Advertisement

Womens T20 World Cup: ಪುರುಷರು ಆಯ್ತು ಈಗ ವನಿತಾ ಕ್ರಿಕೆಟ್‌ ಸಮರ

02:18 AM Oct 03, 2024 | Team Udayavani |

2009ರಲ್ಲಿ ಶುರುವಾದ ಮಹಿಳಾ ಟಿ20 ವಿಶ್ವಕಪ್‌ 8 ಆವೃತ್ತಿಗಳನ್ನು ಪೂರೈಸಿ 9ನೇ ಆವೃತ್ತಿಗೆ ಸಜ್ಜಾಗಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್‌, ದ.ಆಫ್ರಿಕಾ, ವೆಸ್ಟ್‌ ಇಂಡೀಸ್‌ನಂತಹ ಬಲಿಷ್ಠ ತಂಡಗಳು ಸ್ಪರ್ಧೆ ನಡೆಸಲಿವೆ. ಈ ವರ್ಷ ಭಾರತ ಪುರುಷರ ತಂಡ ಟಿ20 ವಿಶ್ವಕಪ್‌ ಗೆದ್ದು ಮೆರೆದಾಡಿದೆ. ಇದೀಗ ಮಹಿಳೆಯರ ಸರದಿ. ಒಮ್ಮೆಯೂ ಕಪ್‌ ಗೆಲ್ಲದ ಭಾರತೀಯ ತಂಡ ಈ ಬಾರಿ ಕಪ್‌ ಗೆಲ್ಲುತ್ತದೆ ಎಂಬ ವಿಶ್ವಾಸ ಭಾರತೀಯ ಅಭಿಮಾನಿಗಳದ್ದು.

Advertisement

ಮಹಿಳಾ ಟಿ20 ವಿಶ್ವಕಪ್‌ ಆರಂಭವಾದ ಬಗೆ..
2007ರಲ್ಲಿ ಆರಂಭವಾದ ಪುರುಷರ ಟಿ20 ವಿಶ್ವಕಪ್‌ ಜನಪ್ರಿಯಗೊಂಡ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) 2009ರಲ್ಲಿ ಮಹಿಳಾ ಟಿ20 ವಿಶ್ವಕಪ್‌ ಆರಂಭಿಸಿತು. ಚೊಚ್ಚಲ ಆವೃತ್ತಿ ಆರಂಭವಾಗಿದ್ದು ಇಂಗ್ಲೆಂಡ್‌ನ‌ಲ್ಲಿ. ಆರಂಭಿಕ 3 ಆವೃತ್ತಿಗಳಲ್ಲಿ ಅಂದರೆ 2009, 2010 ಮತ್ತು 2012ರಲ್ಲಿ 8 ತಂಡಗಳು ಪಾಲ್ಗೊಂಡಿದ್ದವು. ಬಳಿಕ ತಂಡಗಳನ್ನು 10ಕ್ಕೆ ಏರಿಸಲಾಗಿದೆ. ಮುಂದಿನ ಆವೃತ್ತಿ, ಅಂದರೆ 2026ರಲ್ಲಿ ಇಂಗ್ಲೆಂಡ್‌ನ‌ಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಒಟ್ಟು 12 ತಂಡಗಳು ಪಾಲ್ಗೊಳ್ಳಲಿವೆ. ಈವರೆಗೆ ಒಟ್ಟು 8 ಆವೃತ್ತಿಗಳು ನಡೆದಿದ್ದು, ಈ ಬಾರಿ ಯುಎಇಯಲ್ಲಿ ನಡೆಯುತ್ತಿರುವುದು 9ನೇ ಆವೃತ್ತಿ.

