Advertisement

6ನೇ ಐತಿಹಾಸಿಕ ಚಿನ್ನದ ನಿರೀಕ್ಷೆಯಲ್ಲಿ ಮೇರಿ ಕೋಮ್‌

06:15 AM Nov 15, 2018 | |

ಹೊಸದಿಲ್ಲಿ: ವಾಯು ಮಾಲಿನ್ಯದ ಆತಂಕದ ನಡುವೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಗುರುವಾರದಿಂದ “ಎಐಬಿಎ ವನಿತಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌’ ಆರಂಭಗೊಳ್ಳಲಿದೆ. 

Advertisement

ಇದು ವನಿತಾ ವಿಶ್ವ ಬಾಕ್ಸಿಂಗ್‌ ಕೂಟದ 10ನೇ ಆವೃತ್ತಿಯಾಗಿದ್ದು, ಹೊಸದಿಲ್ಲಿಯಲ್ಲಿ 2ನೇ ಸಲ ಈ ಪ್ರತಿಷ್ಠಿತ ಕೂಟ ಸಾಗಲಿದೆ. ವಿಶ್ವದ ಖ್ಯಾತ ಬಾಕ್ಸರ್‌ ಮೇರಿ ಕೋಮ್‌ ಐತಿಹಾಸಿಕ 6ನೇ ಬಂಗಾರದ ಪದಕದ ಮೇಲೆ ಕಣ್ಣಿಟ್ಟಿರುವುದರಿಂದ ಭಾರತದ ಕ್ರೀಡಾಭಿಮಾನಿಗಳ ಪಾಲಿಗೆ ಇದೊಂದು ಬಹು ನಿರೀಕ್ಷೆಯ ಕೂಟವಾಗಿದೆ.

72 ದೇಶಗಳ ಮುನ್ನೂರಕ್ಕೂ ಹೆಚ್ಚಿನ ಬಾಕ್ಸರ್‌ಗಳು ಪಾಲ್ಗೊಳ್ಳಲಿದ್ದು, ಇದು ವನಿತಾ ವಿಶ್ವ ಬಾಕ್ಸಿಂಗ್‌ ಇತಿಹಾಸದಲ್ಲೇ ಒಂದು ದಾಖಲೆಯಾಗಿದೆ. ಉಜ್ಬೆಕಿಸ್ಥಾನದ ಉದ್ಯಮಿ ಗಫ‌ೂರ್‌ ರಖೀಮೋವ್‌ ವಿಶ್ವ ಬಾಕ್ಸಿಂಗ್‌ ಆಸೋಸಿಯೇಶನ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬಾಕ್ಸಿಂಗ್‌ನ ಒಲಿಂಪಿಕ್ಸ್‌ ಭವಿಷ್ಯ ಅನಿಶ್ಚಿತತೆಯಲ್ಲಿರುವಾಗಲೇ ಭಾರೀ ಸಂಖ್ಯೆಯ ಸ್ಪರ್ಧಿಗಳು ಈ ಕೂಟದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.

ಭಾರತ ವನಿತಾ ವಿಶ್ವ ಬಾಕ್ಸಿಂಗ್‌ ಕೂಟದ ಆತಿಥ್ಯ ವಹಿಸುತ್ತಿರುವುದು 2ನೇ ಸಲ. 2006ರಲ್ಲಿ ಮೊದಲ ಸಲ ಹೊಸದಿಲ್ಲಿಯಲ್ಲೇ ಈ ಪಂದ್ಯಾವಳಿ ನಡೆದಿತ್ತು. ಅಂದು ಭಾರತ 4 ಚಿನ್ನ, ಒಂದು ಬೆಳ್ಳಿ ಹಾಗೂ 3 ಕಂಚಿನ ಸಹಿತ 8 ಪದಕ ಜಯಿಸಿತ್ತು.

ಈ ಬಾರಿ ಭಾರತದಿಂದ 10 ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ. ಅನುಭವಿ ಹಾಗೂ ಯುವ ಬಾಕ್ಸರ್‌ಗಳನ್ನು ತಂಡ ಒಳಗೊಂಡಿದೆ. ಆದರೆ 2006ರ ಪ್ರದರ್ಶನವನ್ನು ಪುನರಾವರ್ತಿಸುವುದು ಕಷ್ಟ ಎಂದು ಭಾವಿಸಲಾಗಿದೆ. ಒಂದು ಚಿನ್ನ ಸೇರಿದಂತೆ ಕನಿಷ್ಠ 3 ಪದಕಗಳು ಭಾರತಕ್ಕೆ ಒಲಿಯಬಹುದು ಎಂಬುದೊಂದು ಲೆಕ್ಕಾಚಾರ.

