Advertisement

ಸೋತರೂ ಸೋಲದ ಮಹಿಳಾ ಕ್ರಿಕೆಟ್‌ ತಂಡ

06:30 AM Jul 25, 2017 | Team Udayavani |

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡ ಭಾನುವಾರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಆಘಾತಕಾರಿ ಸೋಲನುಭವಿಸಿದೆ. ಸೋತಿದೆ ಎಂಬ ಕಾರಣಕ್ಕೆ ಅಭಿಮಾನಿಗಳು ಆಟಗಾರ್ತಿಯರ ವಿರುದ್ಧ ಮುಗಿಬಿದ್ದಿಲ್ಲ. ಸೋತರೂ ತಂಡದ ಆಟಗಾರ್ತಿಯರು ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಎಲ್ಲ ಮನ ಗೆಲ್ಲಲು ಯಶಸ್ವಿಯಾಗಿದ್ದಾರೆಂಬುದೇ ಇದಕ್ಕೆ ಕಾರಣ. ತಂಡವನ್ನು ಅಭಿನಂದಿಸುವುದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್ ದೇವರು ಸಚಿನ್‌ ತೆಂಡುಲ್ಕರ್‌, ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹವಾಗ್‌ ಮುಂಚೂಣಿಯಲ್ಲಿದ್ದಾರೆ.

Advertisement

ಭಾನುವಾರ ಕೊನೆ ಕ್ಷಣದಲ್ಲಿ ಅನುಭವದ ಕೊರತೆಯಿಂದ ಗಡಿಬಿಡಿಗೊಳಗಾದ ತಂಡ ಪ್ರಶಸ್ತಿ ಗೆಲ್ಲುವುದನ್ನು ತಪ್ಪಿಸಿಕೊಂಡಿತು ಎನ್ನುವುದನ್ನು ಹೊರತುಪಡಿಸಿದರೆ ತಂಡದ ಪ್ರದರ್ಶನ ಚಾಂಪಿಯನ್‌ ತಂಡದ ಮಟ್ಟಕ್ಕಿತ್ತು. ಇಂಗ್ಲೆಂಡ್‌ ನೀಡಿದ 229 ರನ್‌ ಬೆನ್ನುತ್ತುವ ಹಂತದಲ್ಲಿ 191 ರನ್‌ಗಳವರೆಗೆ ಭಾರತದ ಸ್ಥಿತಿ ಸುಭದ್ರವಾಗಿತ್ತು.

ಅಲ್ಲಿಂದ ದಿಢೀರನೆ ಕುಸಿತ ಕಂಡು ಸೋಲನ್ನಪ್ಪಿತು. ಇದು ದೇಶದ ಅಭಿಮಾನಿಗಳಿಗೆ ಆಘಾತಕಾರಿಯಾಗಿ ಪರಿಣಮಿಸಿದ್ದರೂ ಬೇಸರವಂತೂ ಆಗಿಲ್ಲ. 

ಮೋದಿ ಶ್ಲಾಘನೆ: ಟ್ವೀಟ್‌ ಮಾಡಿದ ಪ್ರಧಾನಿ ನರೇಂದ್ರ ಮೋದಿ,
“ನೀವು ಅತ್ಯುತ್ತಮ ಸಾಮರ್ಥ್ಯ ಪ್ರದರ್ಶಿಸಿದ್ದೀರಿ. ಇಡೀ ಕೂಟದುದ್ದಕ್ಕೂ ಅಸಾಮಾನ್ಯ ತಾಳ್ಮೆ, ಕೌಶಲ್ಯವನ್ನು ತೋರಿದ್ದೀರಿ. ತಂಡದ ಕುರಿತು ಹೆಮ್ಮೆಯಿದೆ’ ಎಂದು ಹೇಳಿದ್ದಾರೆ. ಇದರ ಜೊತೆಗೆ ಸಚಿನ್‌ ತೆಂಡುಲ್ಕರ್‌
ಟ್ವೀಟ್‌ ಮಾಡಿ “ಕೆಲವೊಂದು ಬಾರಿ ಹೊರತುಪಡಿಸಿ ನೀವು ಇಡೀ ಕೂಟದಲ್ಲಿ ಉತ್ತಮವಾಗಿ ಆಡಿದ್ದೀರಿ. ನಿಮ್ಮೆಲ್ಲರ ಕುರಿತು ನಮಗೆ ಪ್ರೀತಿಯಿದೆ. ಗೆದ್ದ ಇಂಗ್ಲೆಂಡ್‌ಗೆ ಶುಭಾಶಯಗಳು’ ಎಂದಿದ್ದಾರೆ. ವಿಶ್ವ ವಿಖ್ಯಾತ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹವಾಗ್‌ ಕೂಡ ಅಭಿನಂದಿಸುವುದರಲ್ಲಿ ಹಿಂದೆ ಬಿದ್ದಿಲ್ಲ. “ನಿಮ್ಮ ಆಟದ ಕುರಿತು ಗರ್ವವಿದೆ. ಭಾನುವಾರ ನಿಮ್ಮ ಅದೃಷ್ಟ ಕೈಕೊಟ್ಟಿತು. ಈಗ ನಿಜಕ್ಕೂ ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಬೆಳಕಿಗೆ ಬಂದಿದೆ. ನಿಮಗೆ ಧನ್ಯವಾದ, ಪ್ರಣಾಮಗಳು’ ಎಂದು ಹೇಳಿದ್ದಾರೆ.  ಭಾರತ ಪುರುಷರ ಕ್ರಿಕೆಟ್‌ ತಂಡದ ಕೋಚ್‌ ರವಿಶಾಸಿOಉ, ನೀವು ಇಡೀ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದಿದ್ದಾರೆ.

ಭಾರತದ ಮುಂದಿನ ಪೀಳಿಗೆಗೆ ಭವ್ಯ ವೇದಿಕೆ ಸಿದ್ಧ
ಲಂಡನ್‌
: ಭಾರತ ಸೋತಿದ್ದರೂ ನಾಯಕಿ ಮಿಥಾಲಿ ರಾಜ್‌ ತಮ್ಮ ತಂಡದ ಕುರಿತು ಹೆಮ್ಮೆ ಹೊಂದಿದ್ದಾರೆ. ತಂಡದ ಪ್ರದರ್ಶನ ಮಹಿಳಾ ಕ್ರಿಕೆಟ್‌ ಭವಿಷ್ಯಕ್ಕೆ ಬೇಕಾದ ಸೂಕ್ತ ವೇದಿಕೆ ನಿರ್ಮಿಸಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

Advertisement

“ಈ ಹುಡುಗಿಯರು ಮುಂದಿನ ಪೀಳಿಗೆಗೆ ಬೇಕಾದ ಸದೃಢ ವೇದಿಕೆ ನಿರ್ಮಿಸಿದ್ದಾರೆ. ಮಹಿಳಾ ಕ್ರಿಕೆಟ್‌ ಬೆಳವಣಿಗೆಗೆ ದಾರಿದೀಪವಾಗಿದ್ದಾರೆ. ಅವರು ತಮ್ಮ ಕುರಿತು ಹೆಮ್ಮೆ ಇಟ್ಟುಕೊಳ್ಳಬೇಕು. ಈ ತಂಡ ಮಾಡಿದ ಬದಲಾವಣೆಗಳನ್ನು ನಾನು ಗಮನಿಸಿದ್ದೇನೆ’ ಎಂದು ಅರ್ಥಗರ್ಭಿತವಾಗಿ ಮಿಥಾಲಿ ಹೇಳಿದ್ದಾರೆ. ತಂಡದ ಸೋಲಿಗೆ ಅನುಭವದ ಕೊರತೆ ಕಾರಣವೆಂದು ನುಡಿದಿದ್ದಾರೆ.

“ಪ್ರತಿಯೊಬ್ಬರೂ ಫೈನಲ್‌ ಎಂಬ ಕಾರಣಕ್ಕೆ ಬಹಳ ಹೆದರಿದ್ದರು. ಇಂತಹ ಸಂದರ್ಭವನ್ನು ನಿಭಾ ಯಿಸುವುದರಲ್ಲಿ ಅನುಭವದ ಕೊರತೆಯೂ ಇತ್ತು. ಹುಡುಗಿ ಯರಿಗೆ ಪರಿಸ್ಥಿತಿ ನಿಭಾಯಿಸುವ ಕೌಶಲ್ಯ ಇರಲಿಲ್ಲ. ಆದರೆ ಇಡೀ ಕೂಟದುದ್ದಕ್ಕೂ ತೋರಿದ ಪ್ರದರ್ಶನ ಅಸಾಮಾನ್ಯ. ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಅದ್ಭುತ ಭವಿಷ್ಯವಿದೆ. ನಮ್ಮಲ್ಲಿ ಅತ್ಯುತ್ತಮ ಪ್ರತಿಭೆಗಳಿವೆ. ಇದು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಲೆಕ್ಕಾಚಾರವನ್ನು ಮಾತ್ರ ಅವಲಂಬಿಸಿದೆ’ ಎಂದು ನಾಯಕಿ ಹೇಳಿದ್ದಾರೆ.

ಮಿಥಾಲಿಗೆ ಬಿಎಂಡಬ್ಲ್ಯು ಕಾರು 
ವಿಶ್ವಕಪ್‌ನಲ್ಲಿ ಮಹಿಳಾ ತಂಡವನ್ನು ಫೈನಲ್‌ವರೆಗೆ ಯಶಸ್ವಿಯಾಗಿ ಮುನ್ನಡೆಸಿದ ಭಾರತೀಯ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್‌ ಅವರಿಗೆ ಹೊಸ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಲು ತೆಲಂಗಾಣ ಬ್ಯಾಡ್ಮಿಂಟನ್‌ ಸಂಸ್ಥೆ ಉಪಾಧ್ಯಕ್ಷ ಚಾಮುಂ ಡೇಶ್ವರನಾಥ್ ನಿರ್ಧರಿಸಿದ್ದಾರೆ. ಸಮಾರಂಭದ ದಿನ ಇನ್ನೂ ನಿರ್ಧಾರವಾಗಿಲ್ಲ .

ಚಾಮುಂಡೇಶ್ವರ್‌ ನಾಥ್‌ 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಪಿ.ವಿ.ಸಿಂಧು, ಸಾಕ್ಷಿ ಮಲಿಕ್‌, ಶ್ರೇಷ್ಠ ಪ್ರದರ್ಶನ ನೀಡಿದ್ದ ದೀಪಾ ಕರ್ಮಾಕರ್‌ಗೆ ಬಿಎಂಡಬ್ಲೂé ಕಾರ್‌ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಭರ್ಜರಿ ಸ್ವಾಗತಕ್ಕೆ ಬಿಸಿಸಿಐ ತಯಾರಿ 
ಮುಂಬೈ
: ಮಹಿಳಾ ವಿಶ್ವಕಪ್‌ ಏಕದಿನ ಕ್ರಿಕೆಟ್‌ನಲ್ಲಿ ಅಮೋಘ ನಿರ್ವಹಣೆ ನೀಡಿದ ಭಾರತೀಯ ಆಟಗಾರ್ತಿಯರಿಗೆ ಭರ್ಜರಿ ಸ್ವಾಗತ ನೀಡಿ ಅದೂಟಛಿರಿಯಾಗಿ ಸನ್ಮಾನಿಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ. ವಿಶ್ವಕಪ್‌ ಫೈನಲ್‌ನಲ್ಲಿ ರೋಮಾಂಚಕವಾಗಿ ಹೋರಾಡಿ ಕೂದಲೆಳೆಯ ಅಂತರದಲ್ಲಿ ಪ್ರಶಸ್ತಿ ಗೆಲ್ಲಲು ವಿಫ‌ಲವಾದರೂ ಭಾರತೀಯ ಆಟಗಾರ್ತಿಯರು ಸಾವಿರಾರು ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ತಂಡದ ಆಟಗಾರ್ತಿಯರು ತವರಿಗೆ ಮರಳಿದ ಬಳಿಕ ಅದ್ದೂರಿ ಸಮ್ಮಾನ ಕಾರ್ಯಕ್ರಮ ಏರ್ಪಡಿಸಲಿದ್ದೇವೆ. ಮತ್ತು ಈಗಾಗಲೇ ಘೋಷಿಸಿರುವಂತೆ ತಂಡದ ಪ್ರತಿಯೊಬ್ಬ ಆಟಗಾರ್ತಿಗೆ 50 ಲಕ್ಷ ರೂ. ಮತ್ತು ಬೆಂಬಲ ಸಿಬ್ಬಂದಿಗಳಿಗೆ ತಲಾ 25 ಲಕ್ಷ ರೂ.ಗಳ ಚೆ‌ಕ್‌ ವಿತರಿಸಲಾಗುವುದು ಎಂದು ಬಿಸಿಸಿಐ ಮೂಲಗಳಿ ತಿಳಿಸಿದೆ.

ಮಧ್ಯ ಪ್ರದೇಶ 50 ಲಕ್ಷ ರೂ: ಶ್ರೇಷ್ಠ ನಿರ್ವಹಣೆ ನೀಡಿ ವಿಶ್ವದ ಗಮನ ಸೆಳೆದ ಭಾರತೀಯ ಮಹಿಳಾ ಕ್ರಿಕೆಟ್‌ ತಂಡಕ್ಕೆ 50 ಲಕ್ಷ ರೂ.ನೀಡುವುದಾಗಿ ಮಧ್ಯ ಪ್ರದೇಶ ಸರಕಾರ ಪ್ರಕಟಿಸಿದೆ. ಭೋಪಾಲ್‌ನಲ್ಲಿ ನಡೆಯುವ ತಂಡದ ಆಟಗಾರ್ತಿಯರ ಸಮ್ಮಾನ ಸಮಾರಂಭದಲ್ಲಿ ನಗದು ಬಹುಮಾನ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ.

ಹರ್ಮನ್‌ಗೆ ಡಿಎಸ್‌ಪಿ ಹುದ್ದೆ 
ನವದೆಹಲಿ
: ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹರ್ಮನ್‌ ಪ್ರೀತ್‌ ಕೌರ್‌ಗೆ ಪಂಜಾಬ್‌ ಸರ್ಕಾರ ಡಿಎಸ್‌ಪಿ (ಪೊಲೀಸ್‌ ಉಪ ಅಧೀಕ್ಷಕ) ಹುದ್ದೆಯ ಆಹ್ವಾನ ನೀಡಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪಂಜಾಬ್‌ ರಾಜ್ಯದ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌, “ಮಹಿಳೆಯರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ಉತ್ತಮ ಪ್ರದರ್ಶನ ನೀಡಿದೆ. ಹರ್ಮನ್‌ಪ್ರೀತ್‌ ಸಿಂಗ್‌ ಬಯಸಿದರೆ ಡಿಎಸ್‌ಪಿ ಹುದ್ದೆ ನೀಡಲಾಗುವುದು’ ಎಂದಿದ್ದಾರೆ. ಇದೇ ಪಂಜಾಬ್‌ ಸರ್ಕಾರ ಕೆಲವು ವರ್ಷಗಳ ಹಿಂದೆ ಹರ್ಮನ್‌ ಪೊಲೀಸ್‌ ಹುದ್ದೆಗೆ ಅರ್ಜಿ ಹಾಕಿದ್ದಾಗ ತಿರಸ್ಕರಿಸಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕೌರ್‌ ಫೈನಲ್‌ ಪಂದ್ಯದಲ್ಲಿ 51 ರನ್‌ ಬಾರಿಸಿದ್ದಾರೆ. ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 115 ಎಸೆತದಲ್ಲಿ 171 ರನ್‌ ಬಾರಿಸಿದ್ದಾರೆ. ಕೌರ್‌ ಸ್ಫೋಟಕ ಆಟದ ನೆರವಿನಿಂದ ಭಾರತ ಬಲಿಷ್ಠ ಎದುರಾಳಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿತು.

Advertisement

Udayavani is now on Telegram. Click here to join our channel and stay updated with the latest news.

Next