Advertisement

ವನಿತಾ ಟೆಸ್ಟ್‌ ಪಂದ್ಯ : ಫಾಲೋಆನ್‌ ಸಂಕಟಕ್ಕೆ ಸಿಲುಕಿದ ಭಾರತ

02:34 AM Jun 19, 2021 | Team Udayavani |

ಬ್ರಿಸ್ಟಲ್‌: ಶಫಾಲಿ ವರ್ಮ ಮತ್ತು ಸ್ಮತಿ ಮಂಧನಾ ಅವರ 167 ರನ್‌ ಜತೆಯಾಟದ ಬಳಿಕ ನಾಟಕೀಯ ಬ್ಯಾಟಿಂಗ್‌ ಕುಸಿತ ಅನುಭವಿಸಿದ ಭಾರತದ ವನಿತೆಯರು, ಬ್ರಿಸ್ಟಲ್‌ ಟೆಸ್ಟ್‌ ಪಂದ್ಯದಲ್ಲಿ ಫಾಲೋಆನ್‌ ಸಂಕಟಕ್ಕೆ ಸಿಲುಕಿದ್ದಾರೆ.

Advertisement

ಇಂಗ್ಲೆಂಡಿನ 396 ರನ್ನಿಗೆ ಜವಾಬಾಗಿ ಮಿಥಾಲಿ ಪಡೆ 231ಕ್ಕೆ ಆಲೌಟ್‌ ಆಯಿತು. 165 ರನ್‌ ಹಿನ್ನಡೆ ಅನುಭವಿಸಿದ ಭಾರತವನ್ನು ಇಂಗ್ಲೆಂಡ್‌ ಮರಳಿ ಬ್ಯಾಟಿಂಗಿಗೆ ಇಳಿಸಿತು. 3ನೇ ದಿನದ ಚಹಾ ವಿರಾಮದ ವೇಳೆ ಒಂದಕ್ಕೆ 83 ರನ್‌ ಮಾಡಿ ಮಳೆಯ ನಡುವೆ ಹೋರಾಟವನ್ನು ಜಾರಿಯಲ್ಲಿರಿಸಿದೆ. ಶಫಾಲಿ ವರ್ಮ ಮತ್ತೂಂದು ಅರ್ಧ ಶತಕದ ಮೂಲಕ ತಂಡದ ರಕ್ಷಣೆಗೆ ನಿಂತಿದ್ದಾರೆ (ಬ್ಯಾಟಿಂಗ್‌ 55). ಶನಿವಾರ ಪಂದ್ಯದ ಅಂತಿಮ ದಿನ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 64 ರನ್‌ ಅಂತರದಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಶಫಾಲಿ 96, ಮಂಧನಾ 78, ದೀಪ್ತಿ ಶರ್ಮ ಔಟಾಗದೆ 29 ರನ್‌ ಮಾಡಿದರು. 4 ವಿಕೆಟ್‌ ಕಿತ್ತ ಎಡಗೈ ಸ್ಪಿನ್ನರ್‌ ಸೋಫಿ ಎಕ್‌Éಸ್ಟೋನ್‌ ಇಂಗ್ಲೆಂಡಿನ ಯಶಸ್ವಿ ಬೌಲರ್‌.

ಶತಕ ತಪ್ಪಿದ್ದಕ್ಕೆ ಶಫಾಲಿ ಬೇಸರ
ಪದಾರ್ಪಣ ಟೆಸ್ಟ್‌ ಪಂದ್ಯದಲ್ಲೇ, ಅತೀ ಕಿರಿಯ ವಯಸ್ಸಿನಲ್ಲೇ ಶತಕವೊಂದನ್ನು ದಾಖಲಿಸುವ ಅಪೂರ್ವ ಅವಕಾಶ ಕೈಜಾರಿದ್ದಕ್ಕಾಗಿ ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಇದೊಂದು ಸ್ಮರಣೀಯ ಟೆಸ್ಟ್‌ ಪದಾರ್ಪಣೆ ಎಂಬ ತೃಪ್ತಿ ಅವರದ್ದಾಗಿದೆ.

