Advertisement

ಇಂದಿನಿಂದ 8ನೇ ಮಹಿಳಾ ಟಿ20 ವಿಶ್ವಕಪ್‌: ಅಂತ್ಯಗೊಂಡೀತೇ ಆಸ್ಟ್ರೇಲಿಯ ಪ್ರಭುತ್ವ?

11:05 PM Feb 09, 2023 | Team Udayavani |

ಕೇಪ್‌ ಟೌನ್‌: ವಿಶ್ವಕಪ್‌ ವರ್ಷದಲ್ಲಿ ಐಸಿಸಿಯ ಎರಡನೇ ಮಹತ್ವದ ಪಂದ್ಯಾವಳಿಗೆ ವನಿತೆಯರು ಸಜ್ಜಾಗುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ವನಿತೆಯರ ಚೊಚ್ಚಲ ಅಂಡರ್‌-19 ವಿಶ್ವಕಪ್‌ ಬೆನ್ನಲ್ಲೇ ಸೀನಿಯರ್‌ಗಳ ಟಿ20 ವಿಶ್ವಕಪ್‌ ಕೂಟಕ್ಕೆ ದಕ್ಷಿಣ ಆಫ್ರಿಕಾ ಸಿಂಗರಿಸಿಕೊಂಡು ನಿಂತಿದೆ. ಫೆ.10ರಿಂದ 26ರ ತನಕ 8ನೇ ಆವೃತ್ತಿಯ ವಿಶ್ವಕಪ್‌ ನಡೆಯಲಿದೆ.

Advertisement

ಒಟ್ಟು 10 ತಂಡಗಳು ಪಾಲ್ಗೊಳ್ಳಲಿರುವ ಈ ಪಂದ್ಯಾವಳಿಯಲ್ಲಿ ಮತ್ತೂಮ್ಮೆ ಆಸ್ಟ್ರೇಲಿಯವೇ ಮೆಚ್ಚಿನ ತಂಡವಾಗಿ ಗೋಚರಿಸುತ್ತಿದೆ. ಕಳೆದ ಸಲದ ರನ್ನರ್ ಅಪ್‌ ಭಾರತ ಮೊದಲ ಪ್ರಶಸ್ತಿಯ ತವಕದಲ್ಲಿದೆ. ಚೊಚ್ಚಲ ಅಂಡರ್‌-19 ವಿಶ್ವಕಪ್‌ ಗೆದ್ದ ಭಾರತದ ಕಿರಿಯರು ಹರ್ಮನ್‌ಪ್ರೀತ್‌ ಕೌರ್‌ ಪಡೆಗೆ ಸ್ಫೂರ್ತಿ ತುಂಬಿದ್ದಂತೂ ನಿಜ. ಆದರೆ ಇದು ಅಂಗಳದಲ್ಲಿ ಉಕ್ಕಬೇಕಿದೆ.

ಈವರೆಗಿನ 7 ವಿಶ್ವಕಪ್‌ ಕೂಟಗಳಲ್ಲಿ ಆಸ್ಟ್ರೇಲಿಯದ ವನಿತೆಯರು 6 ಸಲ ಫೈನಲ್‌ಗೆ ಲಗ್ಗೆಯಿರಿಸಿ ಸರ್ವಾಧಿಕ 5 ಸಲ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ಕಳೆದೆರಡೂ ಕೂಟಗಳಲ್ಲಿ ಕಾಂಗರೂ ವನಿತೆಯರು ಪರಾಕ್ರಮ ಮೆರೆದಿದ್ದಾರೆ. ಈ ಸಲವೂ ಗೆದ್ದರೆ ಎರಡನೇ ಸಲ ಹ್ಯಾಟ್ರಿಕ್‌ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.

2009ರ ಚೊಚ್ಚಲ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡನ್ನು ಮಣಿಸಿದ ಇಂಗ್ಲೆಂಡ್‌ ಪ್ರಶಸ್ತಿ ಎತ್ತಿತ್ತು. ಬಳಿಕ ಆಸ್ಟ್ರೇಲಿಯ ಸತತ 3 ಸಲ ಚಾಂಪಿಯನ್‌ ಆಗಿ ಮೆರೆದಾಡಿತು. 4ನೇ ಪ್ರಶಸ್ತಿ ಹಾದಿಯಲ್ಲಿದ್ದಾಗ ವೆಸ್ಟ್‌ ಇಂಡೀಸ್‌ ಅಡ್ಡಗಾಲಿಕ್ಕಿತು. ಕೋಲ್ಕತದ ಫೈನಲ್‌ನಲ್ಲಿ ವಿಂಡೀಸ್‌ 8 ವಿಕೆಟ್‌ಗಳಿಂದ ಆಸ್ಟ್ರೇಲಿಯವನ್ನು ಮಣಿಸಿತು. 2018 ಮತ್ತು 2020ರ ಮುಂದಿನೆರಡು ಕೂಟಗಳಲ್ಲಿ ಕಾಂಗರೂ ಪ್ರಭುತ್ವ ಮರಳಿ ಸ್ಥಾಪನೆಗೊಂಡಿತು.

