Advertisement
ಇಷ್ಟೇ ಅಲ್ಲ. ಮದುವೆಯಾಗಿ ಮೊದಲ ಮಗು ಹುಟ್ಟಿ, ಅವಳಿಗೆ ಒಂದು ವರ್ಷವಾಗುವ ಮೊದಲು ಬಿ.ಎಡ್ ಪದವಿ ಮುಗಿಸಿದೆ. ಎರಡನೇ ಮಗಳು ಹುಟ್ಟುವಾಗ ಎಂ.ಎ. ಮುಗಿಸಿಕೊಂಡೆ. ಪ್ರಥಮ ಬಾರಿ ಕೆ.ಎ.ಎಸ್. ಪರೀಕ್ಷೆ ಬರೆದೆ. ಮೂರನೇ ಮಗು ಹುಟ್ಟುವುದಕ್ಕೆ ಹದಿನೈದು ದಿನವಿರುವಾಗ ಎರಡನೇ ಸಲ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ ಬರೆದು ಪಾಸಾದೆ. ಮುಖ್ಯ ಪರೀಕ್ಷೆ ಬರೆದೆ. ಕಳೆದ ಬಾರಿ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ ಪಾಸಾಗಿ ಮುಖ್ಯ ಪರೀಕ್ಷೆ ಬರೆದಾಗಲೂ ನನ್ನ ಮೂವರು ಮಕ್ಕಳೂ ಸಣ್ಣವರಿದ್ದರು. ಈ ಎಲ್ಲಾ ಅವಧಿಯಲ್ಲೂ ಕೆಲವು ತಿಂಗಳು (ನಾನಿಲ್ಲದಾಗ ಹಗಲು ಹೊತ್ತು ಮಗುವನ್ನು ನೋಡಿಕೊಳ್ಳಲು) ಕೆಲಸಕ್ಕೆ ಜನ ಇದ್ದದ್ದು ಬಿಟ್ಟರೆ, ಎಲ್ಲಾ ನಾನೇ ನಿಭಾಯಿಸುತ್ತಿದ್ದೆ. ಹೀಗಿರುವಾಗ ಇವರೆಲ್ಲರ ಆಶ್ಚರ್ಯ ಸಹಜ ತಾನೇ? ನನ್ನ ಸೀಕ್ರೆಟ್ ಅಂದರೆ ಟೈಂ ಮ್ಯಾನೇಜ್ ಮೆಂಟ…. ಸಮಯವನ್ನು ಸದುಪಯೋಗ ಪಡಿಸುವುದು, ಸರಿಯಾಗಿ ನಿರ್ವಹಿಸುವುದು ಹೇಗೆಂದು ಅನುಭವದಿಂದ ಕಲಿತುಕೊಂಡ ಕಾರಣ, ಎಷ್ಟೇ ಕೆಲಸಗಳಿದ್ದರೂ ಮುಗಿಸಿಕೊಳ್ಳಲು ನನಗೆ ಸಾಧ್ಯವಾಗುತ್ತದೆ.
Related Articles
Advertisement
ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುವ ಜಾಣ್ಮೆ ಬೆಳೆಸಿಕೊಳ್ಳಬೇಕು. ಸ್ಟವ್‌ನ ಒಂದು ಕಡೆ ಅನ್ನ ಮಾಡಲು ಇಟ್ಟರೆ ಇನ್ನೊಂದು ಕಡೆ ಸಾರು /ಪಲ್ಯ ಇಡಬೇಕು. ತರಕಾರಿ ಬೇಯುತ್ತಿರುವಾಗ ಮಸಾಲೆ ರುಬ್ಬಿಟ್ಟುಕೊಂಡು, ಸ್ಟವ್ ಖಾಲಿಯಿದ್ದರೆ ಚಹಾ ಮಾಡಲು ನೀರಿಡಬಹುದು. ಅನ್ನ, ಸಾಂಬಾರು ಬೇಯುತ್ತಿರುವ ಸಮಯದಲ್ಲಿ ಪಾತ್ರೆ ತೊಳೆಯುವ ಕೆಲಸ ಮುಗಿಸಬಹುದು. ಚಹಾ ಕುದಿಯುವ ಸಮಯದೊಳಗೆ ಗುಡಿಸುವ ಕೆಲಸ ಮುಗಿಸಲು ಸಾಧ್ಯವಿದೆ. ದೋಸೆ, ಚಪಾತಿ ಇತ್ಯಾದಿಗಳನ್ನು ಮಾಡುವಾಗ ಎರಡು ಕಾವಲಿಗಳನ್ನು ಬಳಸಿದರೆ ಬೇಗನೇ ಆ ಕೆಲಸ ಮುಗಿಸಬಹುದು. ಮಕ್ಕಳ ಟಿಫಿನ್ ಕ್ಯಾರಿಯರ್ ಗಳನ್ನು ಹಿಂದಿನ ದಿನವೇ ತೊಳೆದು ಕೈಗೆಟಕುವಲ್ಲಿ ಇಟ್ಟುಕೊಂಡರೆ ಸಮಯ ನಷ್ಟವಾಗದೇ ತಿಂಡಿ ತುಂಬಿಸಲು ಸುಲಭವಾಗುತ್ತದೆ.
ಮಕ್ಕಳು ತಮ್ಮ ವಾಟರ್ ಬಾಟಲ್‌ಗಳನ್ನು ತಾವೇ ತುಂಬಿಸಿಕೊಳ್ಳುವಂತೆ, ಶೂ ಸಾಕ್ಸ್…, ಯೂನಿಫಾರಂಗಳನ್ನು ತಾವೇ ಹಾಕಿಕೊಳ್ಳುವಂತೆ ಅಭ್ಯಾಸ ಮಾಡಿಸಬೇಕು. ಅವರು ಸಹಾ ತಮ್ಮ ಬ್ಯಾಗ್, ಶೂ ,ಸಾಕ್ಸ್…, ಇನ್ನಿತರ ವಸ್ತುಗಳನ್ನು ನಿಗದಿತ ಸ್ಥಳಗಳಲ್ಲಿಡುವಂತೆ ಮಾಡಿದರೆ ಮಹಿಳೆಯರ ಮೇಲಿನ ಕೆಲವು ಸಣ್ಣ ಕೆಲಸದ ಹೊರೆಗಳು ತಗ್ಗುತ್ತವೆ.
ಆ ದಿನ ಧರಿಸಲು ಬೇಕಾದ ಬಟ್ಟೆಬರೆಗಳನ್ನು ಹಿಂದಿನ ದಿನ ರಾತ್ರಿಯೇ ತೆಗೆದಿಟ್ಟು, ಬೇಕಿದ್ದರೆ ಇಸ್ತ್ರಿ ಮಾಡಿಟ್ಟುಕೊಂಡರೆ ಬೆಳಗ್ಗೆ ಬಹಳ ಸಮಯವನ್ನು ಉಳಿಸಬಹುದು. ತೆಂಗಿನಕಾಯಿ ತುರಿದು, ತರಕಾರಿಗಳನ್ನು ಹೆಚ್ಚಿ ಹಿಂದಿನ ರಾತ್ರಿ ಫ್ರಿvj… ನಲ್ಲಿಟ್ಟರೆ ಬೆಳಗ್ಗೆ ಅಡುಗೆ ಕೆಲಸ ಸುಲಭವಾಗುತ್ತದೆ. ನೌಕರಿಯಿಂದ ಹಿಂತಿರುಗಿದ ಬಳಿಕ ಹರಟೆ, ವಾಟ್ಸಾಪ್, ಟಿ.ವಿ. ಸೀರಿಯಲ್ ಎಂದು ಇಡೀ ಸಂಜೆಯ ಹೊತ್ತನ್ನು ನಷ್ಟಮಾಡಬಾರದು. ಇವೆಲ್ಲಾ ಬೇಡವೆಂದಲ್ಲ. ಫೋನ್, ಹರಟೆ, ವಾಟ್ಸಾಪ್, ಮನರಂಜನೆಗೆಲ್ಲಾ ಒಂದು ಸಮಯದ ಮಿತಿ ನಿಗದಿ ಪಡಿಸಬೇಕು. ಇಲ್ಲದಿದ್ದರೆ ಅವು ಮಹಿಳೆಯರ ಇಡೀ ದಿನವನ್ನೇ ಅಪಹರಿಸಿಬಿಡುತ್ತದೆ.
