Advertisement
ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ ಆ.13ರಂದು ಪದತ್ಯಾಗ ಮಾಡಲಿರುವ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 50 ವರ್ಷಗಳಲ್ಲಿ ಆಗದಷ್ಟು ಕಾರ್ಯಕ್ರಮಗಳನ್ನು ಮೂರೂವರೆ ವರ್ಷದಲ್ಲಿ ಮಾಡಿದ್ದೇವೆ. ಸಾವಿರಾರು ಅವಕಾಶ ವಂಚಿತ ಕಲಾವಿದರಿಗೆ ಮೊದಲ ಬಾರಿಗೆ ಅಕಾಡೆಯು ವಿವಿಧ ಅವಕಾಶ ನೀಡಿದೆ. ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಉದ್ದೇಶದಿಂದ ರಾಜ್ಯ ಉದ್ದಗಲಕ್ಕೂ ಸುಮಾರು 1 ಲಕ್ಷ ಕಿ.ಮೀ ಪ್ರವಾಸ ಮಾಡಿದ್ದೇನೆ ಎಂದು ತಿಳಿಸಿದರು.50 ವರ್ಷಗಳ ಅವಧಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕಲಾ ಸಾಹಿತ್ಯ ಕುರಿತು 8ಕ್ಕೂ ಹೆಚ್ಚು ವಿಚಾರ ಸಂಕಿರಣಗಳು, ಕಲಾಕಮ್ಮಟಗಳನ್ನು ಏರ್ಪಡಿಸಲಾಗಿತ್ತು. ಈವರೆಗೆ ಕಲಾಸಂಚಾರ ಪುಸ್ತಕ ಸೇರಿದಂತೆ ಕಲಾವೈಚಾರಿಕ ಸಾಹಿತ್ಯ, 6 ಚಿತ್ರಸಂಪುಟಗಳನ್ನು ಅಕಾಡೆಮಿ ಹೊರತಂದಿದೆ ಎಂದು ಹೇಳಿದರು.
Related Articles
Advertisement
ನಗರದ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ಗ್ರಾಫಿಕ್ ಕಲಾಕೇಂದ್ರಕ್ಕೆ ಸಚಿವೆ ಉಮಾಶ್ರೀಯವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಲೋಕೋಪಯೋಗಿ ಇಲಾಖೆಗೆ ಹಣ ಸಂದಾಯವಾಗಿದ್ದು, ಮುಂಬರುವ ಅಕಾಡೆಮಿ ಅಧ್ಯಕ್ಷರು ಮುತುವರ್ಜಿ ವಹಿಸಿ ಶೀಘ್ರವೇ ಗ್ರಾಫಿಕ್ ಕಲಾಕೇಂದ್ರ ನಿರ್ಮಿಸಿ ಲೋಕಾರ್ಪಣೆ ಮಾಡಬೇಕು. ಇದಲ್ಲದೇ ಮೂರೂವರೆ ವರ್ಷದಲ್ಲಿ ಹಲವಾರು ವಿಚಾರ ಸಂಕಿರಣ, ಕಲಾಕಮ್ಮಟಗಳು, ಕಾರ್ಯಾಗಾರ, ನೇಪಥ್ಯ ಕಲಾಕಮ್ಮಟ ಇತ್ಯಾದಿಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಹೇಳಿದರು.
ಬಾದಾಮಿಯಲ್ಲಿ ದೃಶ್ಯಕಲೆಗೆ ಸಂಬಂಧಿಸಿದ ವಿಶ್ವವಿದ್ಯಾಲಯ ಪ್ರಾರಂಭಿಸಬೇಕು ಎಂಬ ಪ್ರಸ್ತಾವನೆ ಇತ್ತು. ಅದಕ್ಕಾಗಿ 450 ಎಕರೆ ಭೂಮಿ ಕೂಡ ನಿಗದಿಯಾಗಿತ್ತು. ಆದರೆ, ಇಚ್ಛಾಶಕ್ತಿ ಕೊರತೆಯಿಂದ ಹಣವಿಲ್ಲ ಎಂಬ ಕಾರಣಕ್ಕೆ ಅದನ್ನು ಸ್ಥಾಪಿಸದಿರುವುದು ಬೇಸರ ತಂದಿದೆ. ಮುಂಬರುವ ಅಧ್ಯಕ್ಷರುಗಳು ಜಾತ್ಯಾತೀತ, ಧರ್ಮಾತೀತವಾಗಿ ಕೆಲಸ ಮಾಡಬೇಕು. ತಾತ್ವಿಕತೆ ಮತ್ತು ನಿಲುವುಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಆಗ ಮಾತ್ರ ಅಕಾಡೆಮಿ ಅಭಿವೃದ್ಧಿಯಾಗಲಿದೆ.-ಎಂ.ಎಸ್.ಮೂರ್ತಿ, ಅಧ್ಯಕ್ಷ, ಲಲಿತಕಲಾ ಅಕಾಡೆಮಿ