Advertisement

ವನಿತಾ ವಿಶ್ವಕಪ್‌ ಕ್ರಿಕೆಟ್‌: ಮಿಥಾಲಿ ಬಳಗಕ್ಕೆ ಇಂದು ಇಂಗ್ಲೆಂಡ್‌ ಎದುರಾಳಿ

11:36 PM Mar 15, 2022 | Team Udayavani |

ಮೌಂಟ್‌ ಮೌಂಗನುಯಿ: ಆಡಿದ ಎಲ್ಲ 3 ಪಂದ್ಯಗಳಲ್ಲಿ ಮುಗ್ಗರಿಸಿ ಬಿದ್ದಿರುವ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಬುಧವಾರ ವನಿತಾ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ನಿರ್ಣಾಯಕ ಪಂದ್ಯವನ್ನು ಆಡಲಿದೆ. ಎದುರಾಳಿ ಬೇರೆ ಯಾವುದೂ ಅಲ್ಲ, ರನ್ನರ್ ಅಪ್‌ ಭಾರತ!

Advertisement

2017ರ ಫೈನಲ್‌ನಲ್ಲಿ ಅಲ್ಪ ಅಂತರದಿಂದ ಇಂಗ್ಲೆಂಡಿಗೆ ಶರಣಾಗಿದ್ದ ಭಾರತಕ್ಕೆ ಚಾಂಪಿಯನ್‌ ಆಗುವ ಅವಕಾಶ ತಪ್ಪಿ ಹೋಗಿತ್ತು. ಈ ಬಾರಿ ಆಂಗ್ಲರೆದುರು ಲೀಗ್‌ ಹಂತ ದಲ್ಲೇ ಸೇಡು ತೀರಿಸಿಕೊಳ್ಳುವ ಅವಕಾಶ ಎದುರಾಗಿದೆ. ಸತತ 3 ಪಂದ್ಯಗಳನ್ನು ಸೋತು ಹೈರಾಣಾಗಿರುವ ಇಂಗ್ಲೆಂಡ್‌, ಭಾರತದೆದುರು ಕೂಡ ಪರಾಭವಗೊಂಡರೆ ನಾಕೌಟ್‌ ಪ್ರವೇಶದಿಂದ ವಂಚಿತವಾಗುವ ಸಾಧ್ಯತೆ ಹೆಚ್ಚಿದೆ. ಇಂಥದೊಂದು ಸುವರ್ಣಾವಕಾಶವನ್ನು ಮಿಥಾಲಿ ಪಡೆ ಬಿಟ್ಟುಕೊಡಬಾರದು.

ಇಂಗ್ಲೆಂಡ್‌ ಈಗಾಗಲೇ ಆಸ್ಟ್ರೇಲಿಯ ವಿರುದ್ಧ 12 ರನ್ನುಗಳಿಂದ, ವೆಸ್ಟ್‌ ಇಂಡೀಸ್‌ ವಿರುದ್ಧ 7 ರನ್ನುಗಳಿಂದ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ಗಳಿಂದ ಸೋತಿದೆ. ಎಲ್ಲವೂ ಸಣ್ಣ ಅಂತರದ ಸೋಲು. ಆದರೆ ಸೋಲು ಸೋಲೇ. ಈ ಸೋಲಿನ ಮೇಲೆ ಭಾರತವೂ ಒಂದು ಸೋಲಿನೇಟು ನೀಡಿದರೆ ನಮ್ಮವರ ಮುಂದಿನ ಹಾದಿ ಸುಗಮಗೊಳ್ಳಲಿದೆ.

ಕಳೆದ ಪಂದ್ಯದ ಜೋಶ್‌
ಪಾಕಿಸ್ಥಾನವನ್ನು ಮಣಿಸಿದ ಬಳಿಕ ಭಾರತ ತಂಡ ಆತಿಥೇಯ ನ್ಯೂಜಿಲ್ಯಾಂಡ್‌ ವಿರುದ್ಧ ಶೋಚನೀಯ ಆಟವಾಡಿತ್ತು. ಅಲ್ಲಿ ಡಾಟ್‌ ಬಾಲ್‌ಗ‌ಳದ್ದೇ ಸಿಂಹ ಪಾಲಾಗಿತ್ತು. ಹೀಗಾಗಿ ಎಲ್ಲ ದಿಕ್ಕುಗಳಿಂದಲೂ ಟೀಕೆ ಎದುರಿಸಬೇಕಾಗಿ ಬಂತು.

ಅನಂತರದ ಪಂದ್ಯದಲ್ಲಿ ವೆಸ್ಟ್‌ ಇಂಡೀಸನ್ನು ಎದುರಿಸುವಾಗ ಭಾರತದ ಮೇಲೆ ಈ ಸೋಲಿನ ಒತ್ತಡದ ಲವಲೇಶವೂ ಇರಲಿಲ್ಲ ಎಂಬುದೊಂದು ಪ್ಲಸ್‌ ಪಾಯಿಂಟ್‌. ಸ್ಮೃತಿ ಮಂಧನಾ ಮತ್ತು ಹರ್ಮನ್‌ಪ್ರೀತ್‌ ಕೌರ್‌ ಸೆಂಚುರಿ ಬಾರಿಸಿ ಮೆರೆದರು. ವಿಶ್ವಕಪ್‌ ಇತಿಹಾಸದಲ್ಲೇ ತನ್ನ ಗರಿಷ್ಠ ಮೊತ್ತ ದಾಖಲಿಸಿ ಮೆರೆದಾಡಿತು (8ಕ್ಕೆ 317).
ಇಂಗ್ಲೆಂಡ್‌ ವಿರುದ್ಧವೂ ಮಿಥಾಲಿ ಟೀಮ್‌ ಇದೇ ಬ್ಯಾಟಿಂಗ್‌ ಜೋಶ್‌ ತೋರಬೇಕಾದ ಅಗತ್ಯವಿದೆ. ಮುಂದೆ ಪ್ರಬಲ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾವನ್ನು ಎದುರಿಸಬೇಕಾದ ಸವಾಲು ಇರುವುದರಿಂದ ಆಂಗ್ಲರನ್ನು ಮಣಿಸಿ “ಸೇಫ್‌ ಝೋನ್‌’ನಲ್ಲಿರುವುದು ಭಾರತದ ಯೋಜನೆ ಆಗಬೇಕಿದೆ.

