Advertisement

ಮಹಿಳಾ ಸಶಕ್ತಿ, ಪರಿಸರ ಸಂರಕ್ಷಣೆ ಉಪನ್ಯಾಸ

05:13 PM Feb 07, 2018 | |

ನಗರ : ಒಂದೊಮ್ಮೆ ಕಾಡು ಪ್ರಾಣಿಗಳಿಂದ ಮನುಷ್ಯನಿಗೆ ತೊಂದರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಮನುಷ್ಯನಿಂದಲೇ ಅರಣ್ಯಕ್ಕೆ ಹಾನಿ ಆಗುತ್ತಿದೆ. ಅರಣ್ಯ ಲೂಟಿ ಮಾಡುವ ಮಾಫಿಯಾ ಬಹುದೊಡ್ಡದಾಗಿ ಬೆಳೆದಿದ್ದು, ರಾಜಕೀಯ, ಇಲಾಖೆಯ ಬೆಂಬಲವನ್ನು ಪಡೆದುಕೊಂಡಿದ್ದಾರೆ. ತಮ್ಮ ಮಾಫಿಯಾವನ್ನು ಮರೆಮಾಚಲು ನಕ್ಸಲ್‌, ಪ್ರೇತಾತ್ಮದ ಕಥೆ ಕಟ್ಟುತ್ತಿದ್ದಾರೆ ಎಂದು ಪರಿಸರ ತಜ್ಞ ದಿನೇಶ್‌ ಹೊಳ್ಳ ವಿಶ್ಲೇಷಿಸಿದರು.

Advertisement

ಲಯನ್ಸ್‌, ಲಯನೆಸ್‌ ಕ್ಲಬ್‌, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆಶ್ರಯದಲ್ಲಿ ಮನೀಷಾ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವನ ಆಕ್ರಮಣ
ಕಡವೆಯೊಂದು ಕಾಲಿಗೆ ಗಾಜಿನ ಚೂರು ಚುಚ್ಚಿಸಿಕೊಂಡಿದ್ದು, ರಕ್ತದ ಕಲೆ ಕಾಡಿನ ದಾರಿಯಲ್ಲಿ ಹರಡಿತ್ತು. ಕಡವೆ ಕಾಲಿನಲ್ಲಿ ಗಾಜಿನ ಚೂರು ಹಾಗೇ ಇದ್ದರೆ, ಆರೇ ತಿಂಗಳಲ್ಲಿ ಅದು ಅಸುನೀಗುತ್ತದೆ. ಈ ಬಗ್ಗೆ ಇಲಾಖೆ ಗಮನ ಸೆಳೆದಾಗ ಎಂದಿನ ಹಾರಿಕೆ ಉತ್ತರ. ಅರಣ್ಯದ ಮಗ್ಗುಲಿನಲ್ಲಿ ಹಗಲಿನ ವೇಳೆಯೇ ಬೇಟೆ ನಡೆಸುವವರಿದ್ದಾರೆ. ಕಾಡುಕೋಣದ ಮಾಂಸಕ್ಕೆ ಉತ್ತಮ ಬೇಡಿಕೆ ಇದ್ದು, ಬೇಟೆ ಆಡುವುದರ ಚಿತ್ರೀಕರಣವನ್ನು ಮಾಡಿ ದ್ದೇವೆ. ದಾಖಲೆ ಸಹಿತ ಇಲಾಖೆಗೆ ತೋರಿಸಿದರೆ, ನಮ್ಮನ್ನೇ ಸಾಗಹಾಕಿದರು. ಇದರ ಮೇಲೆ ಮಾಫಿಯಾಗಳಿಂದ ಬೆದರಿಕೆ ಕರೆ. ಹೀಗೆ ಅರಣ್ಯದ ಮೇಲಾಗುತ್ತಿರುವ ಮಾನವನ ಆಕ್ರಮಣವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಪಕ್ಷಿಗಳು ಆಹಾರ ತಿನ್ನುವಾಗ, ಆನೆ, ಕಾಡುಕೋಣದ ಲದ್ದಿಯಿಅಂದ ಅರಣ್ಯ ಅಭಿವೃದ್ಧಿ ಆಗುತ್ತಾ ಸಾಗುತ್ತದೆ. ಆದರೆ ಮನುಷ್ಯನಿದ್ದಲ್ಲಿ ಅರಣ್ಯ ನಾಶವಾಗುತ್ತದೆ. ಗಾಂಜಾ ಬೆಳೆಸಲೋಸುಗ ಅರಣ್ಯ ಜಾಗಕ್ಕೆ ಹಾನಿ ಮಾಡುತ್ತಾರೆ. ಇದಕ್ಕಾಗಿ ಕಟ್ಟುಕತೆಗಳನ್ನು ಹೆಣೆಯುತ್ತಾರೆ. ಈ ಎಲ್ಲ ಮಾಹಿತಿಗಳನ್ನು ಅರಣ್ಯ ಇಲಾಖೆ, ವಿಜ್ಞಾನಿಗಳಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ. ಬುಡಕಟ್ಟು ಜನಾಂಗದವರು ಇದನ್ನೆಲ್ಲ ನಮ್ಮ ಮುಂದಿಡುತ್ತಾರೆ ಎಂದು ವಿವರಿಸಿದರು.

ರಾಜಕಾರಣಿಗಳು ಪರಿಸರವನ್ನು ಕೊಲ್ಲುತ್ತಿದ್ದಾರೆ
ನೇತ್ರಾವತಿ ನದಿಗೆ 9 ಉಪನದಿಗಳಿವೆ. ಅವುಗಳಿಗೆ 27ರಷ್ಟು ಹಳ್ಳಗಳು ಸೇರುತ್ತವೆ. ನದಿಯನ್ನೋ ಉಪನದಿಯನ್ನೋ ತಿರುಗಿಸಿದರೆ ಏನೂ ಆಗುವುದಿಲ್ಲ ಎನ್ನುವವರು ತಮ್ಮ ದೇಹದ ಒಂದು ನರವನ್ನು ಕತ್ತರಿಸಿ ನೋಡಲಿ. ನದಿ ಮೂಲವನ್ನು ವ್ಯವಸ್ಥಿತವಾಗಿ ಮುಗಿಸುವ ಯತ್ನ ಎತ್ತಿನಹೊಳೆ ಯೋಜನೆ. ಸರಕಾರಕ್ಕೆ ಇಂತಹ ವಿಫಲ ಯೋಜನೆಗಳನ್ನು ರೂಪಿಸುವುದೇ ಕೆಲಸ. ಯೋಜನೆ ವಿಫಲವಾದರೆ ಮಾತ್ರ ಸಾಕಷ್ಟು ಲಾಭ. ಆಗ ಇನ್ನೊಂದು ಯೋಜನೆಯನ್ನು ಜಾರಿಗೆ ತರಬಹುದು. ನೇತ್ರಾವತಿ ನದಿಯ ವ್ಯರ್ಥ ಎಂದು ಹೇಳುವ ನೀರು, ಮುಂದೆ ಮಳೆಯ ರೂಪದಲ್ಲಿ ಪಶ್ಚಿಮ ಘಟ್ಟಗಳನ್ನು ತಲುಪುತ್ತವೆ. ಪಾಶ್ಚಿಮಾತ್ಯ ಧ್ಯೇಯ ಧೋರಣೆಗಳ ಮೂಲಕ ರಾಜಕಾರಣಿಗಳು ಪರಿಸರವನ್ನು ಕೊಲ್ಲುತ್ತಿದ್ದಾರೆ ಎಂದು ವಿಷಾದಿಸಿದರು.

Advertisement

ಕಾರಿಡಾರ್‌ಗೆ ಹಾನಿ
ಆನೆ, ಹುಲಿ ಕಾರಿಡಾರ್‌ಗೆ ಹಾನಿಯಾದ ಕಾರಣ, ಅವು ನಾಡಿಗೆ ಬರುತ್ತಿವೆ. ಆನೆ ದಾಳಿ ಮಾಡಿತು ಎನ್ನುವುದು ಸುದ್ದಿ ಆಗುತ್ತಿದೆ. ಆದರೆ ಮನುಷ್ಯ ಕಾಡಿನ ಮೇಲೆ ದಾಳಿ ಮಾಡಿದ ಎನ್ನುವುದು ಸುದ್ದಿಯೇ ಆಗುತ್ತಿಲ್ಲ. ಏಕೆಂದರೆ ಆನೆಗೆ ಮತದಾನದ ಹಕ್ಕಿಲ್ಲ, ಅಲ್ಲವೇ ಎಂದು ಚುಚ್ಚಿದರು. ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸುಂದರ್‌ ರೈ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಝೆವಿಯರ್‌ ಡಿ’ಸೋಜಾ ಉಪಸ್ಥಿತರಿದ್ದರು. ಉಪನ್ಯಾಸಕ ನರೇಂದ್ರ ರೈ ದೇರ್ಲ ಅತಿಥಿಗಳ ಪರಿಚಯ ಮಾಡಿದರು.

ಹಸಿರು ಸೈನಿಕರು ಬೇಕು
ಗಡಿ ಕಾಯಲು ಸೈನಿಕರು ಇರುವಂತೆ, ಅರಣ್ಯ ಸಂಪತ್ತನ್ನು ರಕ್ಷಿಸಲು ಹಸಿರು ಸೈನಿಕರ ಅಗತ್ಯವಿದೆ. ಕಾವೇರಿ, ಮಹಾದಾಯಿ ಮೊದಲಾದ ಹೋರಾಟಗಳಿಗೆ ಸ್ವಯಂಪ್ರೇರಿತರಾಗಿ ಜನ ಬರುತ್ತಾರೆ. ಆದರೆ ನೇತ್ರಾವತಿ ನದಿ ಹೋರಾಟಕ್ಕೆ ಜನರೇ ಬರುತ್ತಿಲ್ಲ. ನೀರಿನ ಸಮಸ್ಯೆ ಎದುರಾದಾಗ ಮಾತ್ರ ನಾವು ಎಚ್ಚೆತ್ತುಕೊಳ್ಳುತ್ತೇವೆ. ಇಂತಹ
ಯೋಜನೆಗಳನ್ನು ವಿರೋಧಿಸಿ, ಪರಿಸರವನ್ನು ಉಳಿಸಿಕೊಳ್ಳುವ ಕೆಲಸ ಹಸಿರು ಸೈನಿಕರಿಂದ ಆಗಬೇಕಿದೆ ಎಂದು ದಿನೇಶ್‌ ಹೊಳ್ಳ ಹೇಳಿದರು.

ಪ್ರಾಣಿಗಳ ಒಗ್ಗಟ್ಟು
ಕಾಡಿಗೆ ಚಾರಣ ಹೋದ ಸಂದರ್ಭ ಮುಸುವವೊಂದು ವಿಚಿತ್ರ ಸದ್ದು ಹೊರಡಿಸಿತು. ಇದನ್ನು ಅನುಸರಿಸಿ ಒಂದಷ್ಟು ಪಕ್ಷಿಗಳು ಅರಚುತ್ತಾ ಹಾರಿ ಹೋದವು. ಜತೆಗಿದ್ದ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರು ಅಪಾಯದ ಸುಳಿವು ನೀಡಿದರು. ಸ್ವಲ್ಪ ಮುಂದೆ ಹೋಗುತ್ತಲೇ ಐದು ಹುಲಿಗಳು ಮೇಲೆರಗಲು ಸಿದ್ಧವಾಗಿದ್ದವು. ತನಗೆ ಅಗತ್ಯ ಅಥವಾ ಸಂಬಂಧವೇ ಇಲ್ಲದ ಇನ್ನೊಂದು ಪಕ್ಷಿ, ಪ್ರಾಣಿಗೆ ಮುಸುವ ನಿರಂತರವಾಗಿ ಅಪಾಯದ ಸಂದೇಶ ರವಾನಿಸುತ್ತದೆ. ಆದರೆ ಮನುಷ್ಯರೊಳಗೆ ಜಾತಿ- ಧರ್ಮದ ಹೆಸರಿನಲ್ಲಿ ಕಚ್ಚಾಡುತ್ತಿದ್ದೇವೆ ಎಂದು ದಿನೇಶ್‌ ಹೊಳ್ಳ ತಮ್ಮ
ಅನುಭವವನ್ನು ಬಿಚ್ಚಿಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next