Advertisement

ಮಹಿಳೆಯರ ಯಕ್ಷ ಪ್ರತಿಭೆ ಅನಾವರಣಗೊಳಿಸಿದ ತಾಳಮದ್ದಲೆ ಸಪ್ತಾಹ 

06:00 AM Aug 10, 2018 | |

 ಸುರತ್ಕಲ್ಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಆಶ್ರಯದಲ್ಲಿ ಚತುರ್ಥ ವರ್ಷದ ಮಹಿಳಾ ಯಕ್ಷಗಾನ ತಾಳಮದ್ದಲೆ ಸಪ್ತಾಹ ಇತ್ತೀಚೆಗೆ ಜರಗಿತು. ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳ ಮಹಿಳಾ ತಂಡಗಳ ಕಲಾವಿದೆಯರನ್ನು ಆಯ್ದು, ಪೌರಾಣಿಕ ಪ್ರಸಂಗಗಳನ್ನು ಸಂಯೋಜಿಸಿ ಪಾತ್ರಗಳನ್ನು ಹಂಚಲಾಗಿತ್ತು. 

Advertisement

ಪ್ರಥಮ ದಿನ “ವಾಲಿಮೋಕ್ಷ’ ಪ್ರದರ್ಶಿಸಲ್ಪಟ್ಟಿತು. ಶಾಲಿನಿ ಹೆಬ್ಟಾರ್‌ ಭಾಗವತಿಕೆ ಮತ್ತು ಶಿವಪ್ರಸಾದ ಪುನರೂರು ಹಾಗೂ ಕು| ಅಪೂರ್ವಾ ಸುರತ್ಕಲ್‌ ಹಿಮ್ಮೇಳವನ್ನು ನಿರ್ವಹಿಸಿದರೆ, ಶ್ರೀರಾಮನಾಗಿ ಮಂಡಳಿಯ ಸುಲೋಚನಾ ವಿ. ರಾವ್‌ ಹಾಗೂ ಕೊನೆಯ ಭಾಗದ ವಾಲಿಯಾಗಿ ದೀಪ್ತಿ ಬಾಲಕೃಷ್ಣ ಭಟ್‌ ವಾದ ಮಂಡಿಸಿದರು. ಮೊದಲಿನ ಭಾಗದ ವಾಲಿಯಾಗಿ ಜಯಂತಿ ಹೊಳ್ಳ, ತಾರೆಯಾಗಿ ಗೀತಾರಾವ್‌ ಕೆದಿಲ ಭಾವಪೂರ್ಣ ಸಂವಾದ ನಡೆಸಿದರು. ಮೊದಲನೇ ಸುಗ್ರೀವನಾಗಿ ಪುತ್ತೂರಿನ ಶುಭಾ ಗಣೇಶ್‌ ಹಾಗೂ ಎರಡನೆ ಸುಗ್ರೀವನಾಗಿ ಮಲ್ಲಿಕಾ ಅಜಿತ್‌ ಸಿದ್ಧಕಟ್ಟೆ ಪಾತ್ರೋಚಿತವಾಗಿ ಮಾತನಾಡಿದರು. 2ನೇ ದಿನದ ಪ್ರಸಂಗ “ರುಕ್ಮಿಣಿ ಕಲ್ಯಾಣ’ ಬಲಿಪ ಪ್ರಸಾದ್‌ ಭಟ್‌ ಇವರ ಸಂಪ್ರದಾಯದ ಬಲಿಪ ಪರಂಪರೆಯ ಭಾಗವತಿಕೆಯೊಂದಿಗೆ ಭಾಗವತರಾದ ಭವ್ಯಶ್ರೀ ಹರೀಶ್‌ ಸೇರಿದಂತೆ ಹಿಮ್ಮೇಳದಲ್ಲಿ ಕೆ. ರಾಮ ಹೊಳ್ಳ, ಕು| ಅಪೂರ್ವಾ ಭಾಗವಹಿಸಿದರು. ಭೀಷ್ಮಕನಾಗಿ ಸುಲೋಚನಾ ವಿ. ರಾವ್‌, ಕೃಷ್ಣನಾಗಿ ಕಲಾವತಿ ರಂಜಿಸಿದರು.

