay updated with the latest news.

Next