Advertisement

ಎಲ್ಲಾ ಆಸೆಗಳನ್ನೂ ಕ್ವಾರಂಟೈನ್‌ ಮಾಡಿದ್ದೇವೆ…

11:38 AM Apr 28, 2020 | mahesh |

“ಅಕೌಂಟ್ಸ್‌ ನೋಡುವುದರಲ್ಲಿ ನೀವು ಎಕ್ಸ್ ಪರ್ಟ್‌ ಅಂತ ಕೆಲಸ ಒಪ್ಪಿಸಿದರೆ, 20 ಲಕ್ಷ ಹಾಕೋ ಜಾಗದಲ್ಲಿ 20 ಕೋಟಿ ಅಂತ ಹಾಕಿದ್ದೀರಲ್ರಿ’ ಎಂದು ಬಾಸ್‌ ರೇಗಿದರು…

Advertisement

ನನ್ನ ಹೆಂಡತಿಯ ಬಗ್ಗೆ ಎಲ್ಲಿಲ್ಲದ ಹೆಮ್ಮೆ. ಈ ಜಗತ್ತಿನಲ್ಲಿ ಲಾಕ್‌ಡೌನ್‌ನ ಮೊದಲ ವಾಸನೆ ಬಡಿದದ್ದು ಇವಳಿಗೆ. ಅದು ಹೇಗೆ ಪತ್ತೆ ಹಚ್ಚಿದಳ್ಳೋ ಗೊತ್ತಿಲ್ಲ. ಈ ಅನುಮಾನ ಏಕೆಂದರೆ, ಕೋವಿಡ್ ಸೋಂಕಿನ ಆರ್ಭಟ ಶುರುವಾಗುವ ಒಂದು ವಾರ ಮೊದಲೇ, ನಮ್ಮ ಮನೆಗೆ ಅವರಮ್ಮನನ್ನು ಕರೆಸಿಕೊಂಡಿದ್ದಳು. ಸ್ವಲ್ಪ ದಿನದ ನಂತರ ಹೊರಟು ನಿಂತ ಅಮ್ಮನಿಗೆ, “ಈ ಭಾನುವಾರ ಹೋಗುವಂತೆ’ ಅಂತ ನಿಲ್ಲಿಸಿಕೊಂಡಳು, ಆಮೇಲೆ ಲಾಕ್‌ ಡೌನ್‌ ಶುರುವಾಯಿತು. ಪರಿಣಾಮ, ಅತ್ತೆಯವರು ದಾವಣಗೆರೆಗೆ ಹೋಗಲು ಆಗಲಿಲ್ಲ. ಹೀಗಾಗಿ, ನಾವಿಬ್ಬರೂ ಬಚಾವ್‌. ಹೇಗೆ ಅಂದರೆ, ನಮ್ಮಿಬ್ಬರಿಗೂ ವರ್ಕ್‌ ಫ್ರಂ ಹೋಂ. ಇಬ್ಬರು ಮಕ್ಕಳು. ಲ್ಯಾಪ್‌ಟಾಪ್‌ ಬಿಚ್ಚಿ ಕೂತರೆ ಸಾಕು, ಆಸ್ತಿಯನ್ನು ಭಾಗ ಮಾಡಿಕೊಂಡಂತೆ, ಇಬ್ಬರೂ ಲ್ಯಾಪ್‌ಟಾಪ್‌ಗಾಗಿ ಕಿತ್ತಾಡುತ್ತಾರೆ. ಒಂದೋ, ಅವಳು ಮೊದಲು ಕೆಲಸ ಮುಗಿಸಬೇಕು. ಇಲ್ಲವೇ, ನಾನು ಕೆಲಸ ಮುಗಿಸಬೇಕು. ನನಗೆ ಬೇರೆ ಬೇರೆ ಕಡೆಗಳಿಂದ ಗ್ರಾಹಕರ ಕಾಲ್‌ಗ‌ಳು ಇರುತ್ತವೆ. ಅವನ್ನೆಲ್ಲ ಸ್ವೀಕರಿಸಲೇಬೇಕು. ಹಾಗಾಗಿ, ನನ್ನ ಕೆಲಸ ಬೇಗ ಮುಗಿಯುವಂಥದಲ್ಲ. ಹಾಳಾಗಿ ಹೋಗ್ಲಿ, ರಜೆ ಹಾಕೋಣ ಅಂತ ಹೆಂಡತಿ ಯೋಚನೆ ಮಾಡಿದಳಾದರೂ, ಅವರ ಬಾಸ್‌ ವರ್ಕ್‌ ಫ್ರಂ ಹೋಂ ಹೇಳುವ ಮೊದಲು- “ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದೀರಿ? ಗಂಡ ಏನು ಕೆಲಸ ಮಾಡ್ತಾರೆ, ಮಕ್ಕಳ ಸ್ಕೂಲ್‌ ಫಿಸು ಎಷ್ಟು?’ ಎಂದೆಲ್ಲಾ ಮಾಹಿತಿ ತಗೊಂಡಿದ್ದರಂತೆ. ಇದು ನನ್ನವಳಲ್ಲಿ ಅನುಮಾನ
ಹುಟ್ಟು ಹಾಕಿತ್ತು. ರಜೆ ಕೇಳಿದ್ದನ್ನೇ ನೆಪ ಮಾಡಿಕೊಂಡು ಕೆಲಸದಿಂದ ತೆಗೆದು ಹಾಕಿದರೆ ಗತಿಯೇನು ಅಂದುಕೊಂಡು ಅವಳು ವಾರದ ರಜೆ ಕೂಡ ಕೇಳದೆ ಕೆಲಸ ಮಾಡುತ್ತಿದ್ದಳು. ಬೆಳಗಿನ ಜಾವ 5ಕ್ಕೆ ಎದ್ದು ಕೆಲಸ ಶುರುಮಾಡಿ, 11ಕ್ಕೆ ಮುಗಿಸಿ, ಮತ್ತೆ ಸಂಜೆ 5ಕ್ಕೆ ಲ್ಯಾಪ್‌ಟಾಪ್‌ ಕೈಗೆ ಎತ್ತಿಕೊಂಡರೆ, 8 ಗಂಟೆಗೆ ಮುಚ್ಚಿಡುತ್ತಿದ್ದಳು.

