Advertisement

ಮಹಿಳೆಯರ ಸಹಭಾಗಿತ್ವ ,ಸಾಧನೆ

08:18 PM Mar 06, 2021 | Team Udayavani |

ಸ ರಕಾರಿ ಸಂಸ್ಥೆಗಳಲ್ಲಿ  ಮಹಿಳೆಯರು ಕೆಲಸ ಮಾಡುವುದನ್ನು ಹತ್ತಿರದಿಂದ ನೋಡಿ ಬೆಳೆದವನು ನಾನು. ಅದರಲ್ಲಿ ಮೊದಲು ನೆನಪಿಗೆ ಬರುವುದು ಆಸ್ಪತ್ರೆಯಲ್ಲಿನ ಮಹಿಳಾ ಸ್ಟಾಫ್ ನರ್ಸ್‌ಗಳು. ಅವರನ್ನೆಲ್ಲ ದಾಯಮ್ಮ ಎಂದೇ ಕರೆಯುತ್ತಿದ್ದೆವು. ಬಳಿಕ ನೆನಪಾಗುವುದು ಶಾಲೆಯ ಶಿಕ್ಷಕಿಯರು, ಅನಂತರ ಮನೆಯ ಪಕ್ಕದಲ್ಲೇ ಇದ್ದ ಕಿರಾಣಿ ಅಂಗಡಿಯ ಗೌಡಶಾನಿ, ಊರ ಸಂತೆಯಲ್ಲಿ ಹಳ್ಳಿಗಳಿಂದ ಬಂದು ತರಕಾರಿ ಮಾರುತ್ತಿದ್ದ ಅಜ್ಜಿಯರು, ತಾಯಂದಿರು…. ನಾವು ಭೇಟಿ ಮಾಡುವ ಹೊಟೇಲ್‌, ಅಂಗಡಿ, ಫಾರ್ಮಸಿ, ಆಸ್ಪತ್ರೆ, ಬ್ಯಾಂಕ್‌, ಸಾರಿಗೆ ಸಂಸ್ಥೆ, ಪೊಲೀಸ್‌ ಇಲಾಖೆ, ನ್ಯಾಯಾಲಯ, ಸೇನೆ, ಸಮಾಜಸೇವೆ, ರಾಜಕೀಯ ಸೇರಿದಂತೆ ಇಂದು ಬಹುತೇಕ  ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಸಹಭಾಗಿತ್ವ, ಉಪಸ್ಥಿತಿ ಎದ್ದು ಮ ಕಾಣುತ್ತದೆ. ಇದು ಸಮಾಜದಲ್ಲಾದ ಬದಲಾವಣೆಗೆ ಹಿಡಿದ ಕೈಗನ್ನಡಿ.

