Advertisement

2 ದಿನದಿಂದ ಕೆಲಸ ಸ್ಥಗಿತ: ಎಲ್ಲೆಡೆ ಕಸದ ರಾಶಿ

12:36 PM Nov 04, 2018 | Team Udayavani |

ನಂಜನಗೂಡು: ನಗರದಲ್ಲಿ ಕಳೆದ ಎರಡು ದಿನಗಳಿಂದ ಕಸ ವಿಲೇವಾರಿ ವಾಹನ ಚಾಲಕರು ಕೆಲಸವನ್ನು ಸ್ಥಗಿತಗೊಳಿಸಿರುವುದರಿಂದ ಎಲ್ಲೆಡೆ ಕಸದ ರಾಶಿ ಕಾಣುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಕಸವನ್ನು ವಾಹನಗಳ ಮೂಲಕ ಸಾಗಿಸುವ ಚಾಲಕರಿಗೆ ಕಳೆದ 12 ತಿಂಗಳಿಂದ ವೇತನ ನೀಡಿಲ್ಲ. ಹೀಗಾಗಿ ತ್ವರಿತವಾಗಿ ಬಾಕಿ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.

Advertisement

ಸಂಧಾನ ಸಭೆ: ಈ ಹಿನ್ನೆಲೆಯಲ್ಲಿ ಕಸ ವಿಲೇವಾರಿ ವಾಹನ ಚಾಲಕರೊಂದಿಗೆ ಸಭೆ ನಡೆಸಿದ ನಗರಸಭೆ ಆಯುಕ್ತ ವಿಜಯ್‌ಕುಮಾರ್‌ ಹಾಗೂ ಉಪಾಧ್ಯಕ್ಷ ಪ್ರದೀಪ್‌, ತ್ವರಿತವಾಗಿ ಬಾಕಿ ವೇತನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು. ಸೋಮವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಸಂಬಳ ಬಿಡುಗಡೆಗೆ ಮನವರಿಕೆ ಮಾಡಿಕೊಡಲಾಗುವುದು.

ಕೂಡಲೇ ತ್ಯಾಜ್ಯ ವಿಲೇವಾರಿ ಕಾರ್ಯ ಕೈಗೊಳ್ಳುವಂತೆ ವಾಹನ ಚಾಲಕರಲ್ಲಿ ಮನವಿ ಮಾಡಿದರು. ಆದರೆ, ಇದಕ್ಕೆ ಬಗ್ಗದ ವಾಹನ ಚಾಲಕರು, ಕಳೆದ ಜೂನ್‌ ತಿಂಗಳಿನಲ್ಲೂ ಕೂಡ ಇದೇ ರೀತಿ ಭರವಸೆ ನೀಡಲಾಗಿತ್ತು. ಆದರೆ, ಇದುವರೆಗೂ ಕಾರ್ಯಗತವಾಗಿಲ್ಲ. ಬರೀ ಆಶ್ವಾಸನೆಗಳ ಮೂಲಕ ಕಾಲಹರಣ ಮಾಡಲಾಗುತ್ತಿದೆ. ಹೀಗಾಗಿ ಬಾಕಿ ವೇತನ ನೀಡಿದರೆ ಮಾತ್ರ ಕೆಲಸ ಪ್ರಾರಂಭಿಸುವುದಾಗಿ ಪಟ್ಟು ಹಿಡಿದರು.

ಹೀಗಾಗಿ ಸಂಧಾನ ಸಭೆ ವಿಫ‌ಲವಾಯಿತು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಡಿ.ಆರ್‌. ರಾಜು, ಆರೋಗ್ಯಾಧಿಕಾರಿ ಅರ್ಚನಾ, ಮುಖಂಡ ಕಮಲೇಶ್‌ ಹಾಗೂ ವಾಹನ ಚಾಲಕರಾದ ಕುಮಾರ್‌, ಪ್ರಸನ್ನ, ಬಾಲು, ಕೃಷ್ಣ , ಬಸವರಾಜು, ಬಸವಣ್ಣ, ಶಿವು, ಗಣೇಶ, ಮಣಿ, ಬಸವ, ನಂಜುಂಡಸ್ವಾಮಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next