ಸಾಯಿಸುಮಾ ನಾವಡ ರುಕ್ಮನಾಗಿ ಸಮರ್ಥ ಪಾತ್ರ ಚಿತ್ರಣ ಮಾಡಿದರು. ರುಕ್ಮಿಣಿಯಾಗಿ ಪುತ್ತೂರಿನ ಕಿಶೋರಿ ದುಗ್ಗಪ್ಪ ಭಾವನಾತ್ಮಕ ಪ್ರಸ್ತುತಿಯ ಮೂಲಕ ಮನಗೆದ್ದರು. ಇತರ ಪಾತ್ರಗಳಲ್ಲಿ ಲಲಿತಾ ಭಟ್‌, ವಿನೋದಾ ಮಂಗಳ ಕಾಣಿಸಿಕೊಂಡರು. ಮೂರನೇ ದಿನ “ಅಗ್ರಪೂಜೆ’ ಪ್ರಸಂಗಕ್ಕೆ ಪ್ರಸಾದ ಭಟ್‌, ವ್ಯಾಸರಾವ್‌ ಉತ್ತಮ ಹಿಮ್ಮೇಳ ಒದಗಿಸಿದರು. ಶಿಶುಪಾಲನಾಗಿ ಜಯಂತಿ ಹೊಳ್ಳ, ದಂತವಕ್ರನಾಗಿ ದೀಪ್ತಿ ಭಟ್‌ ಅಗ್ರಪೂಜೆಯ ಅಬ್ಬರದ ಖಳನಾಯಕರಾಗಿ ಮೆರೆದರೆ ಕಾರ್ಕಳದ ಜ್ಯೋತಿ ಸುನಿಲ್‌ ಕುಮಾರ್‌ ಶೆಟ್ಟಿ ಧರ್ಮರಾಯನಾಗಿ, ಲಲಿತಾ ಭಟ್‌ ಭೀಷ್ಮನಾಗಿ ಪಾತ್ರ ನಿರ್ವಹಿಸಿದರು. ಭೀಮನಾಗಿ ವಿನೋದಾ ಕಾಣಿಸಿಕೊಂಡರೆ, ಶ್ರೀಕೃಷ್ಣನಾಗಿ ಕು| ವೃಂದಾ ಕೊನ್ನಾಲ್‌ ಪ್ರಥಮ ಪ್ರದರ್ಶನದಲ್ಲೇ ಸಮರ್ಥ ಪಾತ್ರ ನಿರ್ವಹಣೆ ಮಾಡಿದರು. 4ನೇ ದಿನದ “ಗಾಂಡೀವ ನಿಂದನೆ’ ಎಂಬ ಅಪರೂಪದ ತಾಳಮದ್ದಲೆಯನ್ನು ಮಂಡಳಿಯ ಸದಸ್ಯಯರೇ ಪ್ರಸ್ತುತಪಡಿಸಿದರು. ಭಾಗವತರಾಗಿ ಕು| ಕಾವ್ಯಾಶ್ರೀ ಅಜೇರು ಹಾಗೂ ಹಿಮ್ಮೇಳದಲ್ಲಿ ಶ್ರೀಪತಿ ನಾಯಕ ಅಜೇರು, ಪೆರ್ಲ ಗಣಪತಿ ಭಟ್‌ ಸಹಕರಿಸಿದರು. ಸುಲೋಚನಾ ವಿ. ರಾವ್‌ ಧರ್ಮರಾಯನಾಗಿ, ಲಲಿತಾ ಭಟ್‌ ಅರ್ಜುನನಾಗಿ, ದೀಪ್ತಿ ಭಟ್‌ ಶ್ರೀಕೃಷ್ಣನಾಗಿ, ಕರ್ಣ- ಶಲ್ಯರಾಗಿ ಜಯಂತಿ ಹೊಳ್ಳ ಹಾಗೂ ಕಲಾವತಿ ಪಾತ್ರ ಚಿತ್ರಣ ಮಾಡಿದರು. 

