ಕಿಂಬರ್ಲಿ: ದಕ್ಷಿಣ ಆಫ್ರಿಕಾದಲ್ಲಿ ಪುರುಷರ ಕ್ರಿಕೆಟ್ ತಂಡ ಏಕದಿನ ಸರಣಿಯಲ್ಲಿ ಸತತ 2 ಗೆಲುವು ದಾಖಲಿಸಿದ ಬೆನ್ನಲ್ಲೇ, ಭಾರತದ ಮಹಿಳೆಯರೂ ತಾವೇನೂ ಕಡಿಮೆ ಇಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಕಿಂಬರ್ಲಿಯಲ್ಲಿ ನಡೆದ ಸೋಮವಾರದ ಮೊದಲ ಏಕದಿನ ಮುಖಾಮುಖೀಯಲ್ಲಿ ದಕ್ಷಿಣ ಆಫ್ರಿಕಾವನ್ನು 88 ರನ್ನುಗಳಿಂದ ಮಣಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 7 ವಿಕೆಟಿಗೆ 213 ರನ್ನುಗಳ ಸಾಮಾನ್ಯ ಮೊತ್ತ ಪೇರಿಸಿತು. ಜವಾಬಿತ್ತ ದಕ್ಷಿಣ ಆಫ್ರಿಕಾ 43. 2 ಓವರ್‌ಗಳಲ್ಲಿ 125 ರನ್ನಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ದಕ್ಷಿಣ ಆಫ್ರಿಕಾ ಪರ ನಾಯಕಿ ಡೇನ್ ವಾನ್ ನೀಕರ್ಕ್ (41 ರನ್), ಮರಿಜಾನೆ ಕಾಪ್ (23 ರನ್) ಮಾಡಲಷ್ಟೇ ಶಕ್ತರಾದರು. ಭಾರತ ಪರ ಜೂಲನ್ ಗೋಸ್ವಾಮಿ 4, ಶಿಖಾ ಪಾಂಡೆ 3 ಹಾಗೂ ಪೂನಂ ಯಾದವ್ 2 ವಿಕೆಟ್ ಹಾರಿಸಿ ಆಫ್ರಿಕಾವನ್ನು ನಡುಗಿಸಿದರು.
ವಿಶ್ವಕಪ್ ಫೈನಲ್‌ನಲ್ಲಿ ಎಡವಿದ ಬಳಿಕ ಭಾರತದ ಆಟಗಾರ್ತಿಯರು ಪಾಲ್ಗೊಳ್ಳುತ್ತಿರುವ ಮಹತ್ವದ ಸರಣಿ ಇದಾಗಿದೆ. ಈ ಜಯದೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಮಿಥಾಲಿ ಪಡೆ 1 0 ಮುನ್ನಡೆ ಸಾಧಿಸಿದೆ. ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಅಮೋಘ ಮಟ್ಟದಲ್ಲಿತ್ತು. ಒಂದು ಹಂತದಲ್ಲಿ ಕೇವಲ ಒಂದೇ ವಿಕೆಟಿಗೆ 154 ರನ್ ಬಾರಿಸಿ ಬೃಹತ್ ಮೊತ್ತದ ಸೂಚನೆ ನೀಡಿತ್ತು. ಆದರೆ 35ನೇ ಓವರ್ ಬಳಿಕ ಆತಿಥೇಯ ಬೌಲರ್‌ಗಳ ಕೈ ಮೇಲಾಯಿತು. ಭಾರತ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಹೋಯಿತು.
ಸ್ಮತಿ ಮೋಹಕ ಆಟ: ಭಾರತದ ಸರದಿಯಲ್ಲಿ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಆಕರ್ಷಕ ಆಟವಾಡಿ 98 ಎಸೆತಗಳಿಂದ 84 ರನ್ ಬಾರಿಸಿದರು. 36ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಮಂಧನಾ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಎತ್ತಿ ಮೆರೆದರು. ಇವರ ಜತೆಗಾರ್ತಿ ಪೂನಂ ರಾವತ್ 19 ರನ್ ಮಾಡಿದರು. ಮೊದಲ ವಿಕೆಟ್ ಜತೆಯಾಟದಲ್ಲಿ 55 ರನ್ ಒಟ್ಟುಗೂಡಿತು. ಭರ್ತಿ 15 ಓವರ್ ತನಕ ಈ ಜೋಡಿ ಕ್ರೀಸಿನಲ್ಲಿತ್ತು. ಮಂಧನಾ ಅವರನ್ನು ಕೂಡಿಕೊಂಡ ಮಿಥಾಲಿ ರಾಜ್ (45 ರನ್ )ಜವಾಬ್ದಾರಿಯುತ ಆಟವಾಡಿದರು.
ಸಂಕ್ಷಿಪ್ತ ಸ್ಕೋರ್
ಭಾರತ 50 ಓವರ್‌ಗೆ 231/7 (ಸ್ಮತಿ 84, ಮಿಥಾಲಿ 45, ಕಾಪ್ 26ಕ್ಕೆ 2). ದಕ್ಷಿಣ ಆಫ್ರಿಕಾ 43.2 ಓವರ್‌ಗೆ 125 (ನೀಕರ್ಕ್ 41, ಕಾಪ್ 23, ಜೂಲನ್ 24ಕ್ಕೆ 4).