ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ಮತ್ತು ಜಮಖಂಡಿ ತಾಲ್ಲೂಕಿನ ಮಹತ್ವದ ನೀರಾವರಿ ಯೋಜನೆಗಳಲ್ಲಿ ಒಂದಾದ ಕುಲಹಳ್ಳಿ ಹುನ್ನೂರ ಏತ ನೀರಾವರಿ ಕಾಮಗಾರಿಯು ವಿಳಂಬವಾಗುತ್ತಿದ್ದು, ಈ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಈ ವೇಳೆ ಲಿಂಗನೂರು ಮಿರಜನ ಗುತ್ತಿಗೆದಾರರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಗುಂಗೆ, ಆಗಸ್ಟ್ ತಿಂಗಳ ಕೊನೆಗೆ ಕಾಮಗಾರಿಯನ್ನು ಮುಗಿಸಬೇಕು. ಇಲ್ಲದಿದ್ದರೆ ನಿಮ್ಮ ಟೆಂಡರ್ ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಆಗಸ್ಟ್ ನಾಲ್ಕರಂದು ತಾವು ಮತ್ತೆ ಕಾಮಗಾರಿ ಪರಿಶೀಲನೆಗೆ ಬರುತ್ತಿದ್ದೇನೆ. ಅಷ್ಟರಲ್ಲಿ ಇನ್ನಷ್ಟು ಕಾರ್ಮಿಕರನ್ನು ಬಳಸಿಕೊಂಡು ಕೂಡಲೇ ಕಾಮಾಗರಿಯನ್ನು ಮುಕ್ತಾಯಗೊಳಿಸಬೇಕು ಎಂದು ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ಅಗಸ್ಟ್ ಕೊನೆಯ ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಲ್ಲೂಕಿಗೆ ಆಗಮಿಸಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಸಸಾಲಟ್ಟಿ ಏತ ನೀರಾವರಿ ಕಾಮಗಾರಿಗೆ ಭೂಮಿಪೂಜೆ ಮತ್ತು ಕುಲಹಳ್ಳಿ ಹುನ್ನೂರ ಏತ ನೀರಾವರಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದರು.
2018 ರಲ್ಲಿ ಕುಲಹಳ್ಳಿ ಹುನ್ನೂರ ಏತ ನೀರಾವರಿ ಟೆಂಡರ್ ಆಗಿದ್ದು ಮಾರ್ಚ್ 2020 ರೊಳಗಾಗಿ ಮುಕ್ತಾಯವಾಗಬೇಕಾಗಿತ್ತು. ಗುತ್ತಿಗೆದಾರರ ಸರಿಯಾಗಿ ಕಾಮಗಾರಿಯನ್ನು ನಿರ್ವಹಣೆ ಮಾಡದೆ ಇರುವುದರಿಂದ ಕಾಮಗಾರಿ ವಿಳಂಬವಾಗಿದೆ. ಆದ್ದರಿಂದ ಕಾಮಗಾರಿಯನ್ನು ಬೇಗನೆ ಮುಕ್ತಾಯಗೊಳಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಶಾಸಕ ಸಿದ್ದು ಸವದಿ ತಿಳಿಸಿದರು.
ಸ್ಥಳೀಯ ರೈತರು ಗುತ್ತಿಗೆದಾರರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಜಮಖಂಡಿ ಜಿಎಲ್ಬಿಸಿಯ ಅಧೀಕ್ಷಕ ಎಂಜಿನಿಯರ್ ಪ್ರಶಾಂತ ಗಿಡದಾನಪ್ಪಗೋಳ, ಶ್ರೀಧರ ನಂದ್ಯಾಳ, ಆನಂದ ಕಂಪು, ಶಂಕರ ಹುನ್ನೂರ ಸೇರಿದಂತೆ ಅನೇಕ ರೈತರು ಇದ್ದರು.