“ಲೇಡಿ ಸೆಹವಾಗ್‌’ ಎಂದೇ ಗುರುತಿಸಲ್ಪಟ್ಟಿರುವ ಶಫಾಲಿ ವರ್ಮ, ಐತಿಹಾಸಿಕ ಶತಕಕ್ಕೆ ಕೇವಲ 4 ರನ್‌ ಅಗತ್ಯವಿದ್ದಾಗ ಔಟ್‌ ಆಗಿ ತೆರಳಬೇಕಾಯಿತು. “ಸಹಜವಾಗಿಯೇ ಬೇಸರವಾಗಿದೆ. ಆದರೆ ಈ ಇನ್ನಿಂಗ್ಸ್‌ ಮುಂಬರುವ ಪಂದ್ಯಗಳಿಗೆ ನನ್ನಲ್ಲಿ ಹೊಸ ಆತ್ಮವಿಶ್ವಾಸ ತುಂಬಿಸಿದೆ. ಮುಂದಿನ ಸಲ ಶತಕ ಪೂರೈಸುವ ವಿಶ್ವಾಸ ನನ್ನದು…’ ಎಂದರು.
152 ಎಸೆತ ಎದುರಿಸಿದ ಶಫಾಲಿ 13 ಬೌಂಡರಿ, 2 ಸಿಕ್ಸರ್‌ ಬಾರಿಸಿ ಆತಿಥೇಯರ ದಾಳಿಯನ್ನು ಪುಡಿಗಟ್ಟಿದರು.

Advertisement

ಎರಡು ದಾಖಲೆ
96 ರನ್ನುಗಳ ಈ ಸ್ಫೋಟಕ ಇನ್ನಿಂಗ್ಸ್‌ ವೇಳೆ ಶಫಾಲಿ ಎರಡು ದಾಖಲೆ ಸ್ಥಾಪಿಸಿದರು. ಚೊಚ್ಚಲ ಟೆಸ್ಟ್‌ನಲ್ಲೇ ಸರ್ವಾಧಿಕ ವೈಯಕ್ತಿಕ ರನ್‌ ಹಾಗೂ ಮೊದಲ ವಿಕೆಟಿಗೆ ಅತ್ಯಧಿಕ ರನ್‌ ಪೇರಿಸಿದ ಸಾಧನೆ ಇದಾಗಿದೆ.

ಈ 96 ರನ್‌ ಎನ್ನುವುದು ಚೊಚ್ಚಲ ಟೆಸ್ಟ್‌ನಲ್ಲಿ ಭಾರತದ ಆಟಗಾರ್ತಿಯಿಂದ ದಾಖಲಾದ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ. ನ್ಯೂಜಿಲ್ಯಾಂಡ್‌ ಎದುರಿನ 1995ರ ನೆಲ್ಸನ್‌ ಪಂದ್ಯದಲ್ಲಿ ಚಂದ್ರಕಾಂತಾ ಕೌಲ್‌ 75 ರನ್‌ ಹೊಡೆದ ದಾಖಲೆ ಪತನಗೊಂಡಿತು.
ಮಂಧನಾ-ಶಫಾಲಿ ಮೊದಲ ವಿಕೆಟಿಗೆ 48.5 ಓವರ್‌ಗಳಲ್ಲಿ 167 ರನ್‌ ಒಟ್ಟುಗೂಡಿಸಿ ಭಾರತೀಯ ದಾಖಲೆ ಸ್ಥಾಪಿಸಿದರು. ಆಸ್ಟ್ರೇಲಿಯ ವಿರುದ್ಧದ 1984ರ ಮುಂಬಯಿ ಟೆಸ್ಟ್‌ನಲ್ಲಿ ಗಾರ್ಗಿ ಬ್ಯಾನರ್ಜಿ-ಸಂಧ್ಯಾ ಅಗರ್ವಾಲ್‌ 153 ರನ್‌ ಪೇರಿಸಿದ್ದು ಹಿಂದಿನ ದಾಖಲೆ.

Advertisement

Udayavani is now on Telegram. Click here to join our channel and stay updated with the latest news.

Next