ಹಾವೇರಿ: ಮೊಬೈಲ್ ಆ್ಯಪ್ ಮೂಲಕ ಪ್ರಸಕ್ತ ಮುಂಗಾರು ಬೆಳೆ ಸಮೀಕ್ಷೆ ಕಾರ್ಯವನ್ನು ರೈತರ ಮೂಲಕವೇ ಕೈಗೊಳ್ಳಬೇಕಾಗಿದೆ. ಆ.24ರ ಒಳಗಾಗಿ ಜಿಲ್ಲೆಯ ಪ್ರತಿಯೊಬ್ಬ ಹಿಡುವಳಿದಾರರು ತಮ್ಮ ಹೊಲದಲ್ಲಿರುವ ಬೆಳೆಯ ಫೋಟೋ ತೆಗೆದು ಅಪ್ ಲೋಡ್ ಮಾಡಿ ಸ್ವಯಂ ದೃಢೀಕರಿಸಿಕೊಳ್ಳಬಹುದು. ಈ ಕುರಿತಂತೆ ಪ್ರತಿ ಗ್ರಾಮಗಳಲ್ಲೂ ರೈತರಿಗೆ ಮಾಹಿತಿ ನೀಡಿ ಬೆಳೆ ಸಮೀಕ್ಷೆ ಯಶಸ್ವಿಗೊಳಿಸಬೇಕೆಂದು ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2020-21ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಯೋಜನೆ ಕುರಿತಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್‌ಲೋಡ್ ಮಾಡುವ ಒಂದು ವಿನೂತನ ಯೋಜನೆಯನ್ನು ಸರ್ಕಾರ ಈ ವರ್ಷದಿಂದ ಜಾರಿಗೆ ತಂದಿದೆ. ಮೊಬೈಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ”ರೈತರ ಬೆಳೆ ಸಮೀಕ್ಷೆ ಆ್ಯಪ್-2020-21′ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ತಮ್ಮ ಬೆಳೆಯ ಸಮೀಕ್ಷೆಯನ್ನು ತಾವೇ ನಡೆಸಿ ಅಪ್‌ಲೋಡ್ ಮಾಡಿ ಸ್ವ ದೃಢೀಕರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬ ರೈತರು ತ್ವರಿತವಾಗಿ ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡರು.
ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳು ಸೇರಿದಂತೆ ಎಲ್ಲ ಇಲಾಖಾ ಅಧಿಕಾರಿಗಳು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಕೃಷಿ ವಿವಿಯ ಪ್ರಾಧ್ಯಾಪಕರನ್ನು, ಕೃಷಿ ಪದವೀಧರರನ್ನು ಈ ಕಾರ್ಯದಲ್ಲಿ ಬಳಸಿಕೊಳ್ಳಿ. ಪಿ.ಆರ್‌ಗಳಿಗೆ ಅಗತ್ಯ ತರಬೇತಿ. ನಿಗದಿತ ಅವಧಿಯಲ್ಲಿ ಬೆಳೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿ ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಮಾತನಾಡಿ, ಬೆಳೆ ಸಮೀಕ್ಷೆ ಮೊಬೈಲ್ ಆಪ್ ಕುರಿತಂತೆ ರೈತರಿಗೆ ಮಾಹಿತಿ ನೀಡಲು ಪ್ರತಿ ಗ್ರಾಮಗಳಲ್ಲೂ ಖಾಸಗಿ ನಿವಾಸಿಗಳನ್ನು (ಪಿ.ಆರ್)ಗಳನ್ನು ನೇಮಕ ಮಾಡಬೇಕು. ಮೊಬೈಲ್‌ನಲ್ಲಿ ಆಪ್ ಡೌನ್ ಲೋಡ್ ಮಾಡಲು ಸ್ವತಃ ತಾವೇ ಬೆಳೆ ಫೋಟೋ ತೆಗೆದು ಅಪ್‌ಲೋಡ್ ಮಾಡಲು ಮಾರ್ಗದರ್ಶನ ಮಾಡಬೇಕು ಎಂದರು.
ಬೆಳೆ ಸಮೀಕ್ಷೆ ಕುರಿತಂತೆ ಪ್ರತಿ ಗ್ರಾಮದ ರೈತರಿಗೆ ಮಾಹಿತಿ ನೀಡಲು ಕೃಷಿ ಅಧಿ ಕಾರಿಗಳು, ಗ್ರಾಮ ಲೆಕ್ಕಾ ಧಿಕಾರಿಗಳು, ಪಿಡಿಒ ಗಳು ವ್ಯಾಪಕ ಪ್ರಚಾರ ಕಾರ್ಯಕೈಗೊಳ್ಳಬೇಕು. ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು. ಕರಪತ್ರ, ಪೋಸ್ಟ್‌ರಗಳನ್ನು ಬಳಸಬೇಕು. ಪ್ರತಿ ಗ್ರಾಮದಲ್ಲೂ ಡಂಗೂರಗಳ ಮೂಲಕ ಜನರಿಗೆ ಮಾಹಿತಿ ನೀಡಬೇಕೆಂದು ಕೃಷಿ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು. ಜಂಟಿ ಕೃಷಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ| ಪ್ರದೀಪ, ಕೃಷಿ ಇಲಾಖೆ ಉಪನಿರ್ದೇಶಕರಾದ ಹಾವೇರಿಯ ಕರಿಯಲ್ಲಪ್ಪ, ರಾಣೆಬೆನ್ನೂರ ವಿಭಾಗದ ಸ್ಫೂರ್ತಿ ಹಾಗೂ ಕೃಷಿ ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು.