Advertisement

ತೋಡು ದಾಟಲು ಮರದ ಸಂಕವೇ ಗತಿ

11:18 AM Jun 14, 2018 | |

ಕಂದಾವರ : ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೌಡೂರಿನಲ್ಲಿ ತೋಡು ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಿದ್ದು, ಈ ತೋಡಿಗೆ ಸರಿಯಾದ ಸೇತುವೆ ಇಲ್ಲದೆ ಅಪಾಯ ಕಾರಿಯಾದ ಅಡಿಕೆ ಮರದ ಸಂಕದ ಮೇಲೆ ಮಕ್ಕಳು, ಗ್ರಾಮಸ್ಥರು ನಡೆದು ಹೋಗಬೇಕಿದೆ. ಒಂದೆಡೆ ದುರ್ಗಮವಾದ ರಸ್ತೆ ಮತ್ತೂಂದೆಡೆ ಅಪಾಯಕಾರಿ ಸಂಕದಿಂದ ಗ್ರಾಮಸ್ಥರು ಭಯದಿಂದಲೇ ಸಂಚರಿಸಬೇಕಾಗಿದೆ.

Advertisement

ಕೌಡೂರು ಶ್ರೀ ಕಾಲಭೈರವೇಶ್ವರ ದೇವಸ್ಥಾನದ ಬಳಿ ಇರುವ ಈ ತೋಡು ಗಂಜಿಮಠ, ಸೂರಲ್ಪಾಡಿ, ಕಿನ್ನಿಕಂಬಳ, ಕೌಡೂರು, ಮೂಡುಕರೆ, ಕಂದಾವರವಾಗಿ ಗುರುಪುರ ನದಿಯನ್ನು ಸೇರುತ್ತದೆ. 

ಹಲವು ವರ್ಷಗಳ ಬೇಡಿಕೆ
ಈ ತೋಡಿಗೆ ಕಾಲುಸಂಕ ಅಥವಾ ಕಿರು ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಹಲವು ಬಾರಿ ಗ್ರಾಮ ಸಭೆಯಲ್ಲಿ ಮನವಿ ಮಾಡಿದ್ದಾರೆ. ಆದರೆ ಈ ತನಕ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಅಂಗನವಾಡಿ ಕೇಂದ್ರ ಹಾಗೂ ಕೌಡೂರು ಸೈಟ್‌ ಮನೆಗಳಿಗೆ ಇದು ಹತ್ತಿರದ ದಾರಿಯಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಸುಮಾರು 30 ಮಕ್ಕಳಿದ್ದಾರೆ. ಅವರಿಗೂ ಈ ಸಂಕವೇ ಗತಿ. ಈ ಭಾಗದಲ್ಲಿರುವ ಸುಮಾರು 20 ಮನೆಗಳಿಗೆ ಈ ಕಾಲುಸಂಕ ಮುಖ್ಯ ಸಂಪರ್ಕ ಸಾಧನವಾಗಿದೆ. ಇಲ್ಲವಾದರೆ ಸುತ್ತು ಬಳಸಿ ರಸ್ತೆ ಮೂಲಕ ಬರಬೇಕಿದ್ದು, ಆ ರಸ್ತೆಯೂ ಕೆಸರುಮಯವಾಗಿದೆ.

ಅಪಾಯಕಾರಿ
ಮಳೆಗಾಲದಲ್ಲಿ ಈ ತೋಡಿನಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ಈ ಸಂಕದಲ್ಲಿ ಹಾದು ಹೋಗುವ ಅಂಗನವಾಡಿ ಮಕ್ಕಳು ನಿತ್ಯವೂ ಅಪಾಯ ಎದುರಿಸಬೇಕಾಗುತ್ತದೆ. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ದಿನನಿತ್ಯ ಮಕ್ಕಳನ್ನು ಇಲ್ಲಿ ನಿಂತು ನಿಗಾ ವಹಿಸಿ ಆವರನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಹಾದುಹೋಗಲು ಸಹಕರಿಸಬೇಕಾಗುತ್ತದೆ.

ಕೌಡೂರು ರಸ್ತೆ ಕೆಸರುಮಯ
ಈ ಪ್ರದೇಶದ ರಸ್ತೆ ಕೆಸರುಮಯವಾಗಿದ್ದು, ಈ ರಸ್ತೆಯಲ್ಲಿ ಕೌಡೂರು ಸೈಟ್‌ಗೆ ಹೋಗುವುದು ಕಷ್ಟಕರವಾಗಿದೆ. ಈ ರಸ್ತೆಯನ್ನು ಜೇಸಿಬಿಯ ಮೂಲಕ ಸರಿಪಡಿಸುವ ಕಾರ್ಯ ನಡೆಯುತ್ತಿದೆ. 

Advertisement

ಕಾಲು ಸೇತುವೆಯ ಬೇಡಿಕೆ ಬಂದಿಲ್ಲ
ಕೌಡೂರು ತೋಡಿಗೆ ಕಾಲು ಸೇತುವೆಯ ಬೇಡಿಕೆ ಬಂದಿಲ್ಲ. ಗ್ರಾಮಸ್ಥರು ಮನವಿ ಮಾಡಿದ್ದಲ್ಲಿ ಕಾಲು ಸೇತುವೆಗೆ ಕ್ರಮ ತೆಗೆದುಕೊಳ್ಳಲಾಗುವುದು. ನರೇಗಾ ಯೋಜನೆಯಡಿಯಲ್ಲಿ ಕಾಲು ಸೇತುವೆ ನಿರ್ಮಾಣ ಮಾಡಲು ಅವಕಾಶವಿದೆ.
– ರೋಹಿಣಿ, ಗ್ರಾಮ
ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಕಂದಾವರ 

ನಾಲ್ಕು ಅಡಿಕೆ ಮರ ಬೇಕು
ಕಿರು ಸೇತುವೆಗೆ ಪಂಚಾಯತ್‌ ಸ್ಪಂದಿಸದ ಕಾರಣ ಕಂದಾವರ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪ್ರಕಾಶ್‌ ರೈ ಅವರ ನೇತೃತ್ವದಲ್ಲಿ, ಫ್ರೆಂಡ್‌ ಕ್ರಿಕೆಟರ್ ಕೌಡೂರು ಮತ್ತು ಗ್ರಾಮಸ್ಥರಿಂದ ಅಡಿಕೆ ಮರದ ಸಂಕ ಹಾಕಲಾಗಿದೆ. ತೋಡು 22ಅಡಿ ಅಗಲ ಇದ್ದು ಸುಮಾರು 27 ಅಡಿ ಉದ್ದವಿರುವ ಅಡಿಕೆ ಮರವನ್ನು ಹುಡುಕಿ ತಂದು ಇಲ್ಲಿನ ತೋಡಿಗೆ ಅಡ್ಡ ಹಾಕಬೇಕಾಗುತ್ತದೆ. ಕಡಿಮೆ ಪಕ್ಷ ನಾಲ್ಕು ಅಡಿಕೆ ಮರ ಅಡ್ಡಕ್ಕೆ ಹಾಕಬೇಕಾಗುತ್ತದೆ. ಹಾದು ಹೋಗುವಾಗ ಸಮತೋಲನಕ್ಕಾಗಿ ಕೈ ಹಿಡಿ ಯಲು ಬೇಕಾದ ಮರವನ್ನು ಅಡ್ಡ ಕಟ್ಟಬೇಕಾಗುತ್ತದೆ.
– ಯಶವಂತ, ಸ್ಥಳೀಯ

ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next