ಮನೆಕೆಲಸ, ಕಚೇರಿ ಕೆಲಸ ಇವೆರಡರಿಂದ ಮಹಿಳೆಯರಿಗೆ ಬಹಳಷ್ಟು ಮಾನಸಿಕ ಒತ್ತಡ ಇರುತ್ತದೆ. ಶಾರೀರಿಕ ಆರೋಗ್ಯದ ಮೇಲೆಯೂ ಇದರಿಂದ ದುಷ್ಪರಿಣಾಮಗಳಾಗಬಹುದು. ಮನೆಯ ಮುಂದೆ ಸ್ವಲ್ಪವಾದರೂ ಖಾಲಿಜಾಗವಿದ್ದರೆ, ಅಥವಾ ಕುಂಡಗಳಲ್ಲಾದರೂ ಹೂವಿನ ಗಿಡ ಅಥವಾ ತರಕಾರಿ ಗಿಡಗಳನ್ನು ಬೆಳೆಸುವುದರಿಂದ ಮನಸ್ಸಿನ ಆಯಾಸ ದೂರವಾಗಿ ರಿಫ್ರೆಶ್ ಆಗುತ್ತದೆ. ಉತ್ಸಾಹ ,ಉಲ್ಲಾಸ ತುಂಬುತ್ತದೆ. ಮಕ್ಕಳ ಆಟಪಾಠಗಳನ್ನು ಗಮನಿಸುವುದರಿಂದ, ಸ್ವಲ್ಪ ಹೊತ್ತು ಅವರ ಹೋಮ್ ವರ್ಕನ್ನು ಗಮನಿಸುವುದರಿಂದ ಮಕ್ಕಳಿಗೆ ಸಂತೋಷವಾಗುವುದರೊಂದಿಗೆ, ತಾಯಂದಿರ ಕೆಲಸದ ಒತ್ತಡದ ನಡುವೆಯೂ ಮಕ್ಕಳಿಗೆ ಸಮಯ ನೀಡುವುದರ ಸಂತೋಷ ಹಾಗೂ ತೃಪ್ತಿ ಸಿಗುತ್ತದೆ. ಮಕ್ಕಳ ಮೇಲೂ ಇದರಿಂದ ಸಕಾರಾತ್ಮಕ ಪರಿಣಾಮವಾಗುತ್ತದೆ. ದಿನಾಲೂ ಹೀಗೆ ಮಾಡಲು ಸಾಧ್ಯವಿಲ್ಲದಿದ್ದರೆ ವಾರಕ್ಕೆ ಒಂದೆರಡು ಬಾರಿಯಾದರೂ ಮಕ್ಕಳೊಂದಿಗೆ ಬೆರೆತು ಉಳಿದಂತೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವಂತೆ ಅವರನ್ನು ಅಭ್ಯಾಸ ಮಾಡಿಸಬೇಕು. ಅಮ್ಮಂದಿರ ಮನೆಕೆಲಸದಲ್ಲಿ ಸಣ್ಣಪುಟ್ಟ ಸಹಾಯ ಮಾಡಲು ಕಲಿಸಿಕೊಡಬೇಕು.
