Advertisement

ವನಿತಾ ವಿಶ್ವಕಪ್‌: ಲಕ್ಕಿ ವಿಂಡೀಸ್‌ಗೆ ಅಜೇಯ ಆಸೀಸ್‌ ಟೆಸ್ಟ್‌

11:00 PM Mar 29, 2022 | Team Udayavani |

ವೆಲ್ಲಿಂಗ್ಟನ್‌: ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ರೌಂಡ್‌ ರಾಬಿನ್‌ ಲೀಗ್‌ ಮುಗಿದಿದ್ದು, ಬುಧವಾರ ಮೊದಲ ಸೆಮಿಫೈನಲ್‌ಗೆ ಹ್ಯಾಮಿಲ್ಟನ್‌ನಲ್ಲಿ ವೇದಿಕೆ ಸಜ್ಜುಗೊಂಡಿದೆ. ಇಲ್ಲಿ ಲೀಗ್‌ ಹಂತದ ಎಲ್ಲ ಪಂದ್ಯ ಗೆದ್ದು ಬಂದ ಆಸ್ಟ್ರೇಲಿಯ ಮತ್ತು ಅದೃಷ್ಟದ ಬಲದಿಂದ ಮುನ್ನಡೆ ಸಾಧಿಸಿದ ವೆಸ್ಟ್‌ ಇಂಡೀಸ್‌ ತಂಡಗಳು ಮುಖಾಮುಖಿಯಾಗಲಿವೆ.

Advertisement

ಗುರುವಾರದ ದ್ವಿತೀಯ ಮುಖಾಮುಖಿಯಲ್ಲಿ 2-3ನೇ ಸ್ಥಾನ ಪಡೆದ ದಕ್ಷಿಣ ಆಫ್ರಿಕಾ ಮತ್ತು ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಎದುರಾಗಲಿವೆ. ಪಂದ್ಯದಿಂದ ಪಂದ್ಯಕ್ಕೆ ಬಲಿಷ್ಠವಾಗಿ ಗೋಚರಿಸುತ್ತಲೇ ಬಂದಿರುವ 6 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯವೇ ಇಲ್ಲಿನ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನ ವಿಲ್ಲ.

ಆಸ್ಟ್ರೇಲಿಯವನ್ನು ಸೋಲಿಸಿದವರೇ ವಿಶ್ವ ಚಾಂಪಿಯನ್ನರು ಎಂಬುದು ಇನ್ನೊಂದು ಸರಳ ಲೆಕ್ಕಾಚಾರ. ಆಸ್ಟ್ರೇಲಿಯನ್‌ ವನಿತೆಯರು ಎಲ್ಲ ವಿಭಾಗ ಗಳಲ್ಲೂ ಬಲಿಷ್ಠವಾಗಿದ್ದು, ಈವರೆಗೆ ಯಾರಿಗೂ ಮೇಲುಗೈ ಬಿಟ್ಟುಕೊಟ್ಟಿಲ್ಲ. ಲೀಗ್‌ ಹಂತದಲ್ಲಿ ಇದೇ ವಿಂಡೀಸಿಗೆ 7 ವಿಕೆಟ್‌ಗಳ ಸೋಲಿನೇಟು ಬಿಗಿದಿದೆ. ಇದಕ್ಕೆ ವೆಸ್ಟ್‌ ಇಂಡೀಸ್‌ ಸೇಡು ತೀರಿಸಿಕೊಳ್ಳಲಿದೆ ಎಂಬ ನಿರೀಕ್ಷೆ ಯಾರಲ್ಲೂ ಇಲ್ಲ.

ಆಸೀಸ್‌ ಅಷ್ಟರ ಮಟ್ಟಿಗೆ ಈ ಕೂಟದಲ್ಲಿ ತನ್ನ ಪ್ರಭುತ್ವ ಸ್ಥಾಪಿಸಿದೆ. ಹೀಗಾಗಿ ವಿಂಡೀಸ್‌ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿದರೆ ಅದರಲ್ಲಿ ಯಾವುದೇ ಅಚ್ಚರಿ ಇಲ್ಲ. ಒಂದು ವೇಳೆ ಆಸ್ಟ್ರೇಲಿಯ ಸೋತರಷ್ಟೇ ಅದು ಈ ಕೂಟದ ಬಿಗ್‌ ಆ್ಯಂಡ್‌ ಬ್ರೇಕಿಂಗ್‌ ನ್ಯೂಸ್‌ ಆಗಲಿದೆ.

ಎಲ್ಲಿಸ್‌ ಪೆರ್ರಿ ಗೈರು
ಬೆನ್ನುನೋವಿಗೆ ಸಿಲುಕಿ ರುವ ಆಸ್ಟ್ರೇಲಿಯದ ಮಧ್ಯಮ ಕ್ರಮಾಂಕದ ಆಲ್‌ರೌಂಡರ್‌ ಆಟಗಾರ್ತಿ ಎಲ್ಲಿಸ್‌ ಪೆರ್ರಿ ಸೆಮಿಫೈನಲ್‌ ಪಂದ್ಯ ದಿಂದ ಹೊರಗುಳಿಯಲಿದ್ದಾರೆ. ಉಪಾಂತ್ಯ ಪಂದ್ಯವಾದ್ದರಿಂದ ಆಸ್ಟ್ರೇಲಿಯ ಪಾಲಿಗೆ ಇದೊಂದು ಹಿನ್ನಡೆಯೇ ಆಗಿದೆ.

Advertisement

ಬೌಲಿಂಗ್‌ ವಿಭಾಗದಲ್ಲಿ ಮೆಗಾನ್‌ ಶಟ್‌, ಟಹ್ಲಿಯಾ ಮೆಗ್ರಾತ್‌, ಅಲಾನಾ ಕಿಂಗ್‌, ಆ್ಯಶ್ಲಿ ಗಾರ್ಡನರ್‌, ಜೆಸ್‌ ಜೊನಾಸೆನ್‌ ಅವರೆಲ್ಲ ಪ್ರಚಂಡ ಹಾಗೂ ಘಾತಕ ಫಾರ್ಮ್ನಲ್ಲಿದ್ದಾರೆ. ತಂಡ ಯಾರನ್ನೂ ನಂಬಿ ಕುಳಿತಿಲ್ಲ. ಒಬ್ಬರು ವಿಫಲರಾದರೆ ಇನ್ನೊಬ್ಬರು ಮುಂಚೂಣಿಯಲ್ಲಿ ನಿಂತು ತಂಡವನ್ನು ದಡ ಸೇರಿಸುತ್ತಾರೆ.

ವಿಂಡೀಸಿಗೆ ಅದೃಷ್ಟವಿದೆಯೇ?
ವೆಸ್ಟ್‌ ಇಂಡೀಸ್‌ ಅದೃಷ್ಟ ದ ಬೆಂಬಲದೊಂದಿಗೆ ಉಪಾಂತ್ಯ ತಲುಪಿದ ತಂಡ. ದಕ್ಷಿಣ ಆಫ್ರಿಕಾ ಎದುರಿನ ಪಂದ್ಯ ಮಳೆಯಿಂದ ರದ್ದಾದುದು ವಿಂಡೀಸಿಗೆ ಲಾಭವಾಗಿ ಪರಿಣಮಿಸಿತೆಂದೇ ಹೇಳಬೇಕು. ಲೀಗ್‌ ಹಂತದಲ್ಲಿ ಕೈ ಹಿಡಿದ ಅದೃಷ್ಟ ನಾಕೌಟ್‌ನಲ್ಲೂ ವೆಸ್ಟ್‌ ಇಂಡೀಸ್‌ ನೆರವಿಗೆ ಬಂದೀತೇ? ಕುತೂಹಲ ಸಹಜ.

 

Advertisement

Udayavani is now on Telegram. Click here to join our channel and stay updated with the latest news.

Next