Advertisement

ಅಗ್ನಿ ಅವಘಡ ತಡೆಗೆ ವನಿತೆಯರ ತಂಡ

12:30 AM Mar 04, 2020 | Lakshmi GovindaRaj |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ಅಗ್ನಿ ಅವಘಡ ಸಂಭವಿಸಿದರೂ, ಅದರ ನಿರ್ವಹಣೆಗೆ ಕನ್ನಡಿಗರು ಮತ್ತು ಅದರಲ್ಲೂ ಮಹಿಳೆಯರ ತಂಡ ಸಿದ್ಧವಾಗಿದೆ!

Advertisement

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ (ಬಿಐಎಎಲ್) 2019ರಲ್ಲಿ ಅಗ್ನಿಶಾಮಕದಳಕ್ಕೆ ವಿದ್ಯಾರ್ಹತೆ ಆಧಾರದ ಮೇಲೆ 14 ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅವರನ್ನು 4 ತಿಂಗಳ ತರಬೇತಿಗೆ ಕೊಲ್ಕತ್ತಾಗೆ ಕಳುಹಿಸಿತ್ತು. ಇವರಿಗೆ ದೈಹಿಕ ಸಾಮರ್ಥ್ಯ, ಅಗ್ನಿ ಅವಘಡ ತಡೆಯಲು ಅನುಸರಿಸಬೇಕಾದ ಕ್ರಮ, ಅಗ್ನಿ ಸುರಕ್ಷಿತೆ ಸೇರಿ ವಿವಿಧ ಆಯಾಮಗಳಲ್ಲಿ ತರಬೇತಿ ನೀಡಲಾಗಿದೆ. ಇದೀಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಏಷ್ಯಾದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಅಗ್ನಿಶಾಮಕ ದಳ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ. ಕಲಬುರಗಿ, ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಕನ್ನಡದ ಮಹಿಳೆಯರೇ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳಾ ಅಗ್ನಿಶಾಮಕ ಸಿಬ್ಬಂದಿಯಿಂದ ಮಂಗಳವಾರ ಅಣಕು ಅಗ್ನಿಶಾಮಕ ಪ್ರದರ್ಶನ ನಡೆಯಿತು. ವಿಮಾನ ಮತ್ತು ನಿಲ್ದಾಣದಲ್ಲಿ ಅಗ್ನಿ ಅವಘಡ ಉಂಟಾದಾಗ ಪ್ರಯಾಣಿಕರನ್ನು ಹೇಗೆ ರಕ್ಷಣೆ ಮಾಡಬೇಕು, ಬೆಂಕಿ ನಂದಿಸುವುದು, ಮುನ್ನೆಚರಿಕಾ ಕ್ರಮ, ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಣೆ ಹೇಗೆ ಮಾಡಬೇಕು ಎಂಬುದನ್ನು ಮಹಿಳಾ ಸಿಬ್ಬಂದಿ ಅಣಕು ಪ್ರದರ್ಶನ ಮೂಲಕ ತೋರಿಸಿಕೊಟ್ಟರು.

ಅಪಘಾತ, ಭದ್ರತೆ ಲೋಪ, ಹವಮಾನ ವೈಪರೀತ್ಯ ಹೀಗೆ 5 ರೀತಿಯ ತುರ್ತು ಸಂದರ್ಭಗಳು ಸಂಭವಿಸಲಿದ್ದು, ಇಂತಹ ಸನ್ನಿವೇಶಗಳಲ್ಲಿ ಅವಘಡ ತಡೆಯಲು ಅಗ್ನಿ ಶಾಮಕ ದಳ ಸದಾ ಸಿದ್ಧವಾಗಿರುತ್ತದೆ. ವಿಮಾನ ನಿಲ್ದಾಣದ ಅವಿಭಾಜ್ಯ ಅಂಗ ಅಗ್ನಿಶಾಮಕ ದಳವಾಗಿದ್ದು, ಒಟ್ಟಾರೆ 265 ಅಗ್ನಿಶಾಮಕ ಸಿಬ್ಬಂದಿಗಳಿರುವ ಈ ವೃತ್ತಿಯಲ್ಲಿ 14 ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮದ (ಬಿಐಎಎಲ್) ಕಂಪನಿ ವ್ಯವಹಾರ ವಿಭಾಗದ ಉಪಾಧ್ಯಕ್ಷ ವೆಂಕಟರಮಣ ತಿಳಿಸಿದರು.