2 ಗುಂಪು, ಅಗ್ರ 4 ತಂಡಗಳು ಸೆಮೀಸ್‌ಗೆ
ಮಹಿಳಾ ಟಿ20 ವಿಶ್ವಕಪ್‌ಗಾಗಿ ಈ ಬಾರಿ ಒಟ್ಟು 10 ತಂಡಗಳು ಸ್ಪರ್ಧಿಸುತ್ತಿದ್ದು, ಈ ತಂಡಗಳನ್ನು ತಲಾ 5ರಂತೆ ಎ ಮತ್ತು ಬಿ ಹೀಗೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಲೀಗ್‌ ಹಂತದಲ್ಲಿ ಪ್ರತೀ ತಂಡವೂ ತನ್ನ ಗುಂಪಿನ ಉಳಿದ 4 ತಂಡಗಳ ವಿರುದ್ಧ ಒಂದೊಂದು ಪಂದ್ಯ ಆಡಲಿದೆ. ಲೀಗ್‌ ಹಂತದ ಪಂದ್ಯಗಳ ಬಳಿಕ ಎರಡೂ ಗುಂಪುಗಳಲ್ಲಿ ಅಗ್ರ 2 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತವೆ. ಅಲ್ಲಿ ಗೆಲ್ಲುವ ತಂಡಗಳು ಫೈನಲ್‌ಗೇರುತ್ತವೆ.

ಆಸ್ಟ್ರೇಲಿಯಾ ಮಹಿಳೆಯರದ್ದೇ ಪಾರಮ್ಯ
ಪುರುಷರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಅತೀ ಹೆಚ್ಚು ವಿಶ್ವಕಪ್‌ಗ್ಳನ್ನು ಗೆದ್ದಿರುವಂತೆ ಮಹಿಳಾ ಟಿ20 ವಿಶ್ವಕಪ್‌ನಲ್ಲೂ ಆಸ್ಟ್ರೇಲಿಯಾ ಮಹಿಳಾ ತಂಡವೇ ಪಾರಮ್ಯ ಮೆರೆದಿದೆ. ಈವರೆಗೆ ನಡೆದ ಒಟ್ಟು 8 ಆವೃತ್ತಿಗಳಲ್ಲಿ ಆಸೀಸ್‌ ಮಹಿಳೆಯರು 6 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. 2010, 2012, 2014, 2018, 2020, 2023 ಹೀಗೆ ಬಹುತೇಕ ಪ್ರಶಸ್ತಿಗಳನ್ನು ಆಸೀಸ್‌ ಬಾಚಿಕೊಂಡಿದೆ. 2 ಬಾರಿ ಹ್ಯಾಟ್ರಿಕ್‌ ಪ್ರಶಸ್ತಿಗಳ ಹಿರಿಮೆಯೂ ಆಸ್ಟ್ರೇಲಿಯಾದ್ದಾಗಿದೆ. 2009ರ ಉದ್ಘಾಟನ ಆವೃತ್ತಿಯಲ್ಲಿ ಆತಿಥೇಯ ಇಂಗ್ಲೆಂಡ್‌, 2016ರಲ್ಲಿ ಭಾರತದಲ್ಲಿ ನಡೆದಿದ್ದ ಆವೃತ್ತಿಯಲ್ಲಿ ವೆಸ್ಟ್‌ ಇಂಡೀಸ್‌ ಪ್ರಶಸ್ತಿ ಗೆದ್ದಿತ್ತು.

ಈವರೆಗೆ ಭಾರತ ಒಮ್ಮೆ ಮಾತ್ರ ಫೈನಲ್‌ಗೆ
ಕಳೆದ 8 ಆವೃತ್ತಿಗಳಲ್ಲಿ ಭಾರತ ಮಹಿಳಾ ತಂಡ ಕೇವಲ ಒಮ್ಮೆ ಮಾತ್ರ ಫೈನಲ್‌ಗೆ ಪ್ರವೇಶಿಸಿದೆ. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಆವೃತ್ತಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ಹರ್ಮನ್‌ಪ್ರೀತ್‌ ಕೌರ್‌ ಪಡೆ, ಫೈನಲ್‌ನಲ್ಲಿ ಆತಿಥೇಯರ ವಿರುದ್ಧ 85 ರನ್‌ಗಳಿಂದ ಸೋತಿತ್ತು. ವಿಪರ್ಯಾಸವೆಂದರೆ ಆ ಆವೃತ್ತಿಯಲ್ಲಿ ಭಾರತ ಫೈನಲ್‌ ಬಿಟ್ಟರೆ ಬೇರಾವ ಪಂದ್ಯವೂ ಸೋತಿರಲಿಲ್ಲ. ಇದರಲ್ಲಿ ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯ ರದ್ದಾಗಿತ್ತು. ಉಳಿದಂತೆ ಎಲ್ಲಾ ಪಂದ್ಯಗಳನ್ನು ಗೆದ್ದಿದ್ದ ಭಾರತ, ಫೈನಲ್‌ನಲ್ಲಿ ಸೋತು ಆಘಾತಕ್ಕೆ ಒಳಗಾಗಿತ್ತು.

Advertisement

4 ಬಾರಿ ಸೆಮಿಫೈನಲ್‌ಗೇರಿದೆ ಭಾರತೀಯ ಪಡೆ
2009ರ ಚೊಚ್ಚಲ ಆವೃತ್ತಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಭಾರತ ತಂಡ, ನ್ಯೂಜಿಲೆಂಡ್‌ ವಿರುದ್ಧ 52 ರನ್‌ನಿಂದ ಸೋತು ನಿರಾಸೆಗೀಡಾಗಿತ್ತು. ಮುಂದಿನ ಆವೃತ್ತಿ ಅಂದರೆ 2010ರಲ್ಲೂ ಭಾರತ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್‌ನಿಂದ ಸೋತಿತು. ಇನ್ನು 2012ರಲ್ಲಿ ಭಾರತ ಲೀಗ್‌ ಹಂತದಲ್ಲೇ ಸೋತು ಹೊರಬಿದ್ದಿತ್ತು. 2014ರಲ್ಲಿ ಲೀಗ್‌ ಹಂತದಲ್ಲಿ ಹೊರಕ್ಕೆ, 2016ರಲ್ಲಿ ಲೀಗ್‌ ಹಂತ, 2018ರಲ್ಲಿ ಸೆಮಿಫೈನಲ್‌, 2020ರಲ್ಲಿ ಫೈನಲ್‌, 2023ರಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ ಸಾಧನೆ ಭಾರತದ್ದಾಗಿದೆ.

ಬಾಂಗ್ಲಾ ದಂಗೆಯಿಂದಾಗಿ ಗಲ್ಫ್‌ಗೆ ಸ್ಥಳಾಂತರ
ವಾಸ್ತವಿಕವಾಗಿ ಗುರುವಾರದಿಂದ ಆರಂಭವಾಗುವ ಕೂಟ ಬಾಂಗ್ಲಾದಲ್ಲಿ ನಡೆಯಬೇಕಿತ್ತು. ಆದರೆ ಆ ದೇಶದಲ್ಲಿ ಇದ್ದಕ್ಕಿದ್ದಂತೆ ರಾಜಕೀಯ ಅರಾಜಕತೆ ಆರಂಭವಾಗಿ, ಆಂತರಿಕ ದಂಗೆ ಶುರುವಾಯಿತು. ಈ ಹಿನ್ನೆಲೆಯಲ್ಲಿ 3ನೇ ದೇಶವೊಂದರ ಬಗ್ಗೆ ಬಹಳ ಚರ್ಚೆಯಾಯಿತು. ಅಂತಿಮವಾಗಿ ಯುಎಇಯಲ್ಲಿ ಕೂಟವನ್ನು ನಡೆಸುವುದೆಂದು ನಿರ್ಧಾರವಾಯಿತು. ದುಬಾೖ ಮತ್ತು ಶಾರ್ಜಾದಲ್ಲಿ ಎಲ್ಲ ಪಂದ್ಯಗಳು ನಡೆಯಲಿವೆ. ಆದರೂ ಆತಿಥೇಯ ದೇಶ ಬಾಂಗ್ಲಾವೇ ಆಗಿದೆ.

ಕಣದಲ್ಲಿರುವ ತಂಡಗಳು
ಗ್ರೂಪ್‌ “ಎ’ : ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್‌, ಪಾಕಿಸ್ಥಾನ, ಶ್ರೀಲಂಕಾ

ಗ್ರೂಪ್‌ “ಬಿ’: ಬಾಂಗ್ಲಾದೇಶ, ಇಂಗ್ಲೆಂಡ್‌, ಸ್ಕಾಟ್ಲೆಂಡ್‌, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌


ಚೊಚ್ಚಲ ಕಪ್‌ ಜಯಕ್ಕೆ ಭಾರತ ಸಮರ

ಮಹಿಳಾ ಟಿ20 ವಿಶ್ವಕಪ್‌ 8 ಆವೃತ್ತಿಗಳಲ್ಲಿ ಒಮ್ಮೆ ಮಾತ್ರ ಫೈನಲ್‌ಗೆ ಪ್ರವೇಶಿಸಿರುವ ಭಾರತೀಯ ತಂಡ ಪ್ರಶಸ್ತಿ ಗೆದ್ದಿಲ್ಲ. ಹಾಗಂತ ಈ ಬಾರಿ ಭಾರತಕ್ಕೆ ಪ್ರಶಸ್ತಿ ಗೆಲ್ಲುವ ಅವಕಾಶ ಇಲ್ಲವಾ? ಖಂಡಿತಾ ಇದೆ. ಏಕೆಂದರೆ, ತಂಡದ ಸಾಮರ್ಥ್ಯ, ಬಲ ಈ ಬಾರಿ ಪ್ರಶಸ್ತಿಯ ಭರವಸೆ ಮೂಡಿಸುವಂತಿದೆ.

ಬಲಿಷ್ಠ ಬ್ಯಾಟಿಂಗ್‌ ಬಣ
ಈ ಬಾರಿಯ ಭಾರತ ಮಹಿಳಾ ಟಿ20 ವಿಶ್ವಕಪ್‌ ತಂಡದಲ್ಲಿ ಪ್ರತಿಭಾವಂತ ಬ್ಯಾಟರ್‌ಗಳಿದ್ದಾರೆ. ಭಾರತದ ಬ್ಯಾಟಿಂಗ್‌ ಬಣದಲ್ಲಿ ಸ್ಮತಿ ಮಂಧನಾ, ಹರ್ಮಪ್ರೀತ್‌ ಕೌರ್‌, ಜೆಮಿಮಾ ರೋಡ್ರಿಗಸ್‌ ಪ್ರಮುಖ ಆಧಾರ ಸ್ಥಂಭಗಳು. ಇನ್ನು ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಶಫಾಲಿ ವರ್ಮಾ ಮತ್ತು ವಿಕೆಟ್‌ ಕೀಪರ್‌ ಕಮ್‌ ಬ್ಯಾಟರ್‌ ರಿಚಾ ಘೋಷ್‌ ಕೂಡ ಪಂದ್ಯದ ಗತಿಯನ್ನು ಬದಲಿಸಬಲ್ಲರು.

ಸ್ಪಿನ್ನರ್‌ಗಳೇ ಪ್ರಮುಖ ಬಲ
ಈ ಬಾರಿಯ ಭಾರತ ಮಹಿಳಾ ವಿಶ್ವಕಪ್‌ ತಂಡದಲ್ಲಿ ಸ್ಪಿನ್ನರ್‌ಗಳೇ ತಂಡದ ದೊಡ್ಡ ಬಲ. ದೀಪ್ತಿ ಶರ್ಮಾ, ರಾಧಾ ಯಾದವ್‌, ಸಜನಾ ಸಜೀವನ್‌, ಆಶಾ ಶೋಭನಾ, ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಹೀಗೆ ತಂಡದಲ್ಲಿ ಘಾತಕ ಸ್ಪಿನ್ನರ್‌ಗಳಿದ್ದಾರೆ.