ಅಡುಗೆ ಮನೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಪಾತ್ರೆಗಳನ್ನಷ್ಟೇ ಬಳಸಬೇಕು. ಒಮ್ಮೆಲೇ ತೊಳೆಯಲು ಪಾತ್ರೆಗಳನ್ನು ಪೇರಿಸಿಡದೇ ಸಾಧ್ಯವಾದಷ್ಟು ಆಗಾಗ ಪಾತ್ರೆಗಳನ್ನು ತೊಳೆಯಬೇಕು. ಸಮಯದ ಲಭ್ಯತೆ ಕಡಿಮೆ ಇರುವವರು ಅಡುಗೆ ಕೆಲಸ ಸುಲಭಗೊಳಿಸುವ ಉಪಕರಣಗಳನ್ನು ಬಳಸಬಹುದು. ಒಂದು ಕುದಿಬಂದ ಅಕ್ಕಿಯನ್ನು ನಂತರ ಬೆಂಕಿಯ ಸಹಾಯವಿಲ್ಲದೇ ಬೇಯಿಸಿ ಕೊಡುವ ಚೈನಾ ಪಾಟ… (ಥರ್ಮಲ್ ಕುಕ್ಕರ್), ಚಪಾತಿ ಹಿಟ್ಟನ್ನು ಹದ ಮಾಡಿ ಕೊಡುವ ಗೆùಂಡರ್ ಅಥವಾ ಮಿಕ್ಸಿ, ಉಂಡೆ ರೂಪದ ಚಪಾತಿ ಹಿಟ್ಟನ್ನು ಒತ್ತಿ, ಬೇಯಿಸಿ ಕೊಡುವ ರೋಟಿ ಮೇಕರ್, ತರಕಾರಿಗಳನ್ನು ಬೇಕಾದ ಗಾತ್ರಕ್ಕೆ ಕತ್ತರಿಸಿ ಕೊಡುವ ಸರಳ ಉಪಕರಣಗಳು, ರೈಸ್ ಕುಕ್ಕರ್, ಇಡ್ಲಿ ಕುಕ್ಕರ್, ಮಿಲ್ಕ… ಕುಕ್ಕರ್, ಬಟ್ಟೆ ಒಗೆಯಲು ವಾಷಿಂಗ್ ಮೆಷಿನ್ ಇತ್ಯಾದಿಗಳ ಸಹಾಯದಿಂದ ಕೆಲಸದ ಕಷ್ಟ ಕಡಿಮೆಗೊಳಿಸಿ, ಸಮಯವನ್ನು ಉಳಿಸಬಹುದು.
ನೌಕರಿಯಲ್ಲಿರುವ ಮಹಿಳೆ ನಿರ್ವಹಿಸಬೇಕಾದ ಅನೇಕ ಪಾತ್ರಗಳು ಹಾಗೂ ಜವಾಬ್ದಾರಿಗಳಿರುತ್ತವೆ. ಮನೆಯಲ್ಲೂ ಕಚàರಿಯಲ್ಲೂ ಬಹಳಷ್ಟು ಕೆಲಸದ ಒತ್ತಡವಿರುತ್ತದೆ. ಇದು ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ಮನೆಯ ಇತರ ಸದಸ್ಯರು ಇವರ ಸಮಸ್ಯೆಗಳನ್ನು ಹಾಗೂ ಕೆಲಸದ ಒತ್ತಡಗಳನ್ನು ಅರ್ಥಮಾಡಿಕೊಂಡು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದರೆ ಮಹಿಳೆಯರು ನೌಕರಿ ಹಾಗೂ ಮನೆಕೆಲಸ ಎರಡನ್ನೂ ಸರಿದೂಗಿಸಿಕೊಂಡು ಹೋಗಲು ಸ್ವಲ್ಪಮಟ್ಟಿಗಾದರೂ ಸಹಾಯವಾಗುತ್ತದೆ.
ಜೆಸ್ಸಿ ಪಿ. ವಿ.