ಕಳೆದ 22 ತಿಂಗಳಲ್ಲಿ ಆಸ್ಟ್ರೇಲಿಯ ಸೋತದ್ದು ಒಂದು ಟಿ20 ಪಂದ್ಯ ಮಾತ್ರ ಎಂಬುದನ್ನು ಗಮನಿಸಬೇಕು. ಈ ಸೋಲು ಕೂಡ ಸೂಪರ್‌ ಓವರ್‌ನಲ್ಲಿ ಬಂದಿತ್ತು. ಭಾರತ ಎದುರಾಳಿ ತಂಡವಾಗಿತ್ತು. ನಾಯಕಿ ಮೆಗ್‌ ಲ್ಯಾನಿಂಗ್‌ ಮರಳಿರುವುದು ಆಸೀಸ್‌ ಪಾಲಿಗೆ ಬೂಸ್ಟ್‌ ಆಗಿ ಪರಿಣಮಿಸಿದೆ.

Advertisement

ಭಾರತವೂ ಬಲಿಷ್ಠ: ವಿಶ್ವಕಪ್‌ನಲ್ಲಿ ಭಾರತದ ವನಿತೆಯರದ್ದು ತೀರಾ ಕಳಪೆ ಸಾಧನೆ. ಆದರೆ ಕಳೆದ 2020ರ ಪಂದ್ಯಾವಳಿ ಮಾತ್ರ ಇದಕ್ಕೆ ಅಪವಾದವಾಗಿತ್ತು. ಆಸ್ಟ್ರೇಲಿಯ ಆತಿಥ್ಯದ ಈ ಕೂಟದಲ್ಲಿ ಭಾರತ ಫೈನಲ್‌ ತನಕ ಸಾಗಿತ್ತು. ಅಲ್ಲಿ ಆಸೀಸ್‌ ವಿರುದ್ಧ ತೀವ್ರ ಬ್ಯಾಟಿಂಗ್‌ ಬರಗಾಲಕ್ಕೆ ಸಿಲುಕಿ 99ಕ್ಕೆ ಕುಸಿದು ಟ್ರೋಫಿಯನ್ನು ಕಳೆದುಕೊಳ್ಳಬೇಕಾಯಿತು.

ಮೇಲ್ನೋಟಕ್ಕೆ ಭಾರತ ತಂಡ ಬಲಿಷ್ಠವಾಗಿಯೇ ಇದೆ. ಮಂಧನಾ, ಶಫಾಲಿ, ಕೌರ್‌, ದೀಪ್ತಿ, ರಿಚಾ, ಹರ್ಲೀನ್‌, ಜೆಮಿಮಾ, ರೇಣುಕಾ, ದೇವಿಕಾ, ಪೂಜಾ, ರಾಜೇಶ್ವರಿ, ಯಾಸ್ತಿಕಾ, ರಾಧಾ, ಅಂಜಲಿ ಜತೆಗೆ ಶಿಖಾ ಪಾಂಡೆ ಪುನರಾಗಮನ ಸಾರಿದ್ದಾರೆ. ಆದರೆ ತಂಡಕ್ಕೊಂದು ಪರಿಪೂರ್ಣ ಫಿನಿಶಿಂಗ್‌ ಇಲ್ಲದಿರುವುದೊಂದು ದೊಡ್ಡ ಹಿನ್ನಡೆ. ಭಾರತ ತನ್ನ ಮೊದಲ ಪಂದ್ಯವನ್ನು ಭಾನುವಾರ ಪಾಕಿಸ್ತಾನ ವಿರುದ್ಧ ಆಡಲಿದೆ. ಭಾರತದ ವಿಭಾಗದಲ್ಲೇ ಇರುವ ಇಂಗ್ಲೆಂಡ್‌ ಮತ್ತೂಂದು ನೆಚ್ಚಿನ ತಂಡ. 2009ರ ಚೊಚ್ಚಲ ಕೂಟದಲ್ಲಿ ಪ್ರಶಸ್ತಿ ಎತ್ತಿದ ಬಳಿಕ 3 ಸಲ ಫೈನಲ್‌ಗೆ ಲಗ್ಗೆ ಇರಿಸಿದರೂ ಇಂಗ್ಲೆಂಡ್‌ಗೆ ಪ್ರಶಸ್ತಿ ಮರೀಚಿಕಯೇ ಆಗಿತ್ತು.

