ಮುಂಬಯಿ: ದುಷ್ಟ ಶಕ್ತಿಗಳನ್ನು ನಿಗ್ರಹಿಸಿ ಶಿಷ್ಟರನ್ನು ರಕ್ಷಿಸಿದ ಸ್ತ್ರೀ ಸರ್ವ ಶಕ್ತಿ ಎಂದು ಮಹಾಕಾವ್ಯಗಳು ಸಾರಿವೆ. ಎಡವಿ ಬಿದ್ದಾಗ ಕೈಹಿಡಿದು, ತಪ್ಪಿದಾಗ ಬುದ್ಧಿವಾದ ಹೇಳಿ, ಕುಟುಂಬ ನಿರ್ವಹಣೆಯ ಆರೈಕೆ ಮಾಡುವ ಸ್ತ್ರೀ ಸಮೃದ್ಧಿಯ ಸಂಕೇತವಾಗಿದೆ. ಪ್ರತಿ ವರ್ಷಗಳ ಮಹಿಳಾ ದಿನಾಚರಣೆಯು ಸಾಧನೆಯ ವೇದಿಕೆಯಾಗಬೇಕು ಎಂದು ತಿಲಕ್ ನಗರ ಪೆಸ್ತೂಮ್ ಸಾಗರ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಾಗವೇಣಿ ಎಸ್. ಶೆಟ್ಟಿ ನುಡಿದರು.
ಮಾ. 18 ರಂದು ಚೆಂಬೂರು ತಿಲಕ್ ನಗರದ ಅಮಿc ಮೈದಾನದಲ್ಲಿ ತಿಲಕ್ ನಗರ ಪೆಸ್ತೂಮ್ ಸಾಗರ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಇವರು, ಜಗತೀಕರಣದಿಂದ ಮಹಿಳೆಯರು ಅನೇಕ ಪ್ರಯೋಜನ ಪಡೆದಿದ್ದರೂ ಶೋಷಣೆಯಿಂದ ಸಂಪೂರ್ಣವಾಗಿ ಮುಕ್ತರಾಗಿಲ್ಲ. ಕಿರುಕುಳ, ತಾರತಮ್ಯ ಭಾವನೆ ಇನ್ನೂ ಜೀವಂತವಾಗಿವೆ. ಇದರ ಹತೋಟಿಗೆ ಸ್ತಿÅàಯರು ಪ್ರಬಲ ಶಕ್ತಿಯಾಗಿ ಶ್ರಮಿಸಬೇಕು ಎಂದು ನುಡಿದರು.
ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ವೀಣಾ ಉಳ್ಳಾಲ್ ಇವರು ಮಾತನಾಡಿ, ವ್ಯವಸ್ಥಿತ ಭ್ರೂಣ ಹತ್ಯೆ, ಅನಕ್ಷರತೆ, ಅವಮಾನ, ಅತ್ಯಾಚಾರ ಪ್ರಕರಣಗಳು ಸಂಪೂರ್ಣವಾಗಿ ನಿರ್ಮೂಲನವಾಗಲು ಮಹಿಳೆಯರಿಗೆ ಬಾಲ್ಯದಿಂದ ತನ್ನ ಅಧಿಕಾರ ಮತ್ತು ಹಕ್ಕುಗಳ ಅರಿವಿರಬೇಕು. ಇಂತಹ ಸಂಘಟನೆಗಳಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಅನಿವಾರ್ಯತೆಯಿದೆ. ಮಹಿಳೆಯರು ಒಂದಾದಾಗ ಮಾತ್ರ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಬಂಟ್ಸ್ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ ಮಾತನಾಡಿ, ಹಕ್ಕುಗಳ ಬಗ್ಗೆ ಮಾತನಾಡುವ ನಾವು ಕರ್ತವ್ಯಗಳನ್ನು ಮರೆಯಬಾರದು. ಎರಡು ಮನೆಗಳ ಜ್ಯೋತಿಯಾಗಿರುವ ಮಹಿಳೆಯರಲ್ಲಿ ವಿಶೇಷ ಸಂಘಟನಾ ಚಾತುರ್ಯವಿದೆ. ಪೆಸ್ತೂಮ್ ಸಾಗರ್ ಕರ್ನಾಟಕ ಸಂಘದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕಂಡಾಗ ಬಹಳಷ್ಟು ಸಂತೋಷವಾಗುತ್ತಿದೆ. ಇಲ್ಲಿನ ಮಹಿಳಾ ಸದಸ್ಯೆಯರಲ್ಲಿನ ಒಗ್ಗಟ್ಟು-ಒಮ್ಮತದ ಸೇವೆ ಇತರರಿಗೆ ಮಾದರಿಯಾಗಿದೆ ಎಂದು ನುಡಿದು ಸಂಘದ ಮಹಿಳಾ ವಿಭಾಗದ ಸಾಧನೆಗಳನ್ನು ಕೊಂಡಾಡಿ ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಿಲಕ್ ನಗರ ಪೆಸ್ತೂಮ್ ಸಾಗರ್ ಕರ್ನಾಟಕ ಸಂಘದ ಅಧ್ಯಕ್ಷ ರಾಮಣ್ಣ ಬಿ. ದೇವಾಡಿಗ ಇವರು ಮಾತನಾಡಿ, ಕುಟುಂಬದ ನಿರ್ವಹಣೆಯನ್ನು ನಿಭಾಯಿಸಿ ಸಾಮಾಜಿಕ ಸೇವೆ ಮಾಡುವ ಮಹಿಳೆಯರ ಶ್ರಮ ವರ್ಣಿಸಲು ಅಸಾಧ್ಯ. ಮಮತೆ, ಕರುಣೆ, ವಾತ್ಸಲ್ಯ, ತಾಳ್ಮೆಯ ಪ್ರತಿಬಿಂಬವಾಗಿರುವ ಮಹಿಳೆ ವಿಶ್ವ ಕಂಡ ಮಹಾನ್ ಶಕ್ತಿ. ಅವರ ವಿವಿಧ ಧ್ಯೇಯೋದ್ಧೇಶಗಳನ್ನು ಅನುಷ್ಠಾನಗೊಳಿಸಲು ಕೈಜೋಡಿಸಬೇಕು. ಸಂಘದ ಮಹಿಳಾ ವಿಭಾಗದ ಸ್ಥಾಪನೆಯಾದ ದಿನದಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವದರ ಮೂಲಕ ಸ್ಥಳೀಯ ತುಳು-ಕನ್ನಡಿಗರ ಮನೆ-ಮನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮಹಿಳಾ ವಿಭಾಗದ ಎಲ್ಲಾ ಕಾರ್ಯಕ್ರಮಗಳಿಗೆ ಸಂಘದ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದರು.
ಸ್ಥಳೀಯ ನಗರ ಸೇವಕ ಸುಶಾಯ್ ಸಾವಂತ್, ಸುರಕ್ಷಾ ಕ್ರೀಡಾ ಮಂಡಳಿಯ ಅಧ್ಯಕ್ಷ ನಿತಿನ್ ಕದಂ, ಚಿತ್ರನಟಿ ಶ್ರದ್ಧಾ ಸಾಲ್ಯಾನ್, ಪೆಸ್ತೂಮ್ ಸಾಗರ್ ಕರ್ನಾಟಕ ಸಂಘದ ಕಾರ್ಯದರ್ಶಿ ಮಾಲತಿ ಮೊಲಿ ಅವರು ಸಂದಭೋìಚಿತವಾಗಿ ಮಾತನಾಡಿ ಶುಭಹಾರೈಸಿದರು. ವೇದಿಕೆಯಲ್ಲಿ ರೂಪಶ್ರೀ ವಾರ್ಕಡೆ ಮೊದಲಾದವರು ಉಪಸ್ಥಿತರಿದ್ದರು.
ದೀಪಾ ಶೆಟ್ಟಿ ಮತ್ತು ಸಂಧ್ಯಾ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಉಪ ಕಾರ್ಯಾಧ್ಯಕ್ಷೆ ಶಾಲಿನಿ ಎಸ್. ಶೆಟ್ಟಿ, ಕೋಶಾಧಿಕಾರಿ ಸಂಗೀತಾ ಸಿ. ಶೆಟ್ಟಿ, ಜತೆ ಕಾರ್ಯದರ್ಶಿ ಹೇಮಲತಾ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಸುಖಲತಾ ಸಿ. ಶೆಟ್ಟಿ ಅವರು ಅತಿಥಿಗಳನ್ನು ಗೌರವಿಸಿದರು. ಫೋಟೊ ಡೈರೆಕ್ಟರಿ ಪ್ರಕಟಿಸಿ ಬಿಡುಗಡೆಗೆ ಸಹಕರಿಸಿದ ಸದಸ್ಯರಾದ ಶ್ರೀಧರ ಶೆಟ್ಟಿ ಅವರನ್ನು ಸಂಘದ ಪದಾಧಿಕಾರಿಗಳು ಗೌರವಿಸಿದರು. ಶಾಲಿನಿ ಶೆಟ್ಟಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಿಳಾ ವಿಭಾಗದಿಂದ, ಮಕ್ಕಳಿಂದ ನೃತ್ಯ ವೈವಿಧ್ಯ, ಛದ್ಮವೇಷ ಸ್ಪರ್ಧೆ, ಮಹಿಳಾ ಸದಸ್ಯೆಯರಿಂದ ತುಳುನಾಡ ವೈಭವ ಇನ್ನಿತರ ವಿನೋದಾವಳಿಗಳು ನಡೆಯಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸ್ಥಳೀಯ ತುಳು-ಕನ್ನಡಪರ, ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ರಾಜಕೀಯ ನೇತಾರರು, ತುಳು-ಕನ್ನಡಿಗರು ಉಪಸ್ಥಿತರಿದ್ದರು.
ಚಿತ್ರ-ವರದಿ : ರಮೇಶ್ ಅಮೀನ್