Advertisement

ಮಹಿಳೆಯರ ಶಕ್ತಿದರ್ಶನ: ಮಂಗಳವಾರ ನಡೆದ ಅಣುಕು ಅಗ್ನಿಶಾಮಕ ಪ್ರದರ್ಶನದಲ್ಲಿ ಮಹಿಳಾ ಸಿಬ್ಬಂದಿಗಳ ಶಕ್ತಿ, ನಾಯಕತ್ವ ಪ್ರದರ್ಶನವಾಯಿತು. ಧಗ ಧಗಿಸುವ ಬೆಂಕಿಯ ಹತ್ತಿರ ಹೋಗಿ ಬೆಂಕಿಯನ್ನು ನಂದಿಸುವುದು ವಿಶೇಷವಾಗಿತ್ತು. ಅಗ್ನಿಶಾಮಕ ವಾಹನಗಳನ್ನು ಪುರುಷರೇ ಚಲಾಯಿಸು ವುದು ಸಾಮಾನ್ಯ. ಆದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ದಳದ 14 ಮಹಿಳಾ ಸಿಬ್ಬಂದಿಗಳೇ ವಾಹನ ಚಲಾಯಿಸುತ್ತಾರೆ. ಅವಘಡ ಸಂಭವಿಸಿದರೇ ಪುರುಷರ ಸಹಾಯವಿಲ್ಲದೇ ಪರಿಸ್ಥಿತಿ ನಿರ್ವಹಿಸುವ ಸಾಮರ್ಥ್ಯ ಅವರಲಿದ್ದು, ಮಹಿಳಾ ತಂಡ ರಚನೆಯಾಗಿದೆ.

ಮಹಿಳೆಯರು ಅಗ್ನಿಶಾಮಕ ದಳಕ್ಕೆ ಬರುವುದು ತೀರ ಕಡಿಮೆ. ಇದೊಂದು ಸವಾಲಿನ ಕೆಲಸ. ತರಬೇತಿಯಲ್ಲಿ ಉತ್ತೀರ್ಣ ಆಗುವುದಿಲ್ಲ ಎಂದು ಬಹಳಷ್ಟು ಜನರು ಅಂದುಕೊಂಡಿದ್ದರು. ಆದರೆ, ಅಸಾಧ್ಯವಾದುದ್ದನ್ನು ಸಾಧ್ಯವಾಗಿಸಿದ್ದೇವೆ. ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು.
-ವನಿತಾ, ಹಾಸನ

ಕೊಲ್ಕತ್ತಾದಲ್ಲಿರುವ ಅಗ್ನಿಶಾಮಕ ತರಬೇತಿ ಕೇಂದ್ರದಲ್ಲಿ 4 ತಿಂಗಳು ತರಬೇತಿ ನೀಡಿದರು. ಆರಂಭದಲ್ಲಿ ಬಹಳಷ್ಟು ಕಷ್ಟವಾಗಿತ್ತು. ಮರಳಿ ಊರಿಗೆ ಬರಬೇಕೆಂದು ಕೊಂಡಿದ್ದೆ. ಸ್ನೇಹಿತರ ಪ್ರೋತ್ಸಾಹದಿಂದ ಸವಾಲುಗಳ ಮಧ್ಯೆಯೇ ನಾವು ಗೆದ್ದಿದ್ದೇವೆ. ಮಹಿಳೆ ಎಲ್ಲ ಕ್ಷೇತ್ರದಲ್ಲಿಯೂ ಕೆಲಸ ನಿರ್ವಹಿಸಬಹುದು ಎಂದು ತೋರಿಸಿದ್ದೇವೆ.
-ಪ್ರಿಯದರ್ಶಿನಿ ಬಿರಾದಾರ್‌, ಕಲಬುರಗಿ

ಅಗ್ನಿಶಾಮಕ ದಳದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವೇ ಎಂದು ಕೇಳಿದವರೇ ಹೆಚ್ಚು. ಆದರೆ, ಪ್ರಯತ್ನ ಪಟ್ಟರೆ ಯಶಸ್ಸು ಖಂಡಿತ. ಅದರಂತೆ ಪರಿಶ್ರಮದಿಂದ ತರಬೇತಿ ಪಡೆದಿದ್ದೇವೆ. ಮನೆಯವರ ಪ್ರೋತ್ಸಾಹವೂ ಕಾರಣ. ಮಹಿಳೆ ಯಾವ ಕ್ಷೇತ್ರದಲ್ಲಿಯೂ ಸಾಧನೆ ಮಾಡಬಹುದು.
-ಸುಮಾ, ದೇವನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next