ಬೆಂಗಳೂರು: ಬಿಬಿಎಂಪಿ ವತಿಯಿಂದ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವಷ್ಟರಲ್ಲಿ ಪೂರ್ಣಗೊಳಿಸುವಂತೆ ಮೇಯರ್ ಗಂಗಾಂಬಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೊಮ್ಮನಹಳ್ಳಿ ವಲಯದ ಬಿಳೇಕಹಳ್ಳಿ ವಾರ್ಡ್‌ನ ಅನುಗ್ರಹ ಬಡಾವಣೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಗುರುವಾರ ಮಳೆಯಿಂದಾಗಿ ಪ್ರವಾಹ ವಾತಾವರಣ ನಿರ್ಮಾನವಾಗಿತ್ತು. ಆ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದ ಅವರು, ಕೆಲ ದಿನಗಳ ಹಿಂದೆ ಸುರಿದ ಮಳೆಗೆ ಇದೇ ಭಾಗದ ಹಲವು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಆದರೂ ಅಧಿಕಾರಿಗಳು ಏಕೆ ಎಚ್ಚೆತ್ತುಕೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಕೊಳಚೆ ನೀರು ಮನೆಗಳ ಸಂಪ್‌ಗೆ ಮಳೆ ನೀರಿನ ಜೊತೆ ಸೇರುತ್ತಿದ್ದು, ಸಂಕಷ್ಟ ಅನುಭವಿಸುವಂತಾಗಿದೆ ಎಂದು ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಕೆರಳಿದ ಮೇಯರ್ ಈ ಭಾಗದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು. ಜತೆಗೆ ಮನೆಗಳಿಗೆ ಕೊಳಚೆ ನೀರು ಸೇರಿದಂತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಪಾಲಿಕೆಯಿಂದ ಕಾಮಗಾರಿಗಳಿಂದ ಒಳಚರಂಡಿಯಲ್ಲಿ ಹರಿಯಬೇಕಾದ ಕೊಳಚೆ ನೀರು ಮಳೆ ನೀರು ಹರಿಯುವ ಕಾಲುವೆಯಲ್ಲಿ ಹರಿಯುತ್ತಿದೆ. ಇದರಿಂದ ಮಳೆಗಾಲದಲ್ಲಿ ಈ ಕೊಳಕು ನೀರು ತಗ್ಗುಪ್ರದೇಶಗಳಲ್ಲಿನ ಮನೆಗಳಿಗೆ ನುಗ್ಗುತ್ತಿದೆ. ಹೀಗಾದರೆ ಅಲ್ಲಿನ ಜನ ಹೇಗೆ ವಾಸ ಮಾಡಬೇಕು. ಕೂಡಲೇ ಇಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಓಎಫ್ಸಿ ಕೇಬಲ್ ಅಳವಡಿಸಲು ರಸ್ತೆಯನ್ನು ಹಾಳು ಮಾಡಲಾಗಿದೆ. ಕೂಡಲೇ ಈ ರಸ್ತೆ ದುರಸ್ತಿ ಮಾಡಿ ಹೊಸದಾಗಿ ಡಾಂಬರೀಕರಣ ಮಾಡುವಂತೆ ಸೂಚಿಸಿದರು. ಹಾಗೆಯೇ ರಸ್ತೆ ಪಕ್ಕದಲ್ಲಿದ್ದ ಟ್ರಾನ್ಸ್‌ಫಾರ್ಮರ್ ಅನ್ನು ತೆರವುಗೊಳಿಸಿ ಹೊಸದಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಳವಡಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಕೆಲವೆಡೆ ಮಳೆ: ನಗರದ ವಿವಿಧ ಭಾಗದಲ್ಲಿ ಶುಕ್ರವಾರ ಸಂಜೆ ಸಾಧಾಣೆ ಮಳೆಯಾಗಿದ್ದು, ಮಲ್ಲೇಶ್ವರ ಹಾಗೂ ವಿಜಯನಗರದಲ್ಲಿ ಮರದ ಕೊಂಬೆಗಳು ಉರುಳಿವೆ. ಶುಕ್ರವಾರ ಮಧ್ಯಾಹ್ನ ಆರಂಭವಾದ ಮಳೆ ಬಿಸಿಲ ಧಗೆಯನ್ನು ಕಡಿಮೆ ಮಾಡಿದ್ದು, ಇನ್ನೂ ಎರಡು ದಿನಗಳು ನಗರದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅದರಂತೆ ಶುಕ್ರವಾರ ಮೆಜೆಸ್ಟಿಕ್, ಚಾಮರಾಜಪೇಟೆ, ಶಿವಾನಂದ ವೃತ್ತ, ಮಲ್ಲೇಶ್ವರ, ಬಸವನಗುಡಿ, ನಾಗರಬಾವಿ ಸೇರಿದಂತೆ ಹಲವಡೆ ಮಳೆಯಾಗಿದೆ.