ವನಿತಾ ಟಿ20 ವಿಶ್ವಕಪ್‌ ವೇಳಾಪಟ್ಟಿ
ದಿನಾಂಕ ಪಂದ್ಯ ಸ್ಥಳ ಆರಂಭ

ಫೆ. 10 ದಕ್ಷಿಣ ಆಫ್ರಿಕಾ-ಶ್ರೀಲಂಕಾ ಕೇಪ್‌ ಟೌನ್‌ ರಾ. 10.30
ಫೆ. 11 ವೆಸ್ಟ್‌ ಇಂಡೀಸ್‌-ಇಂಗ್ಲೆಂಡ್‌ ಪಾರ್ಲ್ ಸಂ. 6.30
ಫೆ. 11 ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ಪಾರ್ಲ್ ರಾ. 10.30
ಫೆ. 12 ಭಾರತ-ಪಾಕಿಸ್ಥಾನ ಕೇಪ್‌ ಟೌನ್‌ ಸಂ. 6.30
ಫೆ. 12 ಬಾಂಗ್ಲಾದೇಶ-ಶ್ರೀಲಂಕಾ ಕೇಪ್‌ ಟೌನ್‌ ರಾ. 10.30
ಫೆ. 13 ಇಂಗ್ಲೆಂಡ್‌-ಐರ್ಲೆಂಡ್‌ ಪಾರ್ಲ್ ಸಂ. 6.30
ಫೆ. 13 ದ. ಆಫ್ರಿಕಾ-ನ್ಯೂಜಿಲ್ಯಾಂಡ್‌ ಪಾರ್ಲ್ ರಾ. 10.30
ಫೆ. 14 ಆಸ್ಟ್ರೇಲಿಯ-ಬಾಂಗ್ಲಾದೇಶ ಕೆಬೆರಾ ರಾ. 10.30
ಫೆ. 15 ಭಾರತ-ವೆಸ್ಟ್‌ ಇಂಡೀಸ್‌ ಕೇಪ್‌ ಟೌನ್‌ ಸಂ. 6.30
ಫೆ. 15 ಪಾಕಿಸ್ಥಾನ-ಐರ್ಲೆಂಡ್‌ ಕೇಪ್‌ ಟೌನ್‌ ರಾ. 10.30
ಫೆ. 16 ಶ್ರೀಲಂಕಾ-ಆಸ್ಟ್ರೇಲಿಯ ಕೆಬೆರಾ ಸಂ. 6.30
ಫೆ. 17 ನ್ಯೂಜಿಲ್ಯಾಂಡ್‌-ಬಾಂಗ್ಲಾ ಕೇಪ್‌ ಟೌನ್‌ ಸಂ. 6.30
ಫೆ. 17 ವೆಸ್ಟ್‌ ಇಂಡೀಸ್‌-ಐರ್ಲೆಂಡ್‌ ಕೇಪ್‌ ಟೌನ್‌ ರಾ. 10.30
ಫೆ. 18 ಭಾರತ-ಇಂಗ್ಲೆಂಡ್‌ ಕೆಬೆರಾ ರಾ. 6.30
ಫೆ. 18 ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯ ಕೆಬೆರಾ ರಾ. 10.30
ಫೆ. 19 ಪಾಕಿಸ್ಥಾನ-ವೆಸ್ಟ್‌ ಇಂಡೀಸ್‌ ಪಾರ್ಲ್ ಸಂ. 6.30
ಫೆ. 19 ನ್ಯೂಜಿಲ್ಯಾಂಡ್‌-ಶ್ರೀಲಂಕಾ ಪಾರ್ಲ್ ರಾ. 10.30
ಫೆ. 20 ಭಾರತ-ಐರ್ಲೆಂಡ್‌ ಕೆಬೆರಾ ಸಂ. 6.30
ಫೆ. 21 ಇಂಗ್ಲೆಂಡ್‌-ಪಾಕಿಸ್ಥಾನ ಕೇಪ್‌ ಟೌನ್‌ ಸಂ. 6.30
ಫೆ. 21 ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ ಕೇಪ್‌ ಟೌನ್‌ ರಾ. 10.30
ಫೆ. 23 ಸೆಮಿಫೈನಲ್‌-1 ಕೇಪ್‌ ಟೌನ್‌ ರಾ. 6.30
ಫೆ. 24 ಸೆಮಿಫೈನಲ್‌-2 ಕೇಪ್‌ ಟೌನ್‌ ರಾ. 6.30
ಫೆ. 26 ಫೈನಲ್‌ ಕೇಪ್‌ ಟೌನ್‌ ರಾ. 6.30

ಸಮಯ: ಭಾರತೀಯ ಕಾಲಮಾನ

ಪ್ರಸಾರ: ಸ್ಟಾರ್‌  ಸ್ಫೋರ್ಟ್ಸ್

ಗ್ರೂಪ್‌-1: ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ದ. ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ.

ಗ್ರೂಪ್‌-2: ಇಂಗ್ಲೆಂಡ್‌, ಭಾರತ, ವೆಸ್ಟ್‌ ಇಂಡೀಸ್‌, ಪಾಕಿಸ್ಥಾನ, ಐರ್ಲೆಂಡ್‌.

Advertisement

Udayavani is now on Telegram. Click here to join our channel and stay updated with the latest news.

Next