ಮೊನ್ನೆ ನಮ್ಮ ಅತ್ತೆಗೆ ಮೂಡ್‌ ಕೆಟ್ಟಿತ್ತೇನೋ; ಸಾಂಬಾರಿಗೆ ಖಾರ ಜಾಸ್ತಿ ಹಾಕಿಬಿಟ್ಟಿದ್ದರು. ಅದನ್ನು ತಿನ್ನಲಾಗದೆ ಮಕ್ಕಳು ಹಠ ಮಾಡತೊಡಗಿದ್ದವು. ಇದರಿಂದ ಮತ್ತಷ್ಟು ಸಿಟ್ಟಾದ ಆಕೆ, ಮಕ್ಕಳನ್ನು ಬಯ್ಯತೊಡಗಿದರು. ಕೆಲಸ ಮಾಡುತ್ತಾ ಕೂತಿದ್ದ ನನಗೆ ಪೀಕಲಾಟಕ್ಕೆ ಬಂತು. ಅತ್ತೆಗೆ ಜೋರು ಮಾಡುವಂತಿಲ್ಲ. ಮಕ್ಕಳನ್ನು ಹೊರಗೆ ಕರೆದೊಯ್ಯುವ ಹಾಗೂ ಇಲ್ಲ. ಕಾರಣ, ಕೋವಿಡ್. ಈಗ ಮಾಡುವುದೇನು? ಕೊನೆಗೆ ಎದ್ದು ಹೋಗಿ, ಒಂದು ಕೈಯಲ್ಲಿ ಮಕ್ಕಳಿಗೆ ಊಟ ಮಾಡಿಸಿ, ಇನ್ನೊಂದು ಕೈಯಲ್ಲಿ ವರ್ಕ್‌ ಫ್ರಂ ಹೋಂ ಮಾಡುತ್ತಿದ್ದೆ ಇದರ ಪರಿಣಾಮ, ಒಂದೆರಡು ಗಂಟೆಯ ನಂತರ ತಿಳಿಯಿತು. ಬಾಸ್‌ ಫೋನು ಮಾಡಿ, “ಏನ್ರೀ, ಗಮನ ಕೊಟ್ಟು ಕೆಲಸ ಮಾಡಕ್ಕಾಗಲ್ವಾ? ಎಂಥ ಎಡವಟ್ಟು ಮಾಡಿದ್ದೀರಿ ಗೊತ್ತಾ? ಇವತ್ತು ಯಾಕೋ ನನ್ನ
ಮೂಡ್‌ ಸರಿ ಇರಲಿಲ್ಲ. ನೀವು ಹೇಗೂ ಚೆನ್ನಾಗಿ ಅಕೌಂಟ್ಸ್‌ ನೋಡ್ತೀರಾ ಅಂದುಕೊಂಡ್ರೆ, 20 ಲಕ್ಷ ಹಾಕೋ ಜಾಗದಲ್ಲಿ 20 ಕೋಟಿ ಅಂತ ಮಾಡಿದ್ದೀರಲ್ರಿ ಹೀಗೆ, ಮಾಡಿದರೆ ನಿಮ್ಮ ಹಾಗೂ, ನನ್ನ ಜೀವನ ಪರ್ಯಂತ ದುಡಿದು ಕೊಡಬೇಕಾಗುತ್ತದೆ’ ಅಂದರು.

ಅವರ ಮಾತು ಕೇಳುತ್ತಿದ್ದಂತೆಯೇ, ಕೈಯಲ್ಲಿದ್ದ ಅನ್ನದ ತಟ್ಟೆ ಒಣಗಿ ಹೋಗಿತ್ತು, ಹೊಟ್ಟೆಯಲ್ಲಿ ಇದ್ದ ಹಸಿವು ಇಂಗಿ ಹೋಯಿತು. ಎಲ್ಲಾ ಕನಸುಗಳನ್ನು ಗಂಟು ಮೂಟೆ ಕಟ್ಟಿ, ಆಸೆಗಳನ್ನು ಕ್ವಾರಂಟೈನ್‌ ಮಾಡಿ- ಬದುಕುತ್ತಿರುವ ನಮಗೆ, ಇಂಥ ಕೋಟಿ ಬಂಡೆ ತಲೆಯ ಮೇಲೆ ಬಿದ್ದಿದ್ದರೆ ಗತಿ ಏನಾಗ್ತಿತ್ತು ಅನಿಸಿ ಭಯವಾಗತೊಡಗಿತು.

Advertisement

Udayavani is now on Telegram. Click here to join our channel and stay updated with the latest news.

Next