5ನೇ ದಿನದ ಕರ್ಣಾವಸಾನ ಪ್ರಸಂಗದ ಭಾಗವತರಾಗಿ ಪ್ರಸಾದ ಭಟ್‌, ಎಸ್‌.ಎನ್‌. ಭಟ್‌ ಪುನರೂರು ಹಿಮ್ಮೇಳವನ್ನು ಒದಗಿಸಿದರೆ, ಪುತ್ತೂರಿನ ಪದ್ಮಾ ಆಚಾರ್ಯ ಹಾಗೂ ವೀಣಾ ತಂತ್ರಿ ಮೊದಲನೇ ಭಾಗದ ಕರ್ಣಾರ್ಜುನರಾಗಿ ವಾದ ಮಂಡಿಸಿದರು. 2ನೇ ಭಾಗದ ಕರ್ಣಾರ್ಜುನರಾಗಿ ದೀಪ್ತಿ ಭಟ್‌ ಹಾಗೂ ಸುಲೋಚನಾ ರಾವ್‌ ರಂಜಿಸಿದರು. ಶ್ರೀಕೃಷ್ಣನಾಗಿ ಜಯಂತಿ ಹೊಳ್ಳ , ಶಲ್ಯನ ಪಾತ್ರದಲ್ಲಿ ಕಲಾವತಿ ಪಾತ್ರೋಚಿತ ನಿರ್ವಹಣೆ ಮಾಡಿದರು. 6ನೇ ದಿನ ಉರ್ವಸ್ಟೋರಿನ ಸೌಜನ್ಯ ಮಹಿಳಾ ಮಂಡಲದ ಸದಸ್ಯೆಯರು “ನಾಸಾಚ್ಛೇದ’ ತಾಳಮದ್ದಲೆಯನ್ನು ನಡೆಸಿಕೊಟ್ಟರೆ, ಮುಂದೆ ದುರ್ಗಾಂಬಾ ಮಂಡಳಿಯ ಸದಸ್ಯೆಯರು ಜನಮೇಜಯ ಪ್ರಸಂಗದ ಪ್ರದರ್ಶನವಿತ್ತರು. ಹಿಮ್ಮೇಳದಲ್ಲಿ ಶಾಲಿನಿ ಹೆಬ್ಟಾರ್‌, ಪ್ರಸಾದ್‌ ಭಟ್‌, ಗಣೇಶ ಭಟ್‌, ಪೆರ್ಲ ಗಣಪತಿ ಭಟ್‌, ಮಾ| ವರುಣ ಹೆಬ್ಟಾರ್‌ ಸಹಕರಿಸಿದರು.ಕೊನೆಯ ದಿನ ದಕ್ಷಾಧ್ವರ ಪ್ರಸಂಗ ಸಿರಿಬಾಗಿಲು ರಾಮಕೃಷ್ಣ ಮಯ್ಯ ಭಾಗವತಿಕೆಯಲ್ಲಿ , ಎಸ್‌.ಎನ್‌. ಭಟ್‌ ಪುನರೂರು ಇವರ ಹಿಮ್ಮೇಳದೊಂದಿಗೆ ನಡೆಯಿತು. ಪುತ್ತೂರಿನ ಶುಭಾ ಜೆ.ಸಿ. ಅಡಿಗ ದಾಕ್ಷಾಯಿಣಿಯಾಗಿ,ಲಲಿತಾ ಭಟ್‌ ಈಶ್ವರನಾಗಿ ರಂಜಿಸಿದರು.ದಕ್ಷನಾಗಿ ತಂಪಾಡಿಯ ರಾಧಾ ಹೊಳ್ಳ, ವೀರಭದ್ರನಾಗಿ ಮಂಗಳೂರಿನ ಪೂರ್ಣಿಮಾ ಶಾಸ್ತ್ರಿ ರಂಜಿಸಿದರೆ, ರೇವತಿ ನವೀನ್‌ ತಾಳಮದ್ದಲೆ ರಂಗಕ್ಕೆ ಪ್ರವೇಶ ಮಾಡಿದರು. ಪೋಷಕ ಪಾತ್ರಗಳಲ್ಲಿ ಕು| ಕೃತಿ ಹೊಳ್ಳ, ಕಲಾವತಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು. ಪ್ರತಿದಿನ ಚಕ್ರತಾಳದಲ್ಲಿ ಚಂದ್ರಶೇಖರ ಕಾರಂತ ಸಹಕರಿಸಿದರು. 

ಯಕ್ಷಪ್ರಿಯ 

Advertisement
Advertisement

Udayavani is now on Telegram. Click here to join our channel and stay updated with the latest news.

Next