Advertisement

ಯಾಸ್ತಿಕಾ ಭಾಟಿಯಾ, ದೀಪ್ತಿ ಶರ್ಮ, ಮಿಥಾಲಿ ರಾಜ್‌ ಮತ್ತು ರಿಚಾ ಘೋಷ್‌ ಕೂಡ ಬ್ಯಾಟಿಂಗ್‌ ಲಯದಲ್ಲೇ ಇದ್ದಾರೆ. ಆದರೆ ಇವರೆಲ್ಲ ದೊಡ್ಡ ಮೊತ್ತ ಪೇರಿಸುವ ಜತೆಗೆ ಅತ್ಯುತ್ತಮ ಜತೆಯಾಟವನ್ನು ನಿಭಾಯಿಸಿವ ಅಗತ್ಯವಿದೆ.

ಇದನ್ನೂ ಓದಿ:ಐಪಿಎಲ್‌ ಆರಂಭಿಕ ಪಂದ್ಯಕ್ಕೆ ಸೂರ್ಯಕುಮಾರ್‌ ಅನುಮಾನ

ಆಲ್‌ರೌಂಡ್‌ ವಿಭಾಗದಲ್ಲೂ ಭಾರತ ಹಿಂದೆ ಬಿದ್ದಿಲ್ಲ. ಸ್ನೇಹ್‌ ರಾಣಾ ಮತ್ತು ಪೂಜಾ ವಸ್ತ್ರಾಕರ್‌ ಅವರ ಈ ವರೆಗಿನ ಪ್ರದರ್ಶನ ಅತ್ಯುತ್ತಮ ಮಟ್ಟದಲ್ಲಿದೆ. ಕೂಟದಲ್ಲಿ 7 ವಿಕೆಟ್‌ ಉರುಳಿಸಿ 3ನೇ ಸ್ಥಾನದಲ್ಲಿರುವ ಸ್ಪಿನ್ನರ್‌ ರಾಜೇಶ್ವರಿ ಗಾಯಕ್ವಾಡ್‌ ಕೂಡ ಮ್ಯಾಜಿಕ್‌ ಮಾಡುತ್ತಿದ್ದಾರೆ. ಜೂಲನ್‌ ಗೋಸ್ವಾಮಿ, ಮೇಘನಾ ಸಿಂಗ್‌ ಇನ್ನಷ್ಟು ಘಾತಕವಾಗಿ ಪರಿಣಮಿಸಬೇಕಿದೆ. ಕಳೆದ ಪಂದ್ಯದಲ್ಲಿ ವಿಂಡೀಸ್‌ ಆರಂಭಿಕರು ಜೂಲನ್‌ ದಾಳಿಯನ್ನು ಪುಡಿಗಟ್ಟಿದ್ದನ್ನು ಮರೆಯುವಂತಿಲ್ಲ,

ಕಳೆಗುಂದಿದ ಚಾಂಪಿಯನ್ಸ್‌
ಇಂಗ್ಲೆಂಡ್‌ ಇನ್ನೂ ಚಾಂಪಿಯನ್ನರ ಆಟವಾಡಿಲ್ಲ. ತಂಡ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಜತೆಗೆ ಫೀಲ್ಡಿಂಗ್‌ನಲ್ಲೂ ಘೋರ ವೈಫಲ್ಯ ಕಾಣುತ್ತಿದೆ. ಕೀಪಿಂಗ್‌ ಕೂಡ ಕಳಪೆಯಾಗಿದೆ. ಒಮ್ಮೆಲೇ ಈ ಎಲ್ಲ ವಿಭಾಗಗಳಲ್ಲಿ ಸುಧಾರಣೆ ತರುವುದು ಸುಲಭದ ಮಾತಲ್ಲ.

ಓಪನರ್‌ ಟಾಮಿ ಬ್ಯೂಮಂಟ್‌, ಸ್ಪಿನ್ನರ್‌ ಸೋಫಿ , ಆಲ್‌ರೌಂಡರ್‌ ನಥಾಲಿ ಸ್ಕಿವರ್‌ ಮಾತ್ರ ಈವರೆಗೆ ಪಾರವಾಗಿಲ್ಲ ಎನ್ನುವಂಥ ಪ್ರದರ್ಶನ ನೀಡಿದ್ದಾರೆ. ಒಂದು ತಂಡವಾಗಿ ಆಡದ ಹೊರತು ಇಂಗ್ಲೆಂಡ್‌ಗೆ ಗೆಲುವಿನ ಹಳಿ ಏರಲು ಸಾಧ್ಯವಾಗದು.

ಇಂದಿನ ಪಂದ್ಯ
ಭಾರತ-ಇಂಗ್ಲೆಂಡ್‌, ಸ್ಥಳ: ಮೌಂಟ್‌ ಮೌಂಗನುಯಿ
ಆರಂಭ: ಬೆ. 6.30, ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

 

Advertisement

Udayavani is now on Telegram. Click here to join our channel and stay updated with the latest news.

Next