ಅಸ್ಥಿರ 3ನೇ ಕ್ರಮಾಂಕವೇ ಭೀತಿ
ಬ್ಯಾಟಿಂಗ್‌ ಮತ್ತು ಸ್ಪಿನ್‌ ಬೌಲಿಂಗ್‌ನಲ್ಲಿ ಭಾರತ ಮಹಿಳಾ ತಂಡ ಶಕ್ತಿಶಾಲಿಯಾಗಿದ್ದರೂ ತಂಡದ 3ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಅಸ್ಥಿರತೆ ಎದ್ದು ಕಾಣುತ್ತಿದೆ. ಈ ಕ್ರಮಾಂಕದಲ್ಲಿ ಯಸ್ತಿಕಾ ಭಾಟಿಯಾ, ದಯಾಲನ್‌ ಹೇಮಲತಾ, ಉಮಾ ಚೆಟ್ರಿ ಹೀಗೆ ಬೇರೆ ಬೇರೆ ಆಟಗಾರ್ತಿಯರನ್ನು ಪ್ರಯೋಗಿಸಿ ನೋಡಲಾಗಿದೆ. ಆದರೆ ಸ್ಥಿರ ಬ್ಯಾಟರ್‌ಗಳು ಇನ್ನೂ ಸಿಕ್ಕಿಲ್ಲ. ಈ ಮಧ್ಯೆ ಸದ್ಯ ಅಷ್ಟೇನೂ ಫಾರ್ಮ್ನಲ್ಲಿ ಇಲ್ಲದ ಹರ್ಮನ್‌ಪ್ರೀತ್‌ ಕೌರ್‌ 3ನೇ ಕ್ರಮಾಂಕದಲ್ಲಿ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ.

ಫೀಲ್ಡಿಂಗ್‌ನಲ್ಲಿ ಸುಧಾರಿಸಬೇಕಿದೆ
ಕಳೆದ ಕೆಲವು ವರ್ಷಗಳಿಂದಲೂ ಮಹಿಳಾ ತಂಡ ಫೀಲ್ಡಿಂಗ್‌ ವಿಚಾರಕ್ಕೆ ಟೀಕೆಗೆ ಗುರಿಯಾಗುತ್ತಿದೆ. ಕ್ಯಾಚ್‌ ಡ್ರಾಪ್‌ನಂತ ತಪ್ಪುಗಳಿಂದ ಭಾರತ ಪಂದ್ಯಗಳನ್ನು ಕಳೆದುಕೊಳ್ಳುತ್ತಿದೆ. ಒಟ್ಟಾರೆಯಾಗಿ ತಂಡದ ಫೀಲ್ಡಿಂಗ್‌ ಗುಣಮಟ್ಟ ಸುಧಾರಿಸಬೇಕಾಗಿದೆ. ಇದರ ಜತೆಗೆ ಒತ್ತಡದ ಸಂದರ್ಭಗಳನ್ನು ನಿಭಾಯಿಸುವುದನ್ನು ತಂಡ ಕಲಿಯುವ ಅಗತ್ಯವಿದೆ. ಈ ಕೆಲವು ವಿಭಾಗಗಳಲ್ಲಿ ತಂಡ ಸುಧಾರಣೆ ತೋರಬೇಕಿದೆ.

ಬಲ
1. ಮಂಧನಾ, ರೋಡ್ರಿ ಗಸ್‌, ರಿಚಾ ಪ್ರಮುಖ ಬ್ಯಾಟಿಂಗ್‌ ಬಲ
2. ದೀಪ್ತಿ, ರಾಧಾ, ಆಶಾ, ಶ್ರೇಯಾಂಕಾ ಅತ್ಯುತ್ತಮ ಸ್ಪಿನ್ನರ್‌ಗಳು
3. ಟಿ20 ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌ ಬಳಿಕ 3ನೇ ಸ್ಥಾನ

ದೌರ್ಬಲ್ಯ
1. 3ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಸೂಕ್ತ, ಸ್ಥಿರ ಬ್ಯಾಟರ್‌ಗಳಿಲ್ಲ.
2. ಫೀಲ್ಡಿಂಗ್‌ನಲ್ಲಿ ತಂಡ ಬಹಳ ಸುಧಾರಿಸಬೇಕಿದೆ.
3. ವೇಗದಲ್ಲಿ ಅಗತ್ಯವಿರುವಷ್ಟು ಬಲಿಷ್ಠವಾಗಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next