Advertisement

ಮೇರಿಗಿಂತ ಮಿಗಿಲಿಲ್ಲ…
ಈ ಕೂಟದಲ್ಲಿ ಮೇರಿ ಕೋಮ್‌ ಭಾರತದ ಬಹು ದೊಡ್ಡ ಭರವಸೆಯಾಗಿ ಮೂಡಿಬಂದಿದ್ದಾರೆ. 6ನೇ ಚಿನ್ನದ ಪದಕ ಮೇರಿ ಕೊರಳನ್ನು ಅಲಂಕರಿಸೀತೆಂಬ ನಿರೀಕ್ಷೆ ದಟ್ಟವಾಗಿದೆ.35ರ ಹರೆಯದ ಮೇರಿ ಈಗಾಗಲೇ ವಿಶ್ವ ಸ್ಪರ್ಧೆಯಲ್ಲಿ 5 ಬಂಗಾರವನ್ನು ಗೆದ್ದು ಐರ್ಲೆಂಡ್‌ನ‌ ಕ್ಯಾಟೀ ಟಯ್ಲರ್‌ ಅವರೊಂದಿಗೆ ಜಂಟಿ ದಾಖಲೆ ಸ್ಥಾಪಿಸಿದ್ದಾರೆ. ಒಂದು ಬೆಳ್ಳಿ ಪದಕವೂ ಒಲಿದಿದೆ. ಮೇರಿ ಇದನ್ನು 2001-2010ರ ಅವಧಿಯಲ್ಲಿ, 48 ಕೆಜಿ, 45 ಕೆಜಿ ಹಾಗೂ 46 ಕೆಜಿ ವಿಭಾಗಗಳ ಸ್ಪರ್ಧೆಗಳಲ್ಲಿ ಜಯಿಸಿದ್ದರು. ಕ್ಯಾಟಿ 2006-2016ರ ಅವಧಿಯಲ್ಲಿ 5 ಬಂಗಾರದ ಜತೆಗೆ ಒಂದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೇರಿಗಿಂತ ಮಿಗಿಲಾದ ಸಾಧನೆಗೈದವರು ಯಾರೂ ಇಲ್ಲ ಎಂಬುದು ಭಾರತದ ಪಾಲಿನ ಹೆಗ್ಗಳಿಕೆ.

“ಮ್ಯಾಗ್ನಿಫಿಸೆಂಟ್‌ ಮೇರಿ’ ಈ ಬಾರಿ 48 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ 2ನೇ ಚಿನ್ನಕ್ಕೆ ಮುತ್ತಿಡುವುದು ಅವರ ಗುರಿ. 2006ರ ದಿಲ್ಲಿ ಕೂಟದಲ್ಲೂ ಮೇರಿ ಬಂಗಾರದಿಂದ ಸಿಂಗಾರಗೊಂಡಿದ್ದರು. ಆದರೆ ಈ ಹಾದಿ ಅಷ್ಟು ಸುಲಭವಲ್ಲ ಎಂಬುದು ಅವರ ಅಭಿಪ್ರಾಯ.

“2001ರಿಂದಲೂ ನನ್ನ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಬಾಕ್ಸರ್‌ಗಳು ಕೂಟದಲ್ಲಿದ್ದಾರೆ. ಹೊಸಬರೂ ಬಂದಿದ್ದಾರೆ. ಹಿಂದಿನವರು ಅದೇ ಲಯದಲ್ಲಿದ್ದರೆ ಹೊಸಬರು ಹೆಚ್ಚು ವೇಗದಿಂದ ಕೂಡಿದ್ದು, ನಾನು ನನ್ನ ಅನುಭವವನ್ನು ಬಳಸಿಕೊಳ್ಳಬೇಕಿದೆ’ ಎಂದು ಮೇರಿ ಅಭಿಪ್ರಾಯಪಟ್ಟರು.

ಭಾರತದ ಸ್ಪರ್ಧಿಗಳು
ಮಣಿಪುರದವರೇ ಆದ ಎಲ್‌. ಸರಿತಾದೇವಿ ಭಾರತವನ್ನು ಪ್ರತಿನಿಧಿಸಲಿರುವ ಮತ್ತೋರ್ವ ಹಿರಿಯ ಸ್ಪರ್ಧಿ (60 ಕೆಜಿ). ಉಳಿದವರೆಂದರೆ ಪಿಂಕಿ ಜಂಗ್ರಾ (51 ಕೆಜಿ), ಮನೀಷಾ ಮೌನ್‌ (54 ಕೆಜಿ), ಸೋನಿಯಾ (57 ಕೆಜಿ), ಸಿಮ್ರನ್‌ಜಿàತ್‌ ಕೌರ್‌ (64 ಕೆಜಿ), ಲೊವಿÉನಾ ಬೊರ್ಗೊಹೈನ್‌ (69 ಕೆಜಿ), ಸವೀಟಿ ಬೂರಾ (75 ಕೆಜಿ), ಭಾಗ್ಯಬತಿ ಕಚಾರಿ (81 ಕೆಜಿ) ಮತ್ತು ಸೀಮಾ ಪೂನಿಯ (+81 ಕೆಜಿ).

ಹಾಲಿ ಒಲಿಂಪಿಕ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತರನೇಕರು ಇಲ್ಲಿ ಕಣಕ್ಕಿಳಿಯಲಿದ್ದು, ಸ್ಪರ್ಧೆ ಕಠಿನಗೊಳ್ಳುವುದರಲ್ಲಿ ಅನುಮಾನವಿಲ್ಲ.

ಪದಕ ವಿಜೇತ ಟಾಪ್‌-5 ದೇಶಗಳು
ದೇಶ    ಚಿನ್ನ    ಬೆಳ್ಳಿ    ಕಂಚು    ಒಟ್ಟು
ರಶ್ಯ    21    10    22    53
ಚೀನ    13    11    16    40
ಭಾರತ    8    6    14    28
ಉತ್ತರ ಕೊರಿಯಾ    7    7    7    21
ಕೆನಡಾ    7    2    16    25

Advertisement

Udayavani is now on Telegram. Click here to join our channel and stay updated with the latest news.

Next