ದುಬೈ: ವನಿತಾ ಟಿ20 ವಿಶ್ವಕಪ್ ಶುಕ್ರವಾರದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 10 ವಿಕೆಟ್‌ಗಳಿಂದ ವೆಸ್ಟ್ ಇಂಡೀಸನ್ನು ಮಣಿಸಿ ಇತರೆ ತಂಡಗಳಿಗೆ ಎಚ್ಚರಿಕೆ ನೀಡಿದೆ. “ಬಿ’ ವಿಭಾಗದ ಈ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್‌ಗೆ ಗಳಿಸಲು ಸಾಧ್ಯವಾದದ್ದು 6 ವಿಕೆಟಿಗೆ 118 ರನ್ ಮಾತ್ರ. ದಕ್ಷಿಣ ಆಫ್ರಿಕಾ ಬರೀ 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 119 ರನ್ ಬಾರಿಸಿತು.
ಎಡಗೈ ಸ್ಪಿನ್ನರ್ ನೊಂಕುಲುಲೆಕೊ ಮಲಾಬಾ 29 ರನ್ನಿಗೆ 4 ವಿಕೆಟ್ ಕೆಡವಿ ವೆಸ್ಟ್‌ಇಂಡೀಸ್ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. ಉಳಿದೆರಡು ವಿಕೆಟ್ ಮರಿಜಾನ್ ಕಾಪ್ ಪಾಲಾದವು. ವಿಂಡೀಸ್ ಪರ ಅಜೇಯ 44 ರನ್ ಮಾಡಿದ ಸ್ಟಫಾನಿ ಟೇಲರ್ ಅವರದೇ ಹೆಚ್ಚಿನ ಗಳಿಕೆ. ಕೀಪರ್ ಶಿಮೇನ್ ಕ್ಯಾಂಬೆಲ್ಲೆ 17, ಝೈದಾ ಜೇಮ್ಸ್ ಅಜೇಯ 15 ರನ್ ಮಾಡಿದರು.
ಚೇಸಿಂಗ್ ವೇಳೆ ದಕ್ಷಿಣ ಆಫ್ರಿಕಾ ಆರಂಭಿಕರಾದ, ನಾಯಕಿ ಲಾರಾ ವೋಲ್ವಾರ್ಟ್ 59 (55 ಎಸೆತ, 7 ಬೌಂಡರಿ) ಮತ್ತು ಟಾಜ್ಮಿನ್ ಬ್ರಿಟ್ಸ್ 57 (52 ಎಸೆತ, 6 ಬೌಂಡರಿ ) ರನ್ ಬಾರಿಸಿ ಅಜೇಯರಾಗಿ ಉಳಿದರು. ನೊಂಕುಲುಲೆಕೊ ಮಲಾಬಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್ 20 ಓವರ್, 118/6 (ಸ್ಟಫಾನಿ ಟೇಲರ್ 44, ಶಿಮೇನ್ ಕ್ಯಾಂಬೆಲ್ಲೆ 17, ನೊಂಕುಲುಲೆಕೊ ಮಲಾಬಾ 29ಕ್ಕೆ 4, ಮರಿಜಾನ್ 14ಕ್ಕೆ 2). ದ.ಆಫ್ರಿಕಾ 17.5 ಓವರ್, 119/0 (ಲಾರಾ ವೋಲ್ವಾರ್ಟ್ ಅಜೇಯ 59, ಟಾಜ್ಮಿನ್ ಬ್ರಿಟ್ಸ್ ಅಜೇಯ 57).
ಪಂದ್ಯಶ್ರೇಷ್ಠ: ನೊಂಕುಲುಲೆಕೊ ಮಲಾಬಾ.
ಪಂದ್ಯದ ತಿರುವು
ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್‌ನ ಅಗ್ರ 5 ವಿಕೆಟ್‌ಗಳು 62 ರನ್‌ಗಳಿಗೆ ಉರುಳಿಕೊಂಡಿದ್ದವು. ಆಗಲೇ ಅದು ಕಡಿಮೆ ಮೊತ್ತ ಗಳಿಸುವುದು ಖಾತ್ರಿಯಾಗಿ, ಸೋಲಿನತ್ತ ಧಾವಿಸಿತ್ತು.
ಇದನ್ನೂ ಓದಿ: BBK11: ವಂಚನೆ ಪ್ರಕರಣ ನೆನೆದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ!