Advertisement

Women’s T20 World Cup: ಲಂಕಾ ಎದುರಾಳಿ: ಭಾರತಕ್ಕೆ ಬೇಕಿದೆ “ರನ್‌ ರೇಟ್‌ ಗೆಲುವು’

10:32 PM Oct 08, 2024 | Team Udayavani |

ದುಬಾೖ: ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಈವರೆಗೆ ಮಿಶ್ರಫ‌ಲ ಅನುಭವಿಸಿರುವ ಭಾರತದ ವನಿತೆಯರು, ಬುಧವಾರ ಶ್ರೀಲಂಕಾವನ್ನು ಎದುರಿಸಲಿದ್ದಾರೆ. ಎರಡೂ ತಂಡಗಳ ಪಾಲಿಗೆ ಇದು ಗೆಲ್ಲಲೇಬೇಕಾದ ಪಂದ್ಯ. ಹೀಗಾಗಿ ಸ್ಪರ್ಧೆ ತೀವ್ರ ಜೋಶ್‌ನಿಂದ ಕೂಡಿರುವ ಎಲ್ಲ ಸಾಧ್ಯತೆ ಇದೆ.

Advertisement

ಹರ್ಮನ್‌ಪ್ರೀತ್‌ ಕೌರ್‌ ಬಳಗ ನ್ಯೂಜಿಲ್ಯಾಂಡ್‌ ವಿರುದ್ಧ ತೀರಾ ಕಳಪೆ ಪ್ರದರ್ಶನ ನೀಡಿ ಸೋಲಿನ ಆರಂಭ ಪಡೆದಿತ್ತು. ಆದರೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಎಲ್ಲ ವಿಭಾಗಗಳಲ್ಲೂ ಹಿಂದಿಕ್ಕಿ ಅಂಕದ ಖಾತೆ ತೆರೆದಿದೆ. ಇನ್ನೊಂದೆಡೆ ಶ್ರೀಲಂಕಾ ಎರಡೂ ಪಂದ್ಯಗಳಲ್ಲಿ ಎಡವಿದೆ. ಭಾರತದ ಕೈಯಲ್ಲೂ ಸೋತರೆ ಚಾಮರಿ ಅತಪಟ್ಟು ಬಳಗದ ನಿರ್ಗಮನ ಖಚಿತ.

ಭಾರತ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಹ್ಯಾಟ್ರಿಕ್‌ ಚಾಂಪಿಯನ್‌ ಖ್ಯಾತಿಯ ಬಲಿಷ್ಠ ಆಸ್ಟ್ರೇಲಿಯನ್ನು ಎದುರಿಸಬೇಕಿದೆ. ಇದು ಅತ್ಯಂತ ಕಠಿನ ಸವಾಲು. ಉಳಿದೆರಡೂ ಪಂದ್ಯಗಳನ್ನು ಗೆದ್ದರಷ್ಟೇ ಸಾಲದು, ದೊಡ್ಡ ಅಂತರದಲ್ಲಿ, ರನ್‌ರೇಟ್‌ನಲ್ಲಿ ಭಾರೀ ಪ್ರಗತಿ ಸಾಧಿಸುವ ರೀತಿಯಲ್ಲಿ ಜಯಭೇರಿ ಮೊಳಗಿಸಬೇಕಿದೆ.

ಬ್ಯಾಟಿಂಗ್‌ ಸುಧಾರಣೆ ಅಗತ್ಯ

ಕಳೆದೆರಡು ಪಂದ್ಯಗಳಲ್ಲಿ ಭಾರತಕ್ಕೆ ಎದುರಾಗಿರುವ ದೊಡ್ಡ ಸಮಸ್ಯೆ ಬ್ಯಾಟಿಂಗ್‌ ವಿಭಾಗದ್ದು. ಮುಖ್ಯವಾಗಿ ಆರಂಭಿಕರಿಂದ ಸ್ಫೋಟಕ ಆಟ ಸಾಧ್ಯವಾಗುತ್ತಿಲ್ಲ. ಡ್ಯಾಶಿಂಗ್‌ ಓಪನರ್‌ ಶಫಾಲಿ 2 ಮತ್ತು 32, ಮಂಧನಾ 12 ಮತ್ತು 7 ರನ್‌ ಮಾಡಿ ಒತ್ತಡ ಹೆಚ್ಚಿಸಿದ್ದಾರೆ. ಹಾಗೆಯೇ ಜೆಮಿಮಾ, ದೀಪ್ತಿ ಶರ್ಮ, ರಿಚಾ ಘೋಷ್‌ ಅವರ ನೈಜ ಆಟ ಕೂಡ ಕಂಡುಬಂದಿಲ್ಲ.

Advertisement

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಪಾಕ್‌ ಎದುರಿನ ಪಂದ್ಯದ ವೇಳೆ ಕುತ್ತಿಗೆಗೆ ಏಟು ಅನುಭವಿಸಿದ್ದು, ಶ್ರೀಲಂಕಾ ವಿರುದ್ಧ ಆಡುವುದು ಅನುಮಾನ ಎನ್ನಲಾಗಿದೆ. ಆಗ ಭಾರತಕ್ಕೆ ಇದೊಂದು ಭಾರೀ ಹಿನ್ನಡೆ ಆಗಲಿದೆ.

ಆದರೆ ದುಬಾೖ ಮತ್ತು ಶಾರ್ಜಾದ ಟ್ರ್ಯಾಕ್‌ಗಳೆರಡೂ ನಿಧಾನ ಗತಿಯಿಂದ ಕೂಡಿರುವುದನ್ನು ಒಪ್ಪಲೇಬೇಕಾಗುತ್ತದೆ. 120ರ ಗಡಿ ದಾಟಿದರೂ ಅದೊಂದು ಸವಾಲಿನ ಮೊತ್ತವಾಗಿ ದಾಖಲಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ನ್ಯೂಜಿಲ್ಯಾಂಡ್‌ಗೆ ನಮ್ಮ ಬೌಲರ್ 160 ರನ್‌ ಬಿಟ್ಟುಕೊಟ್ಟು ಭಾರೀ ದುಬಾರಿ ಆಗಿದ್ದರು. ಆದರೆ ಪಾಕ್‌ ವಿರುದ್ಧ ಅಮೋಘ ನಿಯಂತ್ರಣ ಸಾಧಿಸಿದ್ದರು.

ಯುವ ಸ್ಪಿನ್ನರ್‌ ಶ್ರೇಯಾಂಕಾ ಪಾಟೀಲ್‌, ಲೆಗ್‌ಸ್ಪಿನ್ನರ್‌ ಆಶಾ ಶೋಭನಾ, ಮಧ್ಯಮ ವೇಗಿ ಅರುಂಧತಿ ರೆಡ್ಡಿ ಪಾಕಿಸ್ಥಾನವನ್ನು ಕಟ್ಟಿಹಾಕಿದ ರೀತಿ ಅಮೋಘವಾಗಿತ್ತು. ಆಲ್‌ರೌಂಡರ್‌ ದೀಪ್ತಿ ಶರ್ಮ ಕೂಡಲೇ ಲಯಕ್ಕೆ ಮರಳಬೇಕಿದೆ. ರಾಧಾ ಯಾದವ್‌ ರೇಸ್‌ನಲ್ಲಿದ್ದಾರೆ.

ಏಷ್ಯಾ ಕಪ್‌ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧವೇ ಸೋತಿದ್ದ ಭಾರತ ಚಾಂಪಿಯನ್‌ ಪಟ್ಟ ಉಳಿಸಿಕೊಳ್ಳುವಲ್ಲಿ ಎಡವಿತ್ತು. ಈಗ ವಿಶ್ವಕಪ್‌ನಲ್ಲಿ ಸೇಡು ತೀರಿಸುವ ಸಮಯ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next