ದೇವನಹಳ್ಳಿ: ಕೇಂದ್ರ ಸರ್ಕಾರದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಬಗ್ಗೆ, ಜನರಲ್ಲಿ ಅರಿವು ಮೂಡಿಸಬೇಕು. ಮಹಿಳೆಯರ ಹಕ್ಕುಗಳ ಬಗ್ಗೆ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ತಿಳಿಸಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪುಷ್ಪಲತಾ ಜಿ.ರಾಯ್ಕರ್ ತಿಳಿಸಿದರು.
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಮಕ್ಕಳ ಮತ್ತು ಮಹಿಳಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ದರು.ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.ಪೋಷಕರು ಗಂಡುಮಕ್ಕಳಷ್ಟೇ ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಒತ್ತು ನೀಡಬೇಕು ಎಂದರು.
ಎಲ್ಲದರಲ್ಲೂ ಮುಂದು: ಆಧುನಿಕ ಜಗತ್ತಿ ನಲ್ಲಿ ಮಹಿಳೆಯರು ಪುರುಷ ಪ್ರಧಾನ ಕ್ಷೇತ್ರಗಳಲ್ಲೂ ಪುರಷರ ಸಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾವು ಪುರುಷರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂದು ಸಾಬೀತುಪಡಿಸಿದ್ದಾರೆ. ಕ್ರೀಡೆ, ಸಿನಿಮಾ, ವಾಣಿಜ್ಯ, ರಾಜಕೀಯ ಸೇರಿ ಪ್ರಮುಖ ಕ್ಷೇತ್ರಗಳಲ್ಲೂ ಅನನ್ಯ ಸಾಧನೆ ಮಾಡಿರುವ ಮಹಿಳೆಯರು ಹೆಣ್ಣುಮಕ್ಕಿಳಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.
ಇಂದು ಜನಸಂಖ್ಯೆಯಲ್ಲಿ ಶೇಕಡವಾರು ಕುಸಿಯುತ್ತಿರುವ ಸಂಖ್ಯೆ: ದಿನೇ ದಿನೇ ಕುಸಿಯುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹ , ಭ್ರೂಣ ಹತ್ಯೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಂಭಂಧಿಸಿದಂತೆ ಅರಿವು ಮೂಡಿಸುವ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ. ಮಹಿಳೆಯರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕು. ಹೆಣ್ಣು ಮಕ್ಕಳು ಹೆಚ್ಚಿನ ಪುಸ್ತಕ ಗಳನ್ನು ಅಧ್ಯಯನ ಮಾಡಿ ಜ್ಞಾನ ವೃದ್ಧಿಸಿಕೊಳ್ಳಬೇಕು. ಬಾಲ್ಯ ವಿವಾಹ ಮಾಡಿಸಿದವರಿಗೆ ಕಠಿಣ ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಸಬೇಕೆಂದರು. ಜಿಲ್ಲಾ ಕುಂಟುಂಬ ಕಲ್ಯಾಣ ಮತ್ತು ನೋಡಲ್ ಅಧಿಕಾರಿ ಡಾ. ಶ್ರೀನಿವಾಸ್ ಮಾತನಾಡಿ, ಭ್ರೂಣ ಹತ್ಯೆಯಿಂದ ಹೆಣ್ಣು ಮಕ್ಕಳ ಸಂತತಿ ಕಡಿಮೆ ಆಗಿ ಮುಂದೊಂದು ದಿನ ಸಮಾಜಕ್ಕ ಮಾರಕವಾಗಲಿದೆ. ಬ್ರಿಟೀಷ್ ಸರ್ಕಾರ 1870 ರಲ್ಲೇ ಭ್ರೂಣ ಹತ್ಯೆ ತಡೆ ಕಾಯ್ದೆ ಜಾರಿ ಮಾಡಿತ್ತು. 1996 ರಲ್ಲಿ ಕಾಯ್ದೆಯ ಅನುಷ್ಠಾನ ಮಾಡಿ ಭ್ರೂಣ ಹತ್ಯೆ ಮಾಡುವ ವೈದ್ಯರಿಗೆ 3 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ ವಿಧಿಸಿದೆ. ಒಂದು ವರ್ಷದಲ್ಲಿ 10 ಮಿಲಿಯನ್ ಹೆಣ್ಣು ಭ್ರೂಣ ಹತ್ಯೆ ಮಾಡಲಾಗಿದೆ. ಐದು ಲಕ್ಷ ಹೆಣ್ಣು ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಒಂದು ಲಕ್ಷ ಗರ್ಭ ಪಾತವಾಗಿದೆ ಎಂದು ತಿಳಿಸಿದರು.
ತಾಪಂ ಅಧ್ಯಕ್ಷೆ ಚೈತ್ರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ರಾಧಮ್ಮ, ತಾಲೂಕು ಸಿಡಿಪಿಒ ಹೇಮಲತಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೆ.ಎಸ್ ಶಿವ ಶಂಕರಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಿಳಾ ವೇದಿಕೆ ಸಂಚಾಲಕಿ ಲಲಿತಮ್ಮ ಸೇರಿದಂತೆ ಮತ್ತಿತರರು ಇದ್ದರು.