ವೆಲ್ಲಿಂಗ್ಟನ್ : ಐಸಿಸಿ ಮಹಿಳಾ ವಿಶ್ವಕಪ್ 2022 ರ ಅಂಕ ಪಟ್ಟಿಯಲ್ಲಿ ಮಿಥಾಲಿ ರಾಜ್ ನಾಯಕತ್ವದ ಟೀಮ್ ಇಂಡಿಯಾ ಐದನೇ ಸ್ಥಾನಕ್ಕೆ ಕುಸಿದಿದ್ದು, ಸೆಮಿ ಪ್ರವೇಶಕ್ಕೆ ಹಾದಿ ಕಠಿಣವಾಗಿದ್ದು, ಈಗಾಗಲೇ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿರುವ ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಲೇ ಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಗುರುವಾರ ನಡೆದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಪಾಕಿಸ್ಥಾನದ ವಿರುದ್ಧ ಇಂಗ್ಲೆಂಡ್ 9 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಭರ್ಜರಿ ರನ್ ರೇಟ್ ನೊಂದಿದೆ ನಾಲ್ಕನೇ ಸ್ಥಾನಕ್ಕೆ ಏರಿ, ಭಾರತವನ್ನು ಕೆಳಕ್ಕೆ ತಳ್ಳಿದೆ. ಭಾರತದ 0.768 ರನ್ ರೇಟ್ ಗೆ ಹೋಲಿಸಿದರೆ ಇಂಗ್ಲೆಂಡ್ 6 ಪಂದ್ಯಗಳಿಂದ 6 ಅಂಕಗಳೊಂದಿಗೆ 0.778 ನ ಉತ್ತಮ ರನ್ ರೇಟ್ ಪಡೆದಿದೆ.
ಇಂದಿನ ಪಂದ್ಯದಲ್ಲಿ ಪಾಕ್ ಮಹಿಳೆಯರು 41.3 ಓವರ್ ಗಳಲ್ಲಿ 105 ರನ್ ಗಳಿಗೆ ಆಲೌಟ್ ಆದರು. ಸಣ್ಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ವನಿತೆಯರು 19.2 ಓವರ್ ಗಳಲ್ಲಿ 1 ವಿಕೆಟ್ ಮಾತ್ರ ಕಳೆದುಕೊಂಡು 107 ರನ್ ಗಳಿಸಿ 9 ವಿಕೆಟ್ ಗಳ ಅಮೋಘ ಗೆಲುವು ಸಾಧಿಸಿತು.
ಮಳೆಯಿಂದ ಪಂದ್ಯವೇ ರದ್ದು
ಇಂದು ನಡೆದ ನಿರ್ಣಾಯಕ ದ. ಆಫ್ರಿಕಾ-ವೆಸ್ಟ್ ಇಂಡೀಸ್ ನಡುವಿನ ಲೀಗ್ ಪಂದ್ಯದ ಫಲಿತಾಂಶ ಭಾರತದ ಪಾಲಿಗೆ ಕಹಿಯಾಯಿತು. ಮಳೆಯಿಂದಾಗಿ ಪಂದ್ಯ ಆರಂಭವಾಗಿ ಕೆಲ ಹೊತ್ತಿನಲ್ಲೇ ರದ್ದಾಗಿದೆ. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ದಕ್ಷಿಣ ಆಫ್ರಿಕಾ 10.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 61 ರನ್ ಗಳಿಸಿತ್ತು, ಈ ವೇಳೆ ಭಾರಿ ಮಳೆ ಸುರಿದು ಪಂದ್ಯವನ್ನು ರದ್ದು ಮಾಡಲಾಗಿದ್ದು, 6 ಪಂದ್ಯಗಳಲ್ಲಿ 4 ಗೆದ್ದಿರುವ ದಕ್ಷಿಣ ಆಫ್ರಿಕಾ 9 ಅಂಕ ಗಳೊಂದಿಗೆ +0.092 ರನ್ ರೇಟ್ ಹೊಂದಿ ಸೆಮಿ ಫೈನಲ್ ಪ್ರವೇಶ ಮಾಡಿದ ಎರಡನೇ ತಂಡವಾಗಿದೆ. ಆಸ್ಟ್ರೇಲಿಯಾ ಈಗಾಗಲೇ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ವೆಸ್ಟ್ ಇಂಡೀಸ್ ಗೆ ಮಳೆ ಲಾಭ
ಕೊನೆಯ ಲೀಗ್ ಪಂದ್ಯ ಆಡುತ್ತಿದ್ದ ರನ್‌ರೇಟ್ ಮೈನಸ್‌ನಲ್ಲಿದ್ದ ವಿಂಡೀಸ್ ಇಂದಿನ ಪಂದ್ಯ ಸೋತರೆ ಅಂಕ ಆರರಲ್ಲೇ ಉಳಿಯುತ್ತಿತ್ತು.ಆದರೆ ಪಂದ್ಯ ರದ್ದುಗೊಂಡು ಒಂದೊಂದು ಅಂಕಗಳನ್ನು ಹಂಚಿದ ಪರಿಣಾಮ ವಿಂಡೀಸ್ -0.890ರನ್ ರೇಟ್ ಹೊಂದಿ 7 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ರವಿವಾರ ದಕ್ಷಿಣ ಆಫ್ರಿಕಾ ವಿರುದ್ಧ ಲೀಗ್ ಹಂತದ ಕಟ್ಟಕಡೆಯ ಪಂದ್ಯವನ್ನು ಭಾರತ ಆಡಲಿದ್ದು, ಸೆಮಿ ಪ್ರವೇಶಿಸಬೇಕಾದರೆ ಆ ಪಂದ್ಯವನ್ನು ಭಾರತ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.