Advertisement

ಬಹುತೇಕ ಇಂದಿನ ಹಾಗೂ ಮುಂಬರುವ ಪೀಳಿಗೆಗೆ ಈ ಬದಲಾವಣೆಯನ್ನು ಗಮನಿಸುವ ಅವಕಾಶವಾಗಲಿ, ಆಲೋಚನೆಯಾಗಲಿ ಸುಳಿಯಲಿಕ್ಕಿಲ್ಲ. ಎಕೆಂದರೆ ನಾವು ಸಣ್ಣವರಾಗಿದ್ದಾಗ ನೋಡಿದ ಬಾಲಕ, ಬಾಲಕಿಯರ ಬೇರೆಬೇರೆ ಶಾಲೆಗಳ ಉಪಸ್ಥಿತಿ, ಚಿತ್ರಮಂದಿರಗಳಲ್ಲಿ ಮಹಿಳೆಯರಿಗೆ ಇದ್ದ ಪ್ರತ್ಯೇಕ  ವ್ಯವಸ್ಥೆ, ಇರುವ ಮಕ್ಕಳಲ್ಲಿ ಮಾಡುತ್ತಿದ್ದ ತಾರತಮ್ಯದ ಮನಸ್ಥಿತಿಗಳನ್ನು ಹುಡುಕುವುದು ಬಲು ಕಷ್ಟ. ಇಂಗ್ಲೆಂಡ್‌ನಲ್ಲಿ ಈ ಬಗ್ಗೆ ಮಾತನಾಡುವುದೇ ಅಪ್ರಸ್ತುತ.  ಕೆಲವು ಮಹಿಳೆಯರು ಸಾಧನೆಯ ಶಿಖರವೇರಿ ಎಲ್ಲರ  ಶಹಬ್ಟಾಸ್‌ಗಿರಿ ಪಡೆದಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯ ಎಂದೆನಿಸುವ ಮಹಿಳೆಯರು ಮಾಡುವ ಕೆಲಸಗಳಿಗೇನೂ ದೊಡ್ಡ  ಸಾಧನೆಗಿಂತ ಕಡಿಮೆಯೇನಲ್ಲ. ಕೆಲಸಗಳಲ್ಲಿ ಬಹುತೇಕ ಶೇ.80ರಷ್ಟು ಹೆಚ್ಚು ಕೆಲಸ ಮಹಿಳೆಯರ ಸಹಭಾಗಿತ್ವದಲ್ಲಿ  ಮಾಡುತ್ತಿರುವುದರಿಂದ ಅವರನ್ನು ಹೆಚ್ಚು ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶ ಸಿಕ್ಕಿತು. ಎಲ್ಲ ಅಡೆತಡೆಯ ಮಧ್ಯೆಯೂ ಅವರ ಸಾಧನೆಯ ಓಘವನ್ನು ಗಮನಿಸಿದರೆ ಮುಕ್ತ ಮನಸ್ಸಿನಿಂದ ಪ್ರಶಂಸಿಸದೇ ಇರಲು ಸಾಧ್ಯವೇ ಇಲ್ಲ.  ಕಳೆದ ಕೆಲವು ತಿಂಗಳುಗಳಿಂದ ಸ್ವಯಂ ಸೇವಕನಾಗಿ ಸೇರಿಕೊಂಡ ಯುನೈಟೆಡ್‌ ಕಿಂಗ್ಡಮ್‌ನಾದ್ಯಂತ ಕನ್ನಡ ಕಲಿಸುವ ಕಾಯಕಕ್ಕೆ ಕೈ ಹಾಕಿರುವ ಕನ್ನಡಿಗರು ಯುಕೆ ನೇತೃತ್ವದ ಕನ್ನಡ  ಕಲಿ ತಂಡದ 60 ಮಂದಿ ಶಿಕ್ಷಕ ಶಿಕ್ಷಕಿಯರಲ್ಲಿ 50ಕ್ಕೂ ಹೆಚ್ಚು  ಮಹಿಳೆಯರಿದ್ದಾರೆ. ಅವರ ಕಾರ್ಯವೈಖರಿ ಅದರಲ್ಲೂ ಸಮಯದ ವ್ಯತ್ಯಾಸದಿಂದ ಮಧ್ಯರಾತ್ರಿಯಲ್ಲಿಯೂ  ನಮ್ಮೊಂದಿಗೆ ಕೆಲಸ ಮಾಡುವ ಅವರ ಉತ್ಸಾಹ, ಕಾಳಜಿ, ಬದ್ಧತೆ ಮತ್ತು ವಿಶ್ವಾಸವನ್ನು ಎತ್ತಿ ತೋರಿಸುತ್ತದೆ.

ಸಮಾನ ಮತ್ತು ಸಮ್ಮಾನಗಳೆರಡು ನಮ್ಮ ಮೌಲ್ಯಾಧಾರಿತ ಜೀವನದಿಂದ ಮನದ ಮೂಲೆಯಲ್ಲಿ ಅರಳಿ ಸುಗಂಧವನ್ನು ಸೂಸುವಂಥದ್ದು. ಅದನ್ನು ಬಿಟ್ಟು ನೈಸರ್ಗಿಕ ವ್ಯತ್ಯಾಸಗಳನ್ನು ಅಸಮಾನತೆ ಎಂಬಂತೆ ಬಿಂಬಿಸಿ ಸಮಾಜದ ತುಂಬೆಲ್ಲ ಸಮಾನತೆಯ ಹೆಸರಲ್ಲಿ ಗಟಾರಗಳನ್ನು ಸೃಷ್ಟಿಸಿ ದುರ್ಗಂಧ ಬೀರುವುದರಿಂದಲ್ಲ. 21ನೇ ಶತಮಾನದ ಮಹಿಳೆಯರು ಸಾಕಷ್ಟು ಸಾಧಿಸಿದ್ದಾರೆ. ಇನ್ನೇನಿದ್ದರೂ ಅಸಮಾನತೆಯ ಹೆಸರಲ್ಲಿ ಅವರಿಗೆ ಅಡ್ಡಲಾಗಿ ನಿಲ್ಲುವವರನ್ನು ನಿರ್ಬಂಧಿಸುವ ಕಾಯಕವಾಗಬೇಕು.

ಅಂತಾರಾಷ್ಟ್ರೀಯ ಮಹಿಳಾ ದಿನ ಹತ್ತಿರದಲ್ಲೇ ಇದೆ. ಈ ಸಂದರ್ಭದಲ್ಲಿ  ಮಹಿಳೆಯರ ಸಹಭಾಗಿತ್ವ ಮತ್ತು ಸಾಧನೆಯ ಕುರಿತು ಎಲ್ಲರೂ ಒಂದಷ್ಟು ಮೆಲುಕು  ಹಾಕಬೇಕಿದೆ.

 

Advertisement

-ಗೋವರ್ಧನ ಗಿರಿ ಜೋಷಿ, ಲಂಡನ್‌

Advertisement

Udayavani is now on Telegram. Click here to join our channel and stay updated with the latest news.

Next