ಶಹಾಪುರ: ಸಮೀಪದ ಸನ್ನತಿ ಸೇತುವೆ ಬಳಿ ಜಾಕ್‌ವೆಲ್ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ನಗರ ಪ್ರದೇಶಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿನ ಜನರ ಕನಸು ನನಸಾಗುವ ದಿನಗಳು ದೂರವಿಲ್ಲ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ಸಮೀಪದ ಸನ್ನತಿ ಸೇತುವೆ ಬಳಿ ಶಾಶ್ವತ ಕುಡಿಯುವ ನೀರು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡ ಜಾಕ್‌ವೆಲ್ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಶಹಾಪುರ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ ಸಲ್ಲಿಸಿದ್ದ ಒಟ್ಟು 120 ಕೋಟಿ ಪ್ರಸ್ತಾವನೆಯಲ್ಲಿ ಮಂಡಳಿಯಿಂದ 70 ಕೋಟಿ ರೂ. ಬಿಡುಗಡೆಯಾಗಿದ್ದು, ಪ್ರಸ್ತುತ 56.86 ಕೋಟಿ ರೂ. ಅನುದಾನ ನೀಡಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. ಜಾಕ್ ವೆಲ್ ಕಾಮಗಾರಿ ಪ್ರಗತಿಯಲ್ಲಿದ್ದು, ಇಲ್ಲಿಂದ ಶಹಾಪುರ ನಗರಕ್ಕೆ ಸುಮಾರು 25 ಕಿಮೀ ಪೈಪ್ ಲೈನ್ ಮೂಲಕ ನೀರನ್ನು ನಗರದ ಫಿಲ್ಟರ್ ಬೆಡ್ ಮತ್ತು ಬಾಪುಗೌಡ ನಗರ ಹಾಗೂ ರಾಕಂಗೇರಿ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಓವರ್ ಹೆಡ್ ಟ್ಯಾಂಕ್‌ಗಳಿಗೆ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುತ್ತಿದೆ. ಡಿಸೆಂಬರ್ ವೇಳೆಗೆ ಕಾಮಗಾರಿ ಅಂತ್ಯಗೊಳ್ಳಲಿದ್ದು, ಬೇಸಿಗೆ ಸಂದರ್ಭ ನೀರಿನ ಅಭಾವವನ್ನು ಈ ಬಾರಿ ನೀಗಿಸುವ ನಿಟ್ಟಿನಲ್ಲಿ ಕೆಲಸ ನಡೆದಿದೆ. ಬೇಸಿಗೆ ಸಂದರ್ಭದಲ್ಲಿ ಮಾರ್ಚ್ ಅಂತ್ಯದಿಂದ ಜೂನ್ ಜುಲೈವರೆಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಪಡೆಯಲಿದ್ದಾರೆ ಎಂದು ವಿವರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಮುಖಂಡರಾದ ಸುರೇಂದ್ರ ಪಾಟೀಲ್ ಮಡ್ನಾಳ, ಬಸವರಾಜ ಹೇರುಂಡಿ, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ ಸುರಪುರಕರ್, ಹಣಮಂತ್ರಾಯಗೌಡ ರಾಕಂಗೇರಾ, ಬಸವರಾಜ ಚನ್ನೂರ, ರವಿ ಎದುರಮನಿ ಮತ್ತು ಅರವಿಂದ ಉಪ್ಪಿನ್